ತೆಲುಗು ಚಿತ್ರರಂಗ ಅಪರೂಪದ ವಿದ್ಯಮಾನವೊಂದಕ್ಕೆ ಸಾಕ್ಷಿ ಆಗಲಿದೆ. ದಶಕಗಳಿಂದಲೂ ಕಾಯ್ದುಕೊಂಡು ಬಂದಿದ್ದ ವೈಷಮ್ಯಕ್ಕೆ ಬ್ರೇಕ್ ಹಾಕಿ ತೆಲುಗು ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ ನಟರು ಪರಸ್ಪರ ವೈಷಮ್ಯ ಬದಿಗಿಟ್ಟು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರನ್ನೂ ಒಟ್ಟಿಗೆ ಸೇರಿಸುತ್ತಿರುವುದು ಯಾರು? ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆಯೇ? ರಾಜಕಾರಣಕ್ಕೆ ಒಂದಾಗುತ್ತಿದ್ದಾರೆಯೇ? ಅಥವಾ ಬೇರೆ ಯಾವುದಾದರೂ ಕಾರ್ಯಕ್ರಮಕ್ಕಾಗಿ ಒಂದಾಗುತ್ತಿದ್ದಾರೆಯೇ? ಇದೆಲ್ಲ ತಿಳಿಯುವ ಮುನ್ನ ಆ ಇಬ್ಬರು ಸೂಪರ್ ಸ್ಟಾರ್ಗಳ ನಡುವಿನ ವೈಷಮ್ಯದ ಕಿರು ಪರಿಚಯ ಮಾಡಿಕೊಳ್ಳೋಣ.
ತೆಲುಗು ಚಿತ್ರರಂಗದ ಮೇಲೆ ಹಿಡಿತ ಹೊಂದಿರುವ ಕುಟುಂಬಗಳಲ್ಲಿ ಅತಿ ಮುಖ್ಯವಾದುವೆಂದರೆ ಎನ್ಟಿಆರ್ ಕುಟುಂಬ ಅಥವಾ ನಂದಮೂರಿ ಕುಟುಂಬ ಮತ್ತು ಮೆಗಾ ಕುಟುಂಬ. ನಂದಮೂರಿ ಕುಟುಂಬಕ್ಕೆ ಹಿಂದೆ ಸೀನಿಯರ್ ಎನ್ಟಿಆರ್ ಪ್ರಮುಖರಾಗಿದ್ದರು. ಅವರ ಕಾಲಾ ನಂತರ ನಂದಮೂರಿ ಬಾಲಕೃಷ್ಣ ಅವರದ್ದೇ ಮುಂದಾಳತ್ವ. ಇನ್ನು ಮೆಗಾ ಫ್ಯಾಲಿಮಿಗೆ, ಮೆಗಾ ಸ್ಟಾರ್ ಚಿರಂಜೀವಿ ಪ್ರಮುಖ. ಚಿರಂಜೀವಿ ಹಾಗೂ ಬಾಲಕೃಷ್ಣ ಬಹುತೇಕ ಒಂದೇ ಸಮಯದಲ್ಲಿ ನಾಯಕರಾದರು. ಇಬ್ಬರೂ ಸಹ ತಮ್ಮ ಅಭಿನಯ ಪ್ರತಿಭೆಯಿಂದ ತೆಲುಗು ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಆದರೆ ಆರಂಭದಿಂದಲೂ ಚಿರಂಜೀವಿ ಹಾಗೂ ಬಾಲಕೃಷ್ಣಗೆ ಬಾಕ್ಸ್ ಆಫೀಸ್ನಲ್ಲಿ ಸ್ಪರ್ಧೆ ಇದ್ದೇ ಇದೆ.
ನಂದಮೂರಿ ಅಭಿಮಾನಿಗಳು-ಮೆಗಾ ಅಭಿಮಾನಿಗಳು ಅದೆಷ್ಟೋ ಬಾರಿ ಕೈ-ಕೈ ಮಿಲಾಯಿಸಿದ್ದಿದೆ. ಇವರಿಬ್ಬರ ಸಿನಿಮಾಗಳನ್ನ ಉದ್ದೇಶಪೂರ್ವಕವಾಗಿ ಒಟ್ಟಿಗೆ ಬಿಡುಗಡೆ ಮಾಡಿ ಯಾವುದು ಹೆಚ್ಚು ಗಳಿಕೆ ಮಾಡಿದೆ ಎಂಬುದರ ಆಧಾರದಲ್ಲಿ ಪರಸ್ಪರರನ್ನು ಹೀಗಳೆದಿದ್ದು ಇದೆ. ಎಷ್ಟೋ ವೇದಿಕೆಗಳಲ್ಲಿ ನಂದಮೂರಿ ಕುಟುಂಬದ ಕೆಲ ನಾಯಕರು, ಮೆಗಾ ಫ್ಯಾಮಿಲಿಯನ್ನು ಬಹಿರಂಗವಾಗಿ ಅಣಕಿಸಿದ್ದೂ ಸಹ ಇದೆ. ದಶಕಗಳಿಂದಲೂ ಈ ಎರಡು ಕುಟುಂಬಗಳು ಸಿನಿಮಾಗಳ ಮೂಲಕ ವೈಷಮ್ಯ ಸಾಧಿಸಿಕೊಂಡೆ ಬಂದಿವೆ. ಆದರೆ ಆ ವೈಷಮ್ಯವನ್ನು ಒಡೆದು ಹಾಕಿದ್ದು ನಂದಮೂರಿ ಕುಟುಂಬದ ಜೂ ಎನ್ಟಿಆರ್ ಮತ್ತು ಮೆಗಾ ಕುಟುಂಬದ ರಾಮ್ ಚರಣ್.
ಈ ಇಬ್ಬರೂ ಪರಸ್ಪರ ಆತ್ಮೀಯ ಗೆಳೆಯರಾಗುವ ಮೂಲಕ ಆ ವೈಷಮ್ಯವನ್ನು ತೊಡೆದು ಹಾಕಿದರು. ಅದಾದ ಬಳಿಕ ನಂದಮೂರಿ ಕುಟುಂಬದ ಫೈರ್ ಬ್ರ್ಯಾಂಡ್ ಬಾಲಕೃಷ್ಣ ಸಹ ತುಸು ಮೆತ್ತಗಾದರು. ರಾಜಕೀಯ ಕಾರಣಗಳಿಗೋಸ್ಕರ ಮೆಗಾ ಫ್ಯಾಮಿಲಿ ಪರವಾಗಿ ಮೃದು ಧೋರಣೆ ತಳೆದು ತಾವು ನಡೆಸುತ್ತಿರುವ ಟಾಕ್ ಶೋಗೆ ನಟ ಚಿರಂಜೀವಿ ಅವರ ಸಹೋದರ ಪವನ್ ಕಲ್ಯಾಣ್ ಅವರನ್ನು ಅತಿಥಿಯನ್ನಾಗಿ ಕರೆದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಾಲಕೃಷ್ಣ ಹಾಗೂ ಚಿರಂಜೀವಿ ಒಟ್ಟಿಗೆ ಸೇರುತ್ತಿದ್ದಾರೆ.
ಇದನ್ನೂ ಓದಿ:ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪವನ್ ಕಲ್ಯಾಣ್, ರಾಮ್ ಚರಣ್, ಚಿರಂಜೀವಿ
ಹೌದು, ಚಿತ್ರರಂಗದ ಇತಿಹಾಸದಲ್ಲಿಯೇ ನಡೆಯದ ಘಟನೆ ಇದು. ಕೇವಲ ತೆಲುಗು ಚಿತ್ರರಂಗದ ಕಲ್ಯಾಣ ಕಾರ್ಯಕ್ರಮಕ್ಕಾಗಿ ಮಾಡಲಾಗಿದ್ದ ವಿಡಿಯೋನಲ್ಲಿ ಮಾತ್ರ ಒಟ್ಟಿಗೆ ಕಾಣಿಸಿಕೊಂಡಿದ್ದ ಬಾಲಕೃಷ್ಣ ಹಾಗೂ ಚಿರಂಜೀವಿ ಇದೀಗ ಮೊದಲ ಬಾರಿಗೆ ಒಟ್ಟಿಗೆ ಒಂದೇ ಬಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾಲಕೃಷ್ಣ ನಡೆಸಿಕೊಡುತ್ತಿರುವ ‘ಅನ್ಸ್ಟಾಪೆಬಲ್ ಬಾಲಯ್ಯ’ ಶೋ ಭಾರಿ ಜನಪ್ರಿಯಗೊಂಡಿದ್ದು, ಶೀಘ್ರವೇ ಈ ಶೋನ ಮೂರನೇ ಸೀಸನ್ ಆಹಾ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಶೋನ ಮೊದಲ ಅತಿಥಿಯಾಗಿ ನಟ ಮೆಗಾಸ್ಟಾರ್ ಚಿರಂಜೀವಿಯನ್ನು ಕರೆಸಲಾಗುತ್ತಿದೆ. ಆ ಮೂಲಕ ದಶಕಗಳ ವೈಷಮ್ಯಕ್ಕೆ ಬ್ರೇಕ್ ಹಾಕಿ ಬಾಲಯ್ಯ ಹಾಗೂ ಚಿರಂಜೀವಿ ಗೆಳೆಯರಾಗಿ ಎಲ್ಲರೆದುರು ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಶೀಘ್ರವೇ ಪ್ರಾರಂಭವಾಗಲಿದ್ದು, ಚಿರಂಜೀವಿ ಮತ್ತು ಅವರ ಪತ್ನಿ ಸುರೇಖ ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದೇ ಶೋಗೆ ಈ ಹಿಂದೆ ನಟರಾದ ಪವನ್ ಕಲ್ಯಾಣ್, ಪ್ರಭಾಸ್, ಮಹೇಶ್ ಬಾಬು, ಅಲ್ಲು ಅರ್ಜುನ್, ಇನ್ನೂ ಹಲವಾರು ಮಂದಿ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ಶೋ ‘ಆಹಾ’ ಒಟಿಟಿಯಲ್ಲಿ ಪ್ರದರ್ಶನಗೊಳ್ಳಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ