ತೆಲುಗು ನಟ ಹಾಗೂ ರಾಜಕಾರಣಿ ನಂದಮೂರಿ ತಾರಕ ರತ್ನ (Nandamuri Taraka Ratna) ಅವರಿಗೆ ಶುಕ್ರವಾರ (ಜನವರಿ 28) ಹೃದಯಾಘಾತ ಸಂಭವಿಸಿತ್ತು. ಆಂಧ್ರ ಪ್ರದೇಶದ ಕುಪ್ಪಂನಲ್ಲಿ (Kuppam) ನಡೆದ ಪಾದಯಾತ್ರೆಯಲ್ಲಿ ಭಾಗಿ ಆಗುತ್ತಿದ್ದಂತೆ ಅವರಿಗೆ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿತು. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ನಂದಮೂರಿ ತಾರಕ ರತ್ನ ಅವರನ್ನು ಕರೆತರಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್ ಅವರು ಕುಪ್ಪಂನಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಭಾಗಿಯಾದಾಗ ತಾರಕ ರತ್ನ ಅವರು ಅಸ್ವಸ್ಥರಾದರು. ಅವರಿಗೆ ಹೃದಯಾಘಾತವಾಗಿದೆ ಎಂಬುದು ಬಳಿಕ ತಿಳಿದಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ನೋಡಿ ಅಭಿಮಾನಿಗಳು ಆತಂಕಗೊಂಡಿದ್ದರು. ಆರಂಭದಲ್ಲಿ ಹದಗೆಟ್ಟಿದ್ದ ಆರೋಗ್ಯ ಈಗ ಕೊಂಚ ಚೇತರಿಕೆ ಕಂಡಿದೆ ಎನ್ನಲಾಗಿದೆ.
ಆರಂಭದಲ್ಲಿ ಕುಪ್ಪಂನ ಆಸ್ಪತ್ರೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ಈಗ ನಾರಾಯಣ ಹೃದಯಾಲಯದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯದ ಬಗ್ಗೆ ಆಸ್ಪತ್ರೆ ಕಡೆಯಿಂದ ಹೆಲ್ತ್ ಬುಲೆಟಿನ್ ಸಿಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಜೊತೆಗೆ ಅವರು ಬೇಗ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ: ನಟ ನಂದಮೂರಿ ತಾರಕ ರತ್ನ ತೀವ್ರ ಅಸ್ವಸ್ಥ; ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ತಾರಕ ರತ್ನ ಅವರು 2002ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಒಕಟೋ ನಂಬರ್ ಕುರ್ರಾಡು’ ಅವರ ಮೊದಲ ಸಿನಿಮಾ. ‘ಯುವ ರತ್ನ’, ‘ತಾರಕ್’, ‘ಭದ್ರಾದಿ ರಾಮುಡು’, ‘ನಂದೀಶ್ವರಡು’ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಅವರು ಟಾಲಿವುಡ್ನಲ್ಲಿ ಖ್ಯಾತಿ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:36 am, Sat, 28 January 23