2015ರಲ್ಲಿ ಚಿತ್ರರಂಗ ತೊರೆಯಬೇಕೆಂದುಕೊಂಡಿದ್ದ ಕೀರವಾಣಿ; ಆ ವರ್ಷ ನಡೆಯಿತು ಚಮತ್ಕಾರ
90ರ ದಶಕದಲ್ಲೇ ಎಂ.ಎಂ. ಕೀರವಾಣಿ ಅವರು ಸಂಗೀತ ನಿರ್ದೇಶಕನಾಗಿ ವೃತ್ತಿ ಬದುಕು ಆರಂಭಿಸಿದರು. 2001ರಲ್ಲಿ ಬಂದ ರಾಜಮೌಳಿ ನಿರ್ದೇಶನದ ‘ಸ್ಟುಡೆಂಟ್ ನಂಬರ್ 1’ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜನೆ ಮಾಡಿದರು.
ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ (M. M. Keeravani) ಅವರು ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅವರು ಸಂಗೀತ ಸಂಯೋಜನೆ ಮಾಡಿರುವ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು (Naatu Naatu Song) ಆಸ್ಕರ್ ರೇಸ್ನಲ್ಲಿದೆ. ‘ಗೋಲ್ಡನ್ ಗ್ಲೋಬ್ ಅವಾರ್ಡ್’ ಬಳಿಕ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಮೇಲೆ ಕೀರವಾಣಿ ಅವರು ಕಣ್ಣಿಟ್ಟಿದ್ದಾರೆ. ಅಚ್ಚರಿಯ ವಿಚಾರ ಎಂದರೆ 2015ರಲ್ಲೇ ಚಿತ್ರರಂಗ ತೊರೆಯಬೇಕು ಎಂದು ಕೀರವಾಣಿ ಅಂದುಕೊಂಡಿದ್ದರಂತೆ.
90ರ ದಶಕದಲ್ಲೇ ಎಂ.ಎಂ. ಕೀರವಾಣಿ ಅವರು ಸಂಗೀತ ನಿರ್ದೇಶಕನಾಗಿ ವೃತ್ತಿ ಬದುಕು ಆರಂಭಿಸಿದರು. 2001ರಲ್ಲಿ ಬಂದ ರಾಜಮೌಳಿ ನಿರ್ದೇಶನದ ‘ಸ್ಟುಡೆಂಟ್ ನಂಬರ್ 1’ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜನೆ ಮಾಡಿದರು. ಅಲ್ಲಿಂದ ರಾಜಮೌಳಿ ಹಾಗೂ ಕೀರವಾಣಿ ಜುಗಲ್ಬಂದಿ ಶುರುವಾಯಿತು.
ಕೀರವಾಣಿ 2015ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ಕಳೆದಿದ್ದವು. ಹೀಗಾಗಿ, ಅವರು ನಿವೃತ್ತಿ ಪಡೆಯುವ ಆಲೋಚನೆಯಲ್ಲಿದ್ದರು. 2015ರಲ್ಲಿ ತೆರೆಗೆ ಬಂದ ‘ಬಾಹುಬಲಿ 1’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ಕೀರವಾಣಿ ಅವರೇ ಸಂಗೀತ ಸಂಯೋಜನೆ ಮಾಡಿದ್ದರು. ಇದು ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿತು. ಹೀಗಾಗಿ, ಅವರು ಚಿತ್ರರಂಗದಲ್ಲಿ ಮುಂದುವರಿದರು.
ಈ ಬಗ್ಗೆ ಮಾತನಾಡಿರುವ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು, ‘2015ರಲ್ಲಿ ಕೀರವಾಣಿ ನಿವೃತ್ತಿ ಹೊಂದಬೇಕು ಎಂದುಕೊಂಡಿದ್ದರು. ಆದರೆ, ಅವರ ವೃತ್ತಿ ಜೀವನ ಆರಂಭ ಆಯಿತು. ಕೆಲವರು ಜೀವನ ಮುಗಿಯಿತು ಎಂದುಕೊಳ್ಳುತ್ತಾರೆ. ಕೆಲವೊಮ್ಮೆ ಅಲ್ಲಿಂದ ಜೀವನ ಆರಂಭ ಆಗಬಹುದು’ ಎಂದಿದ್ದಾರೆ.
ಆಸ್ಕರ್ ರೇಸ್ನಲ್ಲಿ ನಾಟು ನಾಟು
‘ನಾಟು ನಾಟು..’ ಹಾಡು ಈ ಬಾರಿಯ ಆಸ್ಕರ್ಗೆ ನಾಮನಿರ್ದೇಶನಗೊಂಡಿದೆ. ಈ ಚಿತ್ರಕ್ಕೆ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದ್ರಬೋಸ್ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
‘ಲಿಫ್ಟ್ ಮಿ ಅಪ್’ ಹಾಡು ರೇಸ್ನಲ್ಲಿದೆ. ಇದು ಇಂಗ್ಲಿಷ್ ಹಾಡು. ಇದನ್ನು ಗಾಯಕಿ ರಿಯಾನ ಅವರು ಹಾಡಿದ್ದಾರೆ. ಇಂಗ್ಲಿಷ್ನ ‘ದಿಸ್ ಈಸ್ ಲೈಫ್’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಕೂಡ ರೇಸ್ನಲ್ಲಿದೆ.
ಇದನ್ನೂ ಓದಿ: Oscar 2023 Nomination: ಆಸ್ಕರ್ ನಾಮಿನೇಷನ್ ಲಿಸ್ಟ್ ಪ್ರಕಟ; ಭಾರತಕ್ಕೆ ಬಂಪರ್ ಚಾನ್ಸ್
‘ಗೋಲ್ಡನ್ ಗ್ಲೋಬ್ಸ್ 2023’ರಲ್ಲಿ ‘ನಾಟು ನಾಟು..’ ಹಾಡಿಗೆ ಪ್ರಶಸ್ತಿ ಸಿಕ್ಕಿರುವುದರಿಂದ ಈ ಹಾಡಿಗೆ ಈ ಬಾರಿ ಆಸ್ಕರ್ ಒಲಿಯುವ ಸಾಧ್ಯತೆ ಹೆಚ್ಚಿದೆ ಎಂದು ಅನೇಕರು ಊಹಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ