‘ನೀವು ಜೈ​ ಭೀಮ್​ ಸಿನಿಮಾ ನೋಡಿದ್ದೀರೋ ಇಲ್ಲವೋ?’; ರಾಷ್ಟ್ರ ಪ್ರಶಸ್ತಿ ಜ್ಯೂರಿಗಳಿಗೆ ನಾನಿ ಪ್ರಶ್ನೆ

‘ಜೈ ಭೀಮ್​’ ಸಿನಿಮಾದಲ್ಲಿ ಕಾಲಿವುಡ್​ ನಟ ಸೂರ್ಯ ಅವರು ಲಾಯರ್​ ಪಾತ್ರ ಮಾಡಿದ್ದಾರೆ. ಹಿಂದುಳಿದ ವರ್ಗದ ಮೇಲೆ ನಡೆದ ಶೋಷಣೆಯನ್ನು ಈ ಸಿನಿಮಾ ತೆರೆದಿಡುತ್ತದೆ. ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗದೇ ಇರುವುದಕ್ಕೆ ನಾನಿ ಅವರು ಬೇಸರ ವ್ಯಕ್ತಪಡಿಸಿದ್ದರು. ಆದರೆ ಅವರ ಹೇಳಿಕೆಯನ್ನು ಕೆಲವರು ಖಂಡಿಸಿದ್ದರು.

‘ನೀವು ಜೈ​ ಭೀಮ್​ ಸಿನಿಮಾ ನೋಡಿದ್ದೀರೋ ಇಲ್ಲವೋ?’; ರಾಷ್ಟ್ರ ಪ್ರಶಸ್ತಿ ಜ್ಯೂರಿಗಳಿಗೆ ನಾನಿ ಪ್ರಶ್ನೆ
ನಾನಿ
Follow us
ಮದನ್​ ಕುಮಾರ್​
|

Updated on: Nov 09, 2023 | 3:18 PM

ನಟ ನಾನಿ (Nani) ಅವರು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೂ ಕೂಡ ಅವರು ಭಾಷೆಯ ಗಡಿ ಹಾಕಿಕೊಂಡು ಬದುಕಿಲ್ಲ. ತಮಿಳು ಸಿನಿಮಾಗಳ ಪರವಾಗಿಯೂ ಅವರು ಮಾತನಾಡಿದ್ದಾರೆ. ಈ ವರ್ಷ ರಾಷ್ಟ್ರ ಪ್ರಶಸ್ತಿ (National Film Award) ಪಟ್ಟಿ ಘೋಷಣೆ ಆದಾಗ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ತಮಿಳಿನ ‘ಜೈ ಭೀಮ್​’ (Jai Bhim) ಸಿನಿಮಾಗೆ ಯಾಕೆ ಪ್ರಶಸ್ತಿ ಬಂದಿಲ್ಲ ಎಂದು ಅವರು ಪ್ರಶ್ನೆ ಎತ್ತಿದ್ದರು. ಆ ವಿಚಾರ ಈಗ ಮತ್ತೆ ಚರ್ಚೆಗೆ ಬಂದಿದೆ. ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ, ‘ಜೈ ಭೀಮ್​’ ಚಿತ್ರದ ಬಗ್ಗೆ ತಮ್ಮ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದರು ಎಂದು ಕೂಡ ನಾನಿ ಹೇಳಿದ್ದಾರೆ.

‘ಇಂಡಿಯಾ ಟುಡೇ ರೌಂಡ್​ ಟೇಬಲ್​ ತೆಲಂಗಾಣ’ ವೇದಿಕೆಯಲ್ಲಿ ನಾನಿ ಅವರು ಈ ಕುರಿತು ಮಾತನಾಡಿದ್ದಾರೆ. ‘ಜೈ ಭೀಮ್​’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಮಿಸ್​ ಆಗಿದ್ದಾಗ ನಾನಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ಜೈ ಭೀಮ್​’ ಎಂದು ಬರೆದುಕೊಂಡು ಅದರ ಎದುರು ಒಡೆದ ಹೃದಯದ ಎಮೋಜಿ ಪೋಸ್ಟ್​ ಮಾಡಿದ್ದರು. ಈ ಬಗ್ಗೆ ತೆಲುಗು ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ತೆಲುಗು ಸಿನಿಮಾಗಳ ಬದಲಿಗೆ ನಾನಿ ಅವರು ತಮಿಳು ಸಿನಿಮಾ ಪರವಾಗಿ ಪೋಸ್ಟ್​ ಮಾಡಿದ್ದೇ ಅದಕ್ಕೆ ಕಾರಣ. ಆ ಬಗ್ಗೆ ಅವರೀಗ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ‘ನನ್ನ ಮಗನಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಂತೆ ಅನಿಸುತ್ತಿದೆ’; ಪ್ರಕಾಶ್ ರಾಜ್ ಹೀಗೆ ಹೇಳಿದ್ದು ಏಕೆ?

‘ನಾನು ಮಾಡಿದ ಪೋಸ್ಟ್​ ಅನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಯಿತು. ತೆಲುಗು ಸಿನಿಮಾಗಳು ಮಾಡಿದ ಸಾಧನೆ ಬಗ್ಗೆ ನನಗೆ ಖುಷಿ ಇದೆ. ರಾಷ್ಟ್ರ ಪ್ರಶಸ್ತಿ ಗೆದ್ದ ಅಲ್ಲು ಅರ್ಜುನ್​, ಪುಷ್ಪ ಸಿನಿಮಾ ಹಾಗೂ ಆರ್​ಆಆರ್​ಆರ್​ ಚಿತ್ರತಂಡದವರಿಗೆ ನಾನು ಅಭಿನಂದನೆ ತಿಳಿಸಿದ್ದೇನೆ. ನಾನು ನೋಡಿದ ಅತ್ಯುತ್ತಮ ಸಿನಿಮಾಗಳಲ್ಲಿ ಜೈ ಭೀಮ್​ ಕೂಡ ಒಂದು. ಆ ಸಿನಿಮಾ ನೋಡಿದ ನಂತರ ನಾನು ಟ್ವೀಟ್​ ಮಾಡಿದ್ದೆ. ಆ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯ ಯಾವುದೇ ವಿಭಾಗದಲ್ಲಿ ಒಂದೇ ಒಂದು ಅವಾರ್ಡ್​ ಕೂಡ ಬಂದಿಲ್ಲ ಎಂದಾಗ ನೀವು (ಜ್ಯೂರಿ) ಆ ಸಿನಿಮಾ ನೋಡಿದ್ದೀರೋ ಇಲ್ಲವೋ ಅಂತ ಪ್ರಶ್ನೆ ಮೂಡಿತು’ ಎಂದು ನಾನಿ ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ಪಡೆದ ಖುಷಿಯಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ನಟಿ ಪಲ್ಲವಿ ಜೋಶಿ

‘ಒಂದು ಕಡೆ ನನ್ನ ತಂಗಿಗೆ ಒಳ್ಳೆಯ ಮಾರ್ಕ್ಸ್​ ಬರುತ್ತದೆ. ಇನ್ನೊಂದು ಕಡೆ ನನ್ನ ಕಸಿನ್​ಗೆ ಅದು ಸಿಗದೇ ಇದ್ದಾಗ ನನ್ನ ತಂಗಿಯ ಬಗ್ಗೆ ನಾನು ಸಂತೋಷ ವ್ಯಕ್ತಪಡಿಸುವುದರ ಜೊತೆಗೆ ಕಸಿನ್​ಗೆ ಯಾಕೆ ಸಿಗಲಿಲ್ಲ ಎಂಬುದರ ಬಗ್ಗೆ ಕಾಳಜಿ ಕೂಡ ವ್ಯಕ್ತಪಡಿಸುತ್ತೇನೆ. ಅದೇ ರೀತಿ ಜೈ ಭೀಮ್​ ಸಿನಿಮಾ ಬಗ್ಗೆ ನಾನು ಹೇಳಿದ್ದು. ಅದು ಒಂದು ಶ್ರೇಷ್ಠ ಸಿನಿಮಾ. ಅದರ ಬಗ್ಗೆ ನಾನು ಪೋಸ್ಟ್ ಮಾಡಿದಾಗ ತೆಲುಗು ಸಿನಿಮಾ ಪ್ರಶಸ್ತಿ ಗೆದ್ದಿದ್ದಕ್ಕೆ ನಾನಿಗೆ ಖುಷಿಯಾಗಿಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ಬರೆದರು. ನನಗೆ ಖುಷಿಯಾಗಿಲ್ಲ ಎಂದು ನಾನು ಯಾವಾಗ ಹೇಳಿದೆ? ಬೇರೆ ಭಾಷೆಯಲ್ಲೂ ಒಳ್ಳೆಯ ಸಿನಿಮಾ ಮಾಡಿದವರಿಗೆ ಪ್ರೋತ್ಸಾಹ ನೀಡಬೇಕು’ ಎಂದು ನಾನಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.