ಮೂವರು ಸ್ಟಾರ್ ನಟರನ್ನು ಒಂದುಗೂಡಿಸಲಿರುವ ‘ಮಫ್ತಿ’ ನಿರ್ದೇಶಕ ನರ್ತನ್

Narthan: ‘ಮಫ್ತಿ’ ಸಿನಿಮಾ ಮೂಲಕ ಭರವಸೆ ಮೂಡಿಸಿ ಈಗ ‘ಭೈರತಿ ರಣಗಲ್’ ಸಿನಿಮಾ ಮೂಲಕ ನಿರೀಕ್ಷೆಯನ್ನು ಉಳಿಸಿಕೊಂಡಿರುವ ನರ್ತನ್ ಇದೀಗ ಪರಭಾಷೆಗೆ ಕಾಲಿಡುತ್ತಿದ್ದಾರೆ. ಇಬ್ಬರು ದೊಡ್ಡ ಸ್ಟಾರ್​ ನಟರಿಗಾಗಿ ಸಿನಿಮಾ ಮಾಡಲಿದ್ದಾರೆ.

ಮೂವರು ಸ್ಟಾರ್ ನಟರನ್ನು ಒಂದುಗೂಡಿಸಲಿರುವ ‘ಮಫ್ತಿ’ ನಿರ್ದೇಶಕ ನರ್ತನ್
Follow us
ಮಂಜುನಾಥ ಸಿ.
|

Updated on:Nov 27, 2024 | 11:24 AM

‘ಮಫ್ತಿ’ ಸಿನಿಮಾ ಮೂಲಕ ಭರವಸೆ ಮೂಡಿಸಿ, ಈಗ ‘ಭೈರತಿ ರಣಗಲ್’ ಸಿನಿಮಾ ಮೂಲಕ ನಿರೀಕ್ಷೆ ಉಳಿಸಿಕೊಂಡಿರುವ ನಿರ್ದೇಶಕ ನರ್ತನ್ ಇದೀಗ ಪರಭಾಷೆಗೆ ಕಾಲಿಡುತ್ತಿದ್ದಾರೆ. ಈ ಹಿಂದೆ ನರ್ತನ್, ಯಶ್​ಗಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಕೈಗೂಡಿರಲಿಲ್ಲ. ಆದರೆ ಇದೀಗ ನರ್ತನ್ ನೇರವಾಗಿ ಪರಭಾಷೆಗೆ ಹಾರಿದ್ದು, ಎರಡು ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್​ಗಳನ್ನು ಹಾಕಿಕೊಂಡು ಭಾರಿ ಬಜೆಟ್​ನ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

ಯಶ್​ ಜೊತೆಗಿನ ಸಿನಿಮಾ ಕೈಗೂಡದಿದ್ದಾಗ ನರ್ತನ್, ರಾಮ್ ಚರಣ್​ಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ನರ್ತನ್ ಹಾಗೂ ರಾಮ್ ಚರಣ್ ಸಿನಿಮಾ ಇನ್ನೇನು ಪ್ರಾರಂಭವಾಗಲಿದೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಮುಂದೂಡಲ್ಪಟ್ಟಿತ್ತು. ಇದೀಗ ‘ಭೈರತಿ ರಣಗಲ್’ ಸಿನಿಮಾ ಮುಗಿಸಿ ಸಜ್ಜಾಗಿರುವ ನರ್ತನ್, ರಾಮ್ ಚರಣ್​ಗಾಗಿ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಸೂರ್ಯ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ನರ್ತನ್, ‘ನನ್ನ ಮುಂದಿನ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ. ಸಿನಿಮಾದ ಮುಖ್ಯ ಪಾತ್ರಗಳ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸೂರ್ಯ ಮತ್ತು ರಾಮ್ ಚರಣ್ ಅವರು ನಮ್ಮ ಸಿನಿಮಾಕ್ಕೆ ಸೂಕ್ತ ಎಂದುಕೊಂಡಿದ್ದೇವೆ. ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟರೊಬ್ಬರು ಸಹ ನಟಿಸುವ ಸಾಧ್ಯತೆ ಇದೆ. ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯಕ್ಕೆ ನಿರ್ಮಾಣ ಸಂಸ್ಥೆ ಮಾತ್ರವೇ ಫೈನಲ್ ಆಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ತಮಿಳು ಸ್ಟಾರ್ ನಟನಿಗೆ ಸಿನಿಮಾ ಮಾಡಲಿದ್ದಾರೆ ನರ್ತನ್, ಕೆವಿಎನ್ ನಿರ್ಮಾಣ

ರಾಮ್ ಚರಣ್ ಪ್ರಸ್ತುತ ತೆಲುಗಿನ ಬುಚ್ಚಿಬಾಬು ಸನಾ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಪ್ರಾರಂಭವಾಗಿದೆ. ಅದಾದ ಬಳಿಕ ನರ್ತನ್ ಜೊತೆಗಿನ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ ರಾಮ್ ಚರಣ್. ಇನ್ನು ಸೂರ್ಯ ಸಹ ಇತ್ತೀಚೆಗಷ್ಟೆ ‘ಕಂಗುವ’ ಸಿನಿಮಾ ಮುಗಿಸಿದ್ದು, ಇದೀಗ ಹೊಸ ಪ್ರಾಜೆಕ್ಟ್ ಪ್ರಾರಂಭ ಮಾಡಲಿದ್ದಾರೆ. ಆ ಸಿನಿಮಾದ ಬಳಿಕ ನರ್ತನ್​ರ ಸಿನಿಮಾದಲ್ಲಿ ನಟಿಸಲಿದ್ದಾರೆ.

ಕೆಲ ಮೂಲಗಳ ಪ್ರಕಾರ, ನರ್ತನ್​, ಯಶ್​ಗಾಗಿ ಮಾಡಿದ್ದ ಕತೆಯನ್ನೇ ಈಗ ರಾಮ್ ಚರಣ್​ ಹಾಗೂ ಸೂರ್ಯ ಅವರಿಗಾಗಿ ಮಾಡುತ್ತಿದ್ದಾರೆ. ಮೂಲ ಕತೆಯನ್ನು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ. ‘ಭೈರತಿ ರಣಗಲ್’ ಸಿನಿಮಾದ ಯಶಸ್ಸನ್ನು ಎಂಜಾಯ್ ಮಾಡುತ್ತಿರುವ ನರ್ತನ್ ಸಣ್ಣ ಗ್ಯಾಪ್ ಬಳಿಕ ರಾಮ್ ಚರಣ್-ಸೂರ್ಯ ಸಿನಿಮಾದ ಪ್ರೀ ಪ್ರೊಡಕ್ಷನ್ ಆರಂಭ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Wed, 27 November 24