
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ದೆಹಲಿಯ ವಿಜ್ಞಾನ ಭವನ ಸಭಾಂಗಣಗಳಲ್ಲಿ ಕೊಡುವ ರೂಢಿ ದಶಕಗಳಿಂದ ನಡೆದುಕೊಂಡು ಬರುತ್ತಿದೆ. ಇಲ್ಲೇ ರಾಷ್ಟ್ರಪತಿಯವರು ಆ ವರ್ಷದ ಅತ್ಯುತ್ತಮ ಸಿನಿಮಾ, ನಟ-ನಟಿಯರು, ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ವಿತರಿಸುತ್ತಾ ಬಂದಿದ್ದರು. ಆದರೆ ಈ ಪದ್ಧತಿಗೆ ಇತಿಶ್ರೀ ಹಾಡಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ನಿರ್ಧರಿಸಿದೆ. ಸಭಾಂಗಣದ ನಾಲ್ಕು ಗೋಡೆಗಳ ನಡುವೆ ಮಾಡಲಾಗುತ್ತಿದ್ದ ಈ ಮಹತ್ವದ ಕಾರ್ಯವನ್ನು ಜನರ ನಡುವೆ ತೆಗೆದುಕೊಂಡು ಹೋಗಲು ಇಲಾಖೆ ನಿರ್ಧರಿಸಿದ್ದು, ಮೊದಲ ಹೆಜ್ಜೆಯಾಗಿ ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ‘ಏಕತಾ ನಗರ’ದಲ್ಲಿ ಮಾಡುವ ನಿರ್ಧಾರ ಪ್ರಕಟಿಸಲಾಗಿದೆ.
ಈ ಕುರಿತು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದಿರುವ ಅವರು, ಸಿನಿಮಾ ಮತ್ತು ಪ್ರವಾಸೋದ್ಯಮವನ್ನು ಒಟ್ಟಿಗೆ ಜೋಡಿಸುವ ಮೂಲಕ ಪ್ರವಾಸಿ ತಾಣಗಳಿಗೆ ವ್ಯಾಪಕ ಉತ್ತೇಜನ ನೀಡಲಾಗುವುದು, ವಿಶ್ವಪ್ರಸಿದ್ಧ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಇರುವ ಏಕತಾ ನಗರದಲ್ಲಿ ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಸ್ವತಃ ರಾಷ್ಟ್ರಪತಿಗಳು ಹಾಗೂ ದೇಶದ ನಟ-ನಟಿಯರು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಈ ಬಾರಿ ಮಾತ್ರವೇ ಅಲ್ಲದೆ ಮುಂದಿನ ಪ್ರತಿ ವರ್ಷವೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಪ್ರವಾಸಿ ತಾಣಗಳಲ್ಲಿಯೇ ಮಾಡಲು ಕೇಂದ್ರ ಇಚ್ಛಿಸಿದ್ದು, ಇದಕ್ಕಾಗಿ ದೇಶದ ಎಲ್ಲ ರಾಜ್ಯಗಳು ತಮ್ಮ ಅತ್ಯುತ್ತಮ ಪ್ರವಾಸಿ ತಾಣಗಳ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ಆಯಾ ರಾಜ್ಯಗಳು ತಮ್ಮ ಪ್ರವಾಸಿ ತಾಣಗಳು ಹಾಗೂ ಅಲ್ಲಿನ ಸಂಪನ್ಮೂಲ, ಅನುಕೂಲತೆಗಳನ್ನು ಪಟ್ಟಿ ಮಾಡಿ ಕಳಿಸುವಂತೆ ಸಚಿವರು ಕೋರಿದ್ದು, ಮುಂದಿನ ಸಮಾರಂಭಗಳಿಗೆ ಸೂಕ್ತವಾದ ರಾಜ್ಯಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡ ‘ಆರ್ಟಿಕಲ್ 370’
ಈ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಏಕತಾ ನಗರದಲ್ಲಿ ಇಂದೇ (ಸೆಪ್ಟೆಂಬರ್ 22) ನಡೆಯಲಿದೆ. ಮಧ್ಯಾಹ್ನ 2:30ಗೆ ಕಾರ್ಯಕ್ರಮ ಪ್ರಾರಂಭ ಆಗಲಿದೆ. ಈ ಕಾರ್ಯಕ್ರಮದಲ್ಲಿ ನಟ ಅನಂತ್ ನಾಗ್ ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತದೆ. ಜೊತೆಗೆ ನಟರಾದ ಮಮ್ಮುಟಿ, ಕಾರ್ತಿಕ್ ಆರ್ಯನ್, ನಟಿ ಯಾಮಿ ಗೌತಮ್ ಇನ್ನೂ ಹಲವರು ಪ್ರಶಸ್ತಿಗಳನ್ನು ಸ್ವೀಕಾರ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಡಿಡಿ ನ್ಯಾಷನಲ್ ಮತ್ತು ಇಲಾಖೆಯ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಬಹುದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ