
ಸಿನಿಮಾ (Cinema) ರಂಗದಲ್ಲಿ ಎಲ್ಲವನ್ನೂ ಹಣದ ಮೇಲೆಯೇ ಅಳೆಯಲಾಗುತ್ತದೆ. ಇಲ್ಲಿ ಒಬ್ಬರಿಗೆ ಇನ್ನೊಬ್ಬರು ಹುಟ್ಟುಹಬ್ಬದ ಶುಭಾಶಯ ಕೋರಲು ಸಹ ಹಣದ ಲೆಕ್ಕಾಚಾರ ಇರುತ್ತದೆ. ಇಲ್ಲಿ ಸೆಲೆಬ್ರಿಟಿಗಳು ಹಾಕುವ ಪ್ರತಿ ಪೋಸ್ಟ್ ಹಿಂದೆಯೂ ಏಜೆನ್ಸಿಯೊಂದು ಕೆಲಸ ಮಾಡಿರುತ್ತದೆ. ಸಿನಿಮಾ ಪ್ರಚಾರದ ವಿಷಯದಲ್ಲಂತೂ ಯಾವುದೂ ಉಚಿತವಾಗಿ ಆಗುವುದಿಲ್ಲ. ಯಾವ ಮಟ್ಟಿಗೆಂದರೆ ಇದೀಗ ನಟಿ ನಯನತಾರಾ, ತಮ್ಮ ಪತಿಯ ಹೊಸ ಸಿನಿಮಾದ ಪ್ರಚಾರ ಮಾಡಲು ಲಕ್ಷಾಂತರ ರೂಪಾಯಿ ಹಣ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಕೆಲ ವರ್ಷಗಳ ಹಿಂದಷ್ಟೆ ವಿವಾಹವಾಗಿದ್ದು, ಸೆರೊಗಸಿ ಮೂಲಕ ಅವಳಿ ಮಕ್ಕಳ ಪೋಷಕರು ಸಹ ಆಗಿದ್ದಾರೆ. ಎಲ್ಲಿಗೂ ಗೊತ್ತಿರುವಂತೆ ನಯನತಾರಾ ಸ್ಟಾರ್ ನಟಿ ಆಗಿದ್ದು, ಈಗಲೂ ಸಹ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಘ್ನೇಶ್ ಸಿನಿಮಾ ನಿರ್ದೇಶಕರಾಗಿದ್ದು, ಈ ವರೆಗೆ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಐದನೇ ಸಿನಿಮಾ ನಿರ್ದೇಶಿಸಿದ್ದು ಇದೇ ಶುಕ್ರವಾರ ಸಿನಿಮಾ ತೆರೆಗೆ ಬರಲಿದೆ.
ವಿಘ್ನೇಶ್ ಶಿವನ್ ‘ಎಲ್ಐಕೆ’ (ಲವ್ ಇನ್ಶುರೆನ್ಸ್ ಕಂಪೆನಿ) ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾದ ನಾಯಕ ಪ್ರದೀಪ್ ರಂಗನಾಥನ್. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದ್ದು, ಇತ್ತೀಚೆಗಷ್ಟೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಬಗ್ಗೆ ಮಾತನಾಡಿದ ಪತಿ ವಿಘ್ನೇಶ್, ‘ನನ್ನ ಪತ್ನಿ (ನಯನತಾರಾ) ಅನ್ನು ಅತಿಥಿಯಾಗಿ ಕರೆಯುವಷ್ಟು ಹಣ ನಮ್ಮಲ್ಲಿ ಇಲ್ಲ’ ಎಂದರು. ವಿಘ್ನೇಶ್ ಅವರ ಈ ಮಾತು ಇದೀಗ ವಿವಾದಕ್ಕೆ ಕಾರಣವಾಗಿತ್ತು. ಆದರೆ ಪ್ರೀ ರಿಲೀಸ್ ಇವೆಂಟ್ಗೆ ಅಚಾನಕ್ಕಾಗಿ ನಟಿ ನಯನತಾರಾ ಎಂಟ್ರಿ ಕೊಟ್ಟಿದ್ದು ಮಾತ್ರವಲ್ಲದೆ, ವೇದಿಕೆ ಏರಿ ಪತಿ ಮತ್ತು ಇಡೀ ಚಿತ್ರತಂಡಕ್ಕೆ ಶುಭಾಶಯಗಳನ್ನು ಸಹ ತಿಳಿಸಿದರು.
ಇದನ್ನೂ ಓದಿ:ಮತ್ತೆ ಬಾಲಿವುಡ್ಗೆ ನಯನತಾರಾ, ಈ ಬಾರಿ ಮತ್ತೊಬ್ಬ ಖಾನ್ಗೆ ಜೋಡಿ
ಅಸಲಿಗೆ ನಟಿ ನಯನತಾರಾ, ತಮ್ಮ ಸಿನಿಮಾಗಳ ಪ್ರಚಾರಕ್ಕೆ ಹಾಜರಾಗುವುದಿಲ್ಲ. ಅವರು ಸಿನಿಮಾ ಒಪ್ಪಿಕೊಳ್ಳುವಾಗಲೇ ತಾವು ಪ್ರಚಾರಕ್ಕೆ ಬರುವುದಿಲ್ಲ, ಸಂದರ್ಶನಗಳನ್ನು ನೀಡುವುದಿಲ್ಲ ಎಂದು ನಿರ್ಮಾಪಕ ಮತ್ತು ನಿರ್ದೇಶಕರುಗಳೊಟ್ಟಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಎಷ್ಟೋ ಬಾರಿ ಸಿನಿಮಾದ ಮುಹೂರ್ತಕ್ಕೂ ಸಹ ನಯನತಾರಾ ಬರುವುದಿಲ್ಲ. ನಿರ್ಮಾಪಕರು ಈ ಬಗ್ಗೆ ಹಲವು ಬಾರಿ ದೂರು ಸಹ ನೀಡಿದ್ದಾರೆ. ಆದರೆ ಇದೀಗ ತಮ್ಮ ಪತಿಯ ಸಿನಿಮಾಕ್ಕೆ ಮಾತ್ರ ಹೋಗಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ನಯನತಾರಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾನಲ್ಲಿ ಕನ್ನಡದ ದುನಿಯಾ ವಿಜಿ ಸಹ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಕನ್ನಡದ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದು ಆ ಸಿನಿಮಾ ಜೂನ್ 4ಕ್ಕೆ ತೆರೆಗೆ ಬರಲಿದೆ. ಮಲಯಾಳಂನಲ್ಲಿ ಮೋಹನ್ಲಾಲ್, ಮಮ್ಮುಟಿ, ಫಹಾದ್ ಫಾಸಿಲ್ ಒಟ್ಟಿಗೆ ನಟಿಸಿರುವ ‘ಪೇಟ್ರಿಯಾಟ್’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Wed, 8 April 26