ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳನ್ನು ತಡೆಯಬಲ್ಲೆವು: ಎನ್ಟಿಕೆ ಸಂಘಟನೆ ಬೆದರಿಕೆ
Tamil Nadu-Karnataka: ಬೆಂಗಳೂರಿನಲ್ಲಿ ನಡೆದಿದ್ದ ತಮಿಳು ನಟ ಸಿದ್ಧಾರ್ಥ್ ಅವರ ಸುದ್ದಿಗೋಷ್ಠಿಗೆ ಅಡ್ಡಿ ಪಡಿಸಿರುವ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡಿನ ಎನ್ಟಿಕೆ ಸಂಘಟನೆ ಅಧ್ಯಕ್ಷ, ತಮಿಳುನಾಡಿನಲ್ಲಿ ಒಂದೂ ಕನ್ನಡ ಸಿನಿಮಾ ಬಿಡುಗಡೆ ಆಗದಂತೆ ತಡೆಯಬಲ್ಲೆ ಎಂದಿದ್ದಾರೆ.
ಕಾವೇರಿ (Cauvery) ವಿವಾದ ಭುಗಿಲೆದ್ದಿದೆ. ನಿನ್ನೆಯಷ್ಟೆ (ಸೆಪ್ಟೆಂಬರ್ 29) ರಂದು ಕರ್ನಾಟಕ ಬಂದ್ಗೆ ಕರೆನೀಡಲಾಗಿತ್ತು. ಚಿತ್ರರಂಗ ಸಹ ಪ್ರತಿಭಟನಾ ಸಭೆ ನಡೆಸಿ ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿತು. ಆದರೆ ಸೆಪ್ಟೆಂಬರ್ 28ರಂದು ತಮಿಳು ನಟ ಸಿದ್ಧಾರ್ಥ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ತಮ್ಮ ಸಿನಿಮಾ ಕುರಿತಾದ ಪತ್ರಿಕೋಷ್ಠಿಗೆ ನುಗ್ಗಿದ ಕೆಲವು ಕರವೇ ಕಾರ್ಯಕರ್ತರು ಸುದ್ದಿಗೋಷ್ಠಿಯನ್ನು ತಡೆದರು. ಇದೀಗ, ತಮಿಳುನಾಡಿನ ಎನ್ಟಿಕೆ (ನಾಮ್ ತಮಿಳರ್ ಕಚ್ಚಿ) ಸಂಘಟನೆಯ ಅಧ್ಯಕ್ಷ ಸಿಮನ್ ಆಕ್ರೋಶದಿಂದ ಪ್ರತಿಕ್ರಿಯೆ ನೀಡಿದ್ದಾರೆ.
”ನಟ ಸಿದ್ಧಾರ್ಥ್ ಒಬ್ಬ ಕಲಾವಿದ ಅವರಿಗೂ ನೀರಿನ ಸಮಸ್ಯೆಗೆ ಯಾವುದೇ ಸಂಬಂಧವಿಲ್ಲ. ಅವರು ಕಾವೇರಿ ನೀರು ಕೇಳಲಿಲ್ಲ. ಕಾವೇರಿ ವಿಚಾರದಲ್ಲಿ ಕರ್ನಾಟಕದಲ್ಲಿ ಎಲ್ಲರೂ ತಮಿಳುನಾಡಿನ ವಿರುದ್ಧ ಇದ್ದಾರೆ. ಈ ಬಗ್ಗೆ ರಾಜಕೀಯ ಮುಖಂಡರು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ವಿಷಯಕ್ಕೆ ಸಂಬಂಧಿಸಿದಂತೆ ಕಲಾವಿದನನ್ನು ನಿರ್ಬಂಧಿಸುವುದು ಸರಿಯಲ್ಲ” ಎಂದಿದ್ದಾರೆ ಎನ್ಟಿಕೆ ಅಧ್ಯಕ್ಷ ಸಿಮನ್.
’’ಕನ್ನಡ ನಟ ಯಶ್ ನಟನೆಯ ‘ಕೆಜಿಎಫ್’ ಎರಡು ಪಾರ್ಟ್ನಲ್ಲಿ ತಮಿಳುನಾಡಿನಲ್ಲಿ ಬಿಡುಗಡೆ ಆಗಿತ್ತು. ಅದಕ್ಕೆ ನಾವು ಅಡ್ಡಿಪಡಿಸಲಿಲ್ಲ, ಬದಲಿಗೆ ನಾವು ಅದನ್ನು ಸ್ವಾಗತಿಸಿದೆವು. ನಾನು ಒಂದೇ-ಒಂದು ಹೇಳಿಕೆ ಕೊಟ್ಟರೆ ಕನ್ನಡದ ಒಂದೇ ಒಂದು ಸಿನಿಮಾ ಸಹ ತಮಿಳುನಾಡಿನಲ್ಲಿ ಬಿಡುಗಡೆ ಆಗುವುದಿಲ್ಲ. ಕಾವೇರಿ ವಿವಾದವು ರಾಜಕಾರಣಿಗಳು ಕೂತು ಚರ್ಚಿಸಿ ಇತ್ಯರ್ಥ ಮಾಡಿಕೊಳ್ಳಬೇಕಾದ ವಿಷಯ. ಆದರೆ ಈ ವಿಷಯ ಇಟ್ಟುಕೊಂಡು ಒಬ್ಬ ಕಲಾವಿದನ ಮೇಲೆ ಹೀಗೆ ವರ್ತಿಸಿರುವುದು ಖಂಡನೀಯ. ಸಿದ್ಧಾರ್ಥ್ ಸುದ್ದಿಗೋಷ್ಠಿ ನಡೆಸುತ್ತಿದ್ದ ಹಾಲ್ನಲ್ಲಿ ಗಾರ್ಡ್ಸ್ಗಳು ಇದ್ದರೂ ಸಹ ಅವರು ಆ ಹೋರಾಟಗಾರರನ್ನು ತಡೆಯಲಿಲ್ಲ. ಇದೇ ಘಟನೆ ತಮಿಳುನಾಡಿನಲ್ಲಿ ನಡೆದಿದ್ದರೆ ಈ ವೇಳೆಗಾಗಲೇ ಅವರೆಲ್ಲ ಬಂಧನಕ್ಕೆ ಒಳಗಾಗಿರುತ್ತಿದ್ದರು” ಎಂದಿದ್ದಾರೆ ಸಿಮನ್.
ಇದನ್ನೂ ಓದಿ:ಕಾವೇರಿ ವಿವಾದ: ಸುಪ್ರಿಂಕೋರ್ಟ್ನಲ್ಲಿ ಮರು ಪರಿಶೀಲನೆ ಅರ್ಜಿ ಸಲ್ಲಿಸಿದ ಕರ್ನಾಟಕ
ಸೆಪ್ಟೆಂಬರ್ 28ರಂದು ಬೆಂಗಳೂರಿಗೆ ಬಂದಿದ್ದ ನಟ ಸಿದ್ಧಾರ್ಥ್ ತಮ್ಮ ‘ಚಿತ್ತ’ ಸಿನಿಮಾದ ಕನ್ನಡ ಆವೃತ್ತಿ ‘ಚಿಕ್ಕು’ ಸಿನಿಮಾದ ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಸುದ್ದಿಗೋಷ್ಠಿ ನಡೆಯುತ್ತಿದ್ದ ವೇಳೆ ಒಳ ನುಗ್ಗಿದ ಕರವೇ ಹೋರಾಟಗಾರರು ಸಿದ್ಧಾರ್ಥ್ ಅವರ ಮಾತನ್ನು ತಡೆದರಲ್ಲದೆ, ಕೂಡಲೇ ಕಾರ್ಯಕ್ರಮವನ್ನು ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು. ಕಾರ್ಯಕರ್ತರು ಒಳನುಗ್ಗಿದಾಗ ನಟ ಸಿದ್ಧಾರ್ಥ್ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಕಾರ್ಯಕರ್ತರು, ಕಾರ್ಯಕ್ರಮ ನಿಲ್ಲಿಸುವಂತೆ ಒತ್ತಾಯ ಮಾಡಿದ ಕೂಡಲೇ ನಟ ಸಿದ್ಧಾರ್ಥ್ ವೇದಿಕೆ ಬಿಟ್ಟು ತೆರಳಿದರು. ಆ ಬಳಿಕ ನಟ ಶಿವರಾಜ್ ಕುಮಾರ್, ಪ್ರಕಾಶ್ ರೈ ಅವರುಗಳು ಸಿದ್ಧಾರ್ಥ್ ಅವರ ಬಳಿ ಕ್ಷಮೆ ಸಹ ಕೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Sat, 30 September 23