ಹೊಸ ಸಿನಿಮಾ ಮೂಲಕ ಬಂತು ‘ಗಂಟುಮೂಟೆ’ ತಂಡ: ‘ಕೆಂಡ’ದಂಥಹಾ ಕತೆ

Kenda: ’ಗಂಟುಮೂಟೆ’ ಅಂಥಹಾ ಉತ್ತಮ ಸಿನಿಮಾ ನೀಡಿದ್ದ ಚಿತ್ರತಂಡ ಇದೀಗ ಹೊಸ ಸಿನಿಮಾದೊಂದಿಗೆ ಬಂದಿದೆ. ಸಿನಿಮಾಕ್ಕೆ ಜಯಂತ್ ಕಾಯ್ಕಿಣಿ ಪುತ್ರ ಸಂಗೀತ ನಿರ್ದೇಶನ ಮಾಡಿದ್ದಾರೆ.

ಹೊಸ ಸಿನಿಮಾ ಮೂಲಕ ಬಂತು 'ಗಂಟುಮೂಟೆ' ತಂಡ: 'ಕೆಂಡ'ದಂಥಹಾ ಕತೆ
ಕೆಂಡ
Follow us
ಮಂಜುನಾಥ ಸಿ.
|

Updated on: Sep 30, 2023 | 8:46 PM

2019 ರಲ್ಲಿ ಬಿಡುಗಡೆ ಆಗಿದ್ದ ‘ಗಂಟುಮೂಟೆ‘ (Gantumoote) ಸಿನಿಮಾ ತನ್ನ ಭಿನ್ನತೆಯಿಂದ ಗಮನ ಸೆಳೆದಿತ್ತು. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಯಶಸ್ಸು ಗಳಿಸಲಿಲ್ಲವಾದರೂ ಸೀಮಿತ ಸಿನಿಮಾ ಪ್ರೇಮಿಗಳ ಗಮನ ಸೆಳೆಯಿತು. ಸಿನಿಮಾ ಮಾಡಿದ ತಂಡದ ಮೇಲೆ ಭರವಸೆ, ನಿರೀಕ್ಷೆ ಇರಿಸಿಕೊಳ್ಳುವಂತೆ ಮಾಡಿತ್ತು. ಇದೀಗ ‘ಗಂಟುಮೂಟೆ’ ತಂಡ ಹೊಸ ಸಿನಿಮಾ ಮೂಲಕ ಮತ್ತೆ ಬಂದಿದೆ.

ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿ `ಕೆಂಡ’ ಹೆಸರಿನ ಸಿನಿಮಾವನ್ನು ’ಗಂಟುಮೂಟೆ’ ತಂಡ ನಿರ್ಮಿಸಿದ್ದು ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ’ಗಂಟುಮೂಟೆ’ ಚಿತ್ರದ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಛಾಯಾಗ್ರಾಹಕರಾಗಿದ್ದ ಸಹದೇವ್ ಕೆಲವಡಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ‘ಕೆಂಡ’ ಚಿತ್ರದ ಮೋಷನ್ ಪೋಸ್ಟರ್ ಭಿನ್ನವಾಗಿದ್ದು ಈ ಪೋಸ್ಟರ್ ಚರ್ಚೆ ಎಬ್ಬಿಸಿದೆ. ಶೀರ್ಷಿಕೆಯಲ್ಲಿಯೇ ಮಾಸ್ ಫೀಲ್ ಹೊಂದಿರುವ ಈ ಸಿನಿಮಾವನ್ನು ರೂಪಾ ರಾವ್ ಮತ್ತು ಸಹದೇವ್ ಜೊತೆಗೂಡಿ, ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ’ಗಂಟುಮೂಟೆ’ ಸಿನಿಮಾವನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು.

ಮಹಾನಗರ ಬೆಂಗಳೂರಿನಲ್ಲಿ ಹಲವು ಕ್ಷೇತ್ರಗಳಲ್ಲಿ ನಿರಾಸೆಗೊಳಗಾದ ಯುವ ಸಮೂಹ, ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ಯುವಕ ಒಬ್ಬ ಹೇಗೆ ಈ ವ್ಯವಸ್ಥೆಯ ವಿಷ ವ್ಯೂಹಕ್ಕೆ ಸಿಲುಕಿಕೊಳ್ಳುತ್ತಾನೆ. ಆತನನ್ನು ಪಟ್ಟಭದ್ರರು ಹೇಗೆಲ್ಲ ಬಳಸಿಕೊಳ್ಳುತ್ತಾರೆ. ಆ ಕ್ಷಣ ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತೆ ಎಂಬಿತ್ಯಾದಿ ಕುತೂಹಲಕರ ತಿರುವುಗಳನ್ನು ’ಕೆಂಡ’ ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ:‘ಜವಾನ್’ ಬಳಿಕ ಯೂಟ್ಯೂಬರ್​ಗೆ ಚಾನ್ಸ್​ ನೀಡಿದ ನಯನತಾರಾ; ಹೊಸ ಸಿನಿಮಾ ಅನೌನ್ಸ್

ಒಟ್ಟಾರೆಯಾಗಿ, ಇದೊಂದು ಈ ದಿನಮಾನದ ಮಟ್ಟಿಗೆ ವಿಭಿನ್ನ ಚಿತ್ರವಾಗಲಿದೆ ಎಂಬಂಥಾ ತುಂಬು ಭರವಸೆ ಚಿತ್ರತಂಡದಲ್ಲಿದೆ. ವಿದೇಶಗಳಲ್ಲಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಿ ಬಂದು, ತನ್ನ ಮಾತೃ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂಬ ಬಯಕೆ ಹೊಂದಿದ್ದವರು ಸಹದೇವ್ ಕೆಲವಡಿ. ಅದರ ಆರಂಭಿಕ ಹೆಜ್ಜೆಯಾಗಿ ರೂಪಾ ರಾವ್ ಅವರ ಜೊತೆಗೂಡಿ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿದ್ದರು. ಇದೀಗ ಅವರೇ ಕೆಂಡದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಸಿನಿಮಾದಲ್ಲಿ ಹಲವು ಹೊಸ ನಟರು ನಟಿಸಿದ್ದಾರೆ. ಅದರಲ್ಲಿಯೂ ರಂಗಭೂಮಿಯಿಂದ ಬಂದಿರುವ ಪ್ರತಿಭೆಗಳೇ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ್ ಕೃಷ್ಣ ದೇಶಪಾಂಡೆ ಮುಂತಾದವರ ತಾರಾಗಣ ಈ ಸಿನಿಮಾಕ್ಕೆ ಇದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೇ ಹೊಸೆದುಕೊಂಡಂಥಾ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಡಾಕ್ಯುಮೆಂಟರಿಯ ಭಾಗ ಆಗಿದ್ದ ಶ್ರೇಯಾಂಕ್ ನಂಜಪ್ಪ ’ಕೆಂಡ’ ಸಿನಿಮಾಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ.

‘ಗಂಟುಮೂಟೆ’ಯಂಥಹಾ ಒಳ್ಳೆಯ ಸಿನಿಮಾ ನೀಡಿರುವ ಚಿತ್ರತಂಡವೇ ’ಕೆಂಡ’ ಸಿನಿಮಾದ ಸಾರಥ್ಯ ವಹಿಸಿರುವ ಕಾರಣ, ಈ ಸಿನಿಮಾ ಸಹ ಕುತೂಹಲ ಮೂಡಿಸಿದೆ. ಯುವ ಸಮೂಹದ ಕನಸು, ನಿರಾಸೆ, ತವಕ ತಲ್ಲಣಗಳನ್ನು ಹೊಂದಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಕೊನೆಯ ಹಂತದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾದ ಬಿಡುಗಡೆಯ ದಿನಾಂಕ ಘೋಷಣೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ