ಜೂ.ಎನ್ಟಿಆರ್ (Jr.Ntr) ಕುಟುಂಬದ ನಂದಮೂರಿ ತಾರಕ ರತ್ನ ಅವರು ಇತ್ತೀಚೆಗೆ ಮೃತಪಟ್ಟರು. ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಹಲವು ದಿನ ಚಿಕಿತ್ಸೆ ಪಡೆದರು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು. ಅವರ ಅಂತ್ಯಸಂಸ್ಕಾರ ನೆರವೇರಿದೆ. ಈ ಸಂದರ್ಭದಲ್ಲಿ ಜೂ.ಎನ್ಟಿಆರ್ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈಗ ಜೂ.ಎನ್ಟಿಆರ್ ಅವರ ಅಮೆರಿಕ ಟ್ರಿಪ್ ಮತ್ತಷ್ಟು ವಿಳಂಬ ಆಗಲಿದೆ.
ಈ ಬಾರಿ ಆಸ್ಕರ್ ಅವಾರ್ಡ್ ಭಾರತೀಯರ ಪಾಲಿಗೆ ವಿಶೇಷವಾಗಿದೆ. ಇದಕ್ಕೆ ಕಾರಣ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ರೇಸ್ನಲ್ಲಿರುವುದು. ಮಾರ್ಚ್ 12ರಂದು (ಭಾರತೀಯ ಕಾಲಮಾನ ಮಾರ್ಚ್ 13 ಮುಂಜಾನೆ 5.30) ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ‘ಆರ್ಆರ್ಆರ್’ ತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸುತ್ತಿದೆ.
ರಾಮ್ ಚರಣ್ ಅವರು ಸೋಮವಾರ (ಫೆ.20) ಅಮೆರಿಕಕ್ಕೆ ತೆರಳಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಕೂಡ ಶೀಘ್ರವೇ ಅಮೆರಿಕ ತಲುಪಲಿದ್ದಾರೆ. ಜೂ.ಎನ್ಟಿಆರ್ ಕೂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಕುಟುಂಬದಲ್ಲಿ ನಡೆದ ದುರ್ಘಟನೆಯಿಂದ ಅವರು ನೊಂದುಕೊಂಡಿದ್ದಾರೆ. ಹೀಗಾಗಿ, ಅಮೆರಿಕಕ್ಕೆ ಅವರು ಪ್ರವಾಸ ಬೆಳೆಸುವುದು ಮತ್ತಷ್ಟು ವಿಳಂಬ ಆಗಲಿದೆ.
ಇದನ್ನೂ ಓದಿ: ಕ್ಯಾನ್ಸರ್ನಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಬಾಲಕನ ಆಸೆ ಈಡೇರಿಸಿದ ರಾಮ್ ಚರಣ್
ಮಾರ್ಚ್ 12ರಂದು ಲಾಸ್ ಏಂಜಲೀಸ್ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಾಲಿವುಡ್ನ ಅನೇಕ ದಿಗ್ಗಜರು ಅದರಲ್ಲಿ ಭಾಗಿ ಆಗಲಿದ್ದಾರೆ. ಅವರೆಲ್ಲರ ಮುಂದೆ ‘ನಾಟು ನಾಟು..’ ಗೀತೆ ಹಾಡುವ ಅವಕಾಶ ಎಂಎಂ ಕೀರವಾಣಿ ಅವರಿಗೆ ಸಿಗುತ್ತಿದೆ. ಈ ಬಗ್ಗೆ ಅವರು ಕೊಂಚ ನರ್ವಸ್ ಆಗಿದ್ದಾರೆ. ಚಿತ್ರರಂಗದಲ್ಲಿ ಎಂಎಂ ಕೀರವಾಣಿ ಅವರ ಅನುಭವ ಅಪಾರ. 1990ರಿಂದಲೂ ಅವರು ಸಕ್ರಿಯರಾಗಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:55 am, Tue, 21 February 23