ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು 37 ವರ್ಷ; ವಿಶೇಷವಾಗಿ ಧನ್ಯವಾದ ಹೇಳಿದ ಶಿವಣ್ಣ
ಶಿವರಾಜ್ಕುಮಾರ್ ಅವರು ಮೊದಲು ಬಣ್ಣ ಹಚ್ಚಿದ ಸಿನಿಮಾ ‘ಆನಂದ್’. ಈ ಚಿತ್ರ ಸೆಟ್ಟೇರಿದ್ದು 1986, ಫೆ.19ರಂದು. ಶಿವಣ್ಣ ಅವರು ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ಈ ದಿನಾಂಕದಂದು.
ಶಿವರಾಜ್ಕುಮಾರ್ (Shivarajkumar) ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 37 ವರ್ಷ ಕಳೆದಿದೆ. ಸುದೀರ್ಘ ಪಯಣದಲ್ಲಿ ಅವರ ಬತ್ತಳಿಕೆಯಿಂದ 125 ಚಿತ್ರಗಳು ತೆರೆಗೆ ಬಂದಿವೆ. ಈ ಪಯಣದಲ್ಲಿ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ, ಅನೇಕರನ್ನು ಗಳಿಸಿದ್ದಾರೆ, ಅನೇಕ ಆಪ್ತರನ್ನು ಕಳೆದುಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೋಟ್ಯಂತರ ಅಭಿಮಾನಿಗಳನ್ನು ಅವರು ಸಂಪಾದಿಸಿದ್ದಾರೆ. ಶಿವಣ್ಣ (Shivanna) ಅವರು ನಟನೆಯ ಜೊತೆಗೆ ಸಿಂಪ್ಲಿಸಿಟಿಯಿಂದ ಹೆಚ್ಚು ಇಷ್ಟವಾಗುತ್ತಾರೆ. ಈಗ ಶಿವರಾಜ್ಕುಮಾರ್ ಅವರು ಸುದೀರ್ಘ ಪಯಣದಲ್ಲಿ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಶಿವರಾಜ್ಕುಮಾರ್ ಅವರು ಮೊದಲು ಬಣ್ಣ ಹಚ್ಚಿದ ಸಿನಿಮಾ ‘ಆನಂದ್’. ಈ ಚಿತ್ರ ಸೆಟ್ಟೇರಿದ್ದು 1986, ಫೆ.19ರಂದು. ಶಿವಣ್ಣ ಅವರು ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ಈ ದಿನಾಂಕದಂದು. ಈ ದಿನವನ್ನು ಶಿವಣ್ಣ ಸೋಶಿಯಲ್ ಮೀಡಿಯಾದಲ್ಲಿ ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಪತ್ರ ಬರೆದಿದ್ದಾರೆ.
‘ಕನ್ನಡ ಚಿತ್ರರಂಗಕ್ಕೆ ನಾನು ಪಾದಾರ್ಪಣೆ ಮಾಡಿ ಇಂದಿಗೆ 37 ವರ್ಷಗಳು. ಆನಂದ್ ಚಿತ್ರದ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆನಂದ್ ಇಂದ ವೇದವರೆಗೂ ನೀವು ಕೊಟ್ಟ ಪ್ರೀತಿ ಬೆಲೆಕಟ್ಟಲಾಗದ್ದು. ನನ್ನನ್ನು ನೀವು ಕೇವಲ ಒಬ್ಬ ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮನೆಮಗನಾಗಿ ಬೆಳೆಸಿದ್ದೀರಿ. ದೇವರ ಸ್ವರೂಪವಾಗಿರುವ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಹಿರಿಯರಿಗೆ, ಕಿರಿಯರಿಗೆ, ಸಹದ್ಯೋಗಿಗಳಿಗೆ ಹಾಗು ನನ್ನ ಇಡೀ ಕುಟುಂಬಕ್ಕೆ ಅನಂತ ವಂದನೆಗಳು’ ಎಂದು ಶಿವಣ್ಣ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಶಿವರಾತ್ರಿಗೆ ನರ್ತನ್ ಹೊಸ ಸಿನಿಮಾ ಘೋಷಣೆ; ‘ಭೈರತಿ ರಣಗಲ್’ ಆಗಿ ಬಂದ ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಅವರ ಮೊದಲ ಸಿನಿಮಾ ‘ಆನಂದ್’ ಯಶಸ್ಸು ಕಂಡಿತು. ಈ ಚಿತ್ರದಿಂದ ಶಿವರಾಜ್ಕುಮಾರ್ ವೃತ್ತಿಜೀವನಕ್ಕೆ ಭದ್ರಬುನಾದಿ ಸಿಕ್ಕಿತು. ಅವರ ನಟನೆಯ 125ನೇ ಚಿತ್ರ ‘ವೇದ’ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿ ಯಶಸ್ಸು ಕಂಡಿತು. ಈ ಚಿತ್ರವನ್ನು ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಲಾಯಿತು.
ಧನ್ಯವಾದಗಳು | Thank You#37YearsOfLove pic.twitter.com/TqROGUJ2bA
— DrShivaRajkumar (@NimmaShivanna) February 21, 2023
ಶಿವರಾಜ್ಕುಮಾರ್ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಪ್ರತಿ ವರ್ಷ ಅವರ ನಟನೆಯ ಸರಾಸರಿ ಮೂರು ಚಿತ್ರಗಳು ರಿಲೀಸ್ ಆಗುತ್ತವೆ. ಹಲವು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ ಇದ್ದಾರೆ. ‘ಭೈರತಿ ರಣಗಲ್’ ಚಿತ್ರಕ್ಕಾಗಿ ನರ್ತನ್ ಜೊತೆ ಅವರು ಕೈ ಜೋಡಿಸಿದ್ದಾರೆ. ‘45’, ನೀ ಸಿಗೋವರೆಗೂ’, ಶ್ರೀನಿ ನಿರ್ದೇಶನದ ‘ಘೋಸ್ಟ್’ ಸಿನಿಮಾದಲ್ಲಿ ಶಿವರಾಜ್ಕುಮಾರ್ ನಟಿಸುತ್ತಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್, ಧನುಷ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಶಿವಣ್ಣ ಬಣ್ಣಹಚ್ಚುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ https://tv9kannada.com/entertainment