ಆಸ್ಕರ್​ ರೇಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಸಿನಿಮಾ! ಹಾಲಿವುಡ್​ ಮಂದಿ ಎದುರು ‘ದಿ ವೈಟ್​ ಟೈಗರ್​’ ಪೈಪೋಟಿ

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್​ ಮಾತ್ರವಲ್ಲದೆ ಹಾಲಿವುಡ್​ನಲ್ಲೂ ಸಕ್ರಿಯರಾಗಿದ್ದಾರೆ. ಈಗ ಅವರ ‘ದಿ ವೈಟ್​ ಟೈಗರ್’ ಸಿನಿಮಾ ಆಸ್ಕರ್​ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿದೆ.

ಆಸ್ಕರ್​ ರೇಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಸಿನಿಮಾ! ಹಾಲಿವುಡ್​ ಮಂದಿ ಎದುರು ‘ದಿ ವೈಟ್​ ಟೈಗರ್​’ ಪೈಪೋಟಿ
ದಿ ವೈಟ್​ ಟೈಗರ್​ ಸಿನಿಮಾ

Updated on: Mar 16, 2021 | 6:39 PM

ಪ್ರತಿ ವರ್ಷದಂತೆ ಈ ವರ್ಷ ಕೂಡ ಆಸ್ಕರ್​ ಪ್ರಶಸ್ತಿಗಾಗಿ ಹಣಾಹಣಿ ಜೋರಾಗಿದೆ. ಯಾವ ಯಾವ ಚಿತ್ರಕ್ಕೆ ಈ ಬಾರಿ ಪ್ರತಿಷ್ಠಿತ ಪ್ರಶಸ್ತಿ ಸಿಗಲಿದೆ ಎಂಬ ಕೌತುಕ ಮನೆ ಮಾಡಿದೆ. ಕೊರೊನಾ ಕಾರಣದಿಂದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಅನೇಕ ಸಿನಿಮಾಗಳಿಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ.

ಪ್ರಿಯಾಂಕಾ ಚೋಪ್ರಾ ನಟನೆಯ ‘ದಿ ವೈಟ್​ ಟೈಗರ್​’ ಸಿನಿಮಾ ಕೂಡ ಈ ವರ್ಷದ ಆಸ್ಕರ್​ ರೇಸ್​ನಲ್ಲಿದೆ. ಬೆಸ್ಟ್​ ಅಡಾಪ್ಟೆಡ್​ ಸ್ಕ್ರೀನ್​ ಪ್ಲೇ ವಿಭಾಗದಲ್ಲಿ ಈ ಸಿನಿಮಾ ಪೈಪೋಟಿ ನೀಡಲಿದೆ. ಈ ಬಾರಿ ಸ್ಪರ್ಧೆಗೆ ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಮಾ.15ರಂದು ಘೋಷಿಸಲಾಯಿತು. ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್​ ಜೋನಸ್​ ಅವರು 23 ಕೆಟಗರಿಗಳಲ್ಲಿ ನಾಮ ನಿರ್ದೇಶನಗೊಂಡ ಸಿನಿಮಾ ಹೆಸರುಗಳನ್ನು ಘೋಷಿಸಿದರು. ಅದರಲ್ಲಿ ‘ದಿ ವೈಟ್​ ಟೈಗರ್​’ ಕೂಡ ಸ್ಥಾನ ಪಡೆದುಕೊಂಡಿದೆ,

ತಮ್ಮದೇ ಸಿನಿಮಾ ಆಸ್ಕರ್​ನಲ್ಲಿ ​ಹಣಾಹಣಿ ನಡೆಸುತ್ತಿದ್ದು, ಅದನ್ನು ಘೋಷಿಸುವಾಗ ಪ್ರಿಯಾಂಕಾ ಮೊಗದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. 2021ರ ಜನವರಿ 22ರಂದು ‘ದಿ ವೈಟ್​ ಟೈಗರ್​’ ಚಿತ್ರ ಬಿಡುಗಡೆ ಆಗಿತ್ತು. ನಟಿಸುವುದರ ಜೊತೆ ಸಹ-ನಿರ್ಮಾಪಕಿ ಆಗಿಯೂ ಪ್ರಿಯಾಂಕಾ ಚೋಪ್ರಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಾಮಿನ್​ ಬಹ್ರಾನಿ ಅವರು ನಿರ್ದೇಶನ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಜೊತೆ ರಾಜ್​ಕುಮಾರ್​ ರಾವ್​ ಮತ್ತು ಆದರ್ಶ್​ ಗೌರವ್​ ಮುಖ್ಯ ಪಾತ್ರ ನಿಭಾಯಿಸಿದ್ದಾರೆ.

‘ನಾವು ಈಗ ತಾನೇ ಆಸ್ಕರ್​ಗೆ ನಾಮನಿರ್ದೇಶನಗೊಂಡೆವು. ನಿರ್ದೇಶಕ ರಾಮಿನ್​ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಈ ಚಿತ್ರದ ನಾಮನಿರ್ದೇಶನವನ್ನು ನಾನೇ ಘೋಷಿಸಿದ್ದು ಖುಷಿ ನೀಡಿತು. ಹೆಮ್ಮೆ ಎನಿಸುತ್ತಿದೆ’ ಎಂದು ಪ್ರಿಯಾಂಕಾ ಟ್ವೀಟ್​ ಮಾಡಿದ್ದಾರೆ. ಫಾದರ್​, ನೋಮಾಡ್​ಲ್ಯಾಂಡ್​, ಒನ್​ ನೈಟ್​ ಇನ್​ ಮಿಯಾಮಿ ಸಿನಿಮಾಗಳ ಜೊತೆ ಚಿತ್ರ ದಿ ವೈಟ್​ ಟೈಗರ್ ಸ್ಪರ್ಧಿಸಲಿದೆ. ಏ.25ರಂದು ಆಸ್ಕರ್​ ಪ್ರಶಸ್ತಿ ಪ್ರಕಟ ಆಗಲಿದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ಪ್ರಿಯಾಂಕಾ ಚೋಪ್ರಾ ಫೋಟೋಗಳು

ಸೇನಾ ಪೋಷಾಕಿನಲ್ಲಿ ಪ್ರಿಯಾಂಕಾ ಚೋಪ್ರಾ: ಇದು ಹೊಸ ಸಿನಿಮಾ ಮ್ಯಾಟರ್​ ಅಲ್ಲ!

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us