ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಹಲವು ವರ್ಷಗಳಿಂದ ಅವರು ಹಿಂದಿ ಚಿತ್ರರಂಗದಲ್ಲಿ ಆಳ್ವಿಕೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಗೆ ಯಾಕೋ ಅದೃಷ್ಟ ಕೈ ಹಿಡಿಯುತ್ತಿಲ್ಲ ಎಂಬುದು ಅಭಿಮಾನಿಗಳ ಪಾಲಿನ ಬೇಸರ. ಅವರ ಸಿನಿಮಾ ಮಾತ್ರವಲ್ಲದೇ ಇಡೀ ಬಾಲಿವುಡ್ ಇಂಡಸ್ಟ್ರಿಯೇ ಸೊರಗಿದೆ. ಈ ವರ್ಷ ಚಿತ್ರಮಂದಿರದಲ್ಲಿ ರಿಲೀಸ್ ಆದ ಅಕ್ಷಯ್ ಕುಮಾರ್ ಅವರ ಸಿನಿಮಾಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗಿಲ್ಲ. ಹಾಗಾಗಿ ಅವರೀಗ ಒಂದು ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ನೇರವಾಗಿ ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ ಮಾಡಿ ಕೈ ಸುಟ್ಟುಕೊಳ್ಳುವಂತಹ ತಪ್ಪು ಮಾಡಲು ಅವರು ಸಿದ್ಧರಿಲ್ಲ. ಹಾಗಾಗಿ ಹೊಸ ಸಿನಿಮಾವನ್ನು ಒಟಿಟಿಯಲ್ಲಿ (OTT) ಬಿಡುಗಡೆ ಮಾಡುತ್ತಿದ್ದಾರೆ. ಅವರು ನಟಿಸಿರುವ ‘ಕಟ್ಪುಟ್ಲಿ’ ಸಿನಿಮಾ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ (Disney plus Hotstar) ಮೂಲಕ ರಿಲೀಸ್ ಆಗಲಿದೆ.
ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಖರ್ಚು ಜಾಸ್ತಿ. ಜನರು ಥಿಯೇಟರ್ಗೆ ಬಂದು ಸಿನಿಮಾ ನೋಡದಿದ್ದರೆ ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ನಷ್ಟ ಆಗುತ್ತದೆ. ಈ ವರ್ಷ ಬಿಡುಗಡೆಯಾದ ‘ಸಾಮ್ರಾಟ್ ಪೃಥ್ವಿರಾಜ್’, ‘ರಕ್ಷಾ ಬಂಧನ್’, ‘ಬಚ್ಚನ್ ಪಾಂಡೆ’ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸಲು ಸಾಧ್ಯವಾಗದೇ ಸೋತವು. ಹಾಗಾಗಿ ‘ಕಟ್ಪುಟ್ಲಿ’ ಸಿನಿಮಾ ತಂಡದವರು ಥಿಯೇಟರ್ ಸಹವಾಸ ಬೇಡ ಅಂತ ನೇರವಾಗಿ ಒಟಿಟಿ ಹಾದಿ ಹಿಡಿದಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ‘ಅತರಂಗಿ ರೇ’, ‘ಲಕ್ಷ್ಮೀ’ ಸಿನಿಮಾ ಕೂಡ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ರಿಲೀಸ್ ಆಗಿ ಲಾಭ ಗಳಿಸಿದ್ದವು. ಹಾಗಾಗಿ ಇದೇ ಸಂಸ್ಥೆಗೆ ಈಗ ‘ಕಟ್ಪುಟ್ಲಿ’ ಸಿನಿಮಾದ ಹಕ್ಕುಗಳನ್ನು ಮಾರಲಾಗಿದೆ. ಮೂಲಗಳ ಪ್ರಕಾರ ಬರೋಬ್ಬರಿ 125 ಕೋಟಿ ರೂಪಾಯಿಗೆ ಸಿನಿಮಾ ಸೇಲ್ ಆಗಿದೆ. ಇದರಿಂದ ನಿರ್ಮಾಪಕರ ಮುಖದಲ್ಲಿ ನಗು ಮೂಡಿದೆ ಎಂದು ‘ಬಾಲಿವುಡ್ ಹಂಗಾಮ’ ವರದಿ ಮಾಡಿದೆ.
‘ಕಟ್ಪುಟ್ಲಿ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದಾರೆ. ರಂಜಿತ್ ಎಂ. ತಿವಾರಿ ನಿರ್ದೇಶನ ಮಾಡಿದ್ದು, ‘ಪೂಜಾ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಸೆಪ್ಟೆಂಬರ್ 2ರಂದು ಈ ಚಿತ್ರದ ಸ್ಟ್ರೀಮಿಂಗ್ ಆರಂಭ ಆಗಲಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಸಖತ್ ಕೌತುಕ ಮೂಡಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.