ಸಿನಿಮಾ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಚಿತ್ರಮಂದಿರದ ಬದಲು ಒಟಿಟಿಯಲ್ಲಿ ಮನರಂಜನೆ ಬಯಸುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಕೆಲವು ಸಿನಿಮಾಗಳನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲಾಗುತ್ತದೆ. ಚಿತ್ರಮಂದಿರದಲ್ಲಿ ಸೋತ ಸಿನಿಮಾಗಳು ಒಟಿಟಿಯಲ್ಲಿ ಸೂಪರ್ ಹಿಟ್ ಆದ ಉದಾಹರಣೆ ಕೂಡ ಇದೆ. ಅಕ್ಷಯ್ ಕುಮಾರ್ (Akshay Kumar) ಅವರಿಗೆ ಈ ವರ್ಷ ಚಿತ್ರಮಂದಿರದಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಆದರೆ ಒಟಿಟಿ ಪ್ಲಾಟ್ಫಾರ್ಮ್ ಅವರ ಕೈ ಹಿಡಿದಿದೆ. ಇತ್ತೀಚೆಗೆ ಅವರು ನಟಿಸಿದ ‘ಕಟ್ಪುಟ್ಲಿ’ (Cuttputlli) ಸಿನಿಮಾ ನೇರವಾಗಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ರಿಲೀಸ್ ಆಯಿತು. ಆ ಚಿತ್ರವನ್ನು ಜನರು ಕೋಟ್ಯಂತರ ಬಾರಿ ವೀಕ್ಷಿಸಿದ್ದಾರೆ. ಆ ಮೂಲಕ ಅಕ್ಷಯ್ ಕುಮಾರ್ ಅವರ ಚಿತ್ರಗಳಿಗೆ ಒಟಿಟಿಯಲ್ಲಿ (OTT Platform) ದೊಡ್ಡ ಮಟ್ಟದ ಬೇಡಿಕೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಅಕ್ಷಯ್ ಕುಮಾರ್ ಸಿನಿಮಾಗಳು ಮಿನಿಮಮ್ ಬಿಸ್ನೆಸ್ ಮಾಡುತ್ತವೆ ಎಂಬುದು ನಂಬಿಕೆ. ಹಾಗಿದ್ದರೂ ಕೂಡ ಚಿತ್ರಮಂದಿರದಲ್ಲಿ ರಿಲೀಸ್ ಆದ ‘ಬಚ್ಚನ್ ಪಾಂಡೆ’, ‘ಸಾಮ್ರಾಟ್ ಪೃಥ್ವಿರಾಜ್’ ಹಾಗೂ ‘ರಕ್ಷಾ ಬಂಧನ್’ ಚಿತ್ರಗಳು ಹೀನಾಯವಾಗಿ ಸೋತಿದ್ದು ಬೇಸರದ ಸಂಗತಿ. ಹಾಗಾಗಿ ಚಿತ್ರಮಂದಿರದಲ್ಲಿ ರಿಲೀಸ್ ಮಾಡಿ ದುಡ್ಡು ಕಳೆದುಕೊಳ್ಳುವುದು ಬೇಡ ಎಂಬ ಉದ್ದೇಶದಿಂದ ‘ಕಟ್ಪುಟ್ಲಿ’ ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲಾಯಿತು. ಈ ಪ್ಲ್ಯಾನ್ನಿಂದ ಅಕ್ಷಯ್ ಕುಮಾರ್ಗೆ ಗೆಲುವು ಸಿಕ್ಕಿದೆ.
ಅಕ್ಷಯ್ ಕುಮಾರ್ ಅವರು ಸಿನಿಮಾ ಮಾಡುವ ಶೈಲಿಯ ಬಗ್ಗೆ ಅನೇಕರಿಗೆ ತಕರಾರು ಇದೆ. ಅವರು ತುಂಬ ಗಡಿಬಿಡಿಯಲ್ಲಿ ಸಿನಿಮಾ ಕೆಲಸಗಳನ್ನು ಮುಗಿಸುತ್ತಾರೆ. ವರ್ಷಕ್ಕೆ ಮೂರು, ನಾಲ್ಕು ಸಿನಿಮಾ ಮಾಡಬೇಕು ಎಂಬ ಹಪಾಹಪಿ ಅವರಿಗೆ ಇದೆ. ಇದರಿಂದ ಚಿತ್ರದ ಗುಣಮಟ್ಟ ಹಾಳಾಗುತ್ತದೆ ಎಂದು ಅನೇಕರು ಟೀಕಿಸುತ್ತಿದ್ದಾರೆ. ಅದೇನೇ ಇದ್ದರೂ ಅವರಿಗೆ ಇರುವ ಡಿಮ್ಯಾಂಡ್ ಕಿಂಚಿತ್ತೂ ಕಡಿಮೆ ಆಗಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ.
ಚಿತ್ರಮಂದಿರಕ್ಕಿಂತಲೂ ಒಟಿಟಿಯಲ್ಲಿ ಅಕ್ಷಯ್ ಕುಮಾರ್ಗೆ ಹೆಚ್ಚು ಯಶಸ್ಸು ಸಿಕ್ಕಿರುವುದರಿಂದ ಅವರ ಮುಂಬರುವ ಸಿನಿಮಾಗಳು ಕೂಡ ಒಟಿಟಿ ಹಾದಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಭವಿಷ್ಯದ ಪ್ಲ್ಯಾನ್ನಲ್ಲಿ ಅಕ್ಷಯ್ ಕುಮಾರ್ ಅವರು ದೊಡ್ಡ ಬದಲಾವಣೆ ಮಾಡಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ‘ರಾಮ್ ಸೇತು’, ‘ಕ್ಯಾಪ್ಸೂಲ್ ಗಿಲ್’, ‘ಓಹ್ ಮೈ ಗಾಡ್ 2’, ‘ಗೋರ್ಖಾ’, ‘ಸೂರರೈ ಪೋಟ್ರು’ ಚಿತ್ರದ ರಿಮೇಕ್ ಸೇರಿದಂತೆ ಹಲವು ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.