Aryavardhan Guruji: ‘ಬಿಗ್ ಬಾಸ್ ನಿಂಗೆ ಅನ್ನ ಕೊಟ್ಟಿರಬಹುದು, ಆದ್ರೆ ಅನ್ನ ಮಾಡಿಕೊಟ್ಟಿದ್ದು ನಾನು’: ಗುರೂಜಿ ಸಖತ್ ಪಂಚ್
Bigg Boss Kannada OTT: ಬಿಗ್ ಬಾಸ್ಗೆ ಬರುವುದಕ್ಕೂ ಮುನ್ನ ಸಂಖ್ಯಾಶಾಸ್ತ್ರ ಹೇಳುವ ಮೂಲಕ ಆರ್ಯವರ್ಧನ್ ಗುರೂಜಿ ಗುರುತಿಸಿಕೊಂಡಿದ್ದರು. ಅನೇಕ ಬಾರಿ ಅವರು ಟ್ರೋಲ್ ಆಗಿದ್ದುಂಟು.
‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಕೊನೇ ವಾರವನ್ನು ಕಳೆಯುತ್ತಿದ್ದಾರೆ. ಸದ್ಯ ಎಂಟು ಜನರ ನಡುವೆ ಪೈಪೋಟಿ ನಡೆಯುತ್ತಿದೆ. ಆರನೇ ವಾರದಲ್ಲೂ ಕೂಡ ಸ್ಪರ್ಧಿಗಳು ಉತ್ಸಾಹ ಕಳೆದುಕೊಂಡಿಲ್ಲ. ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ಎಲ್ಲರಿಗಿಂತ ಹೆಚ್ಚು ಫನ್ ನೀಡುತ್ತಿದ್ದಾರೆ. ಅವರ ಮಾತುಗಳು ಪ್ರತಿಯೊಬ್ಬರಲ್ಲೂ ನಗು ಉಕ್ಕಿಸುತ್ತಿವೆ. ಯಾವುದೇ ವಿಚಾರ ಪ್ರಸ್ತಾಪವಾದರೂ ಕೂಡ ಅವರು ತಮ್ಮ ಪೂರ್ವಾಶ್ರಮದ ಬೇಕರಿ ಬಗ್ಗೆ ಮಾತನಾಡುತ್ತಾರೆ. ಸಿಟ್ಟು ಬಂದರೆ ಹಳ್ಳಿ ಭಾಷೆಯಲ್ಲಿ ಬೈಯ್ದು ಬಿಸಾಕುತ್ತಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಕೆಲವೊಮ್ಮೆ ಬಿಗ್ ಬಾಸ್ ಹೇಳೋದೇ ಒಂದು, ಗುರೂಜಿ ಅರ್ಥ ಮಾಡಿಕೊಳ್ಳೋದೇ ಮತ್ತೊಂದು ಈ ಎಲ್ಲ ಕಾರಣದಿಂದಾಗಿ ಅವರ ವ್ಯಕ್ತಿತ್ವ ದೊಡ್ಮನೆಯಲ್ಲಿ ಸಖತ್ ಇಂಟರೆಸ್ಟಿಂಗ್ ಎನಿಸಿದೆ.
ಬೇರೆ ಎಲ್ಲ ಸ್ಪರ್ಧಿಗಳಿಗಿಂತಲೂ ಆರ್ಯವರ್ಧನ್ ಭಿನ್ನವಾಗಿದ್ದಾರೆ. ಅವರು ಯಾವ ವಿರುದ್ಧವೂ ದ್ವೇಷ ಕಟ್ಟಿಕೊಂಡಿಲ್ಲ. ಎಲ್ಲರ ಜೊತೆಯೂ ಬೆರೆಯುತ್ತಿದ್ದಾರೆ. ವಿಶೇಷ ಏನೆಂದರೆ, ಅಡುಗೆ ಮನೆಯಲ್ಲಿ ಅವರು ಹೆಚ್ಚು ಸಮಯ ಕಳೆದಿದ್ದಾರೆ. ಬೇಕರಿಯಲ್ಲಿ ಕೆಲಸ ಮಾಡಿ ಅಭ್ಯಾಸ ಇದ್ದಿದ್ದರಿಂದ ಅವರಿಗೆ ಹಲವು ಅಡುಗೆ ಬಗ್ಗೆ ತಿಳಿದಿದೆ. ಯಾವುದೇ ಬೇಸರ ಇಲ್ಲದೇ ಅವರು ಅಡುಗೆ ಮನೆ ಕಾರ್ಯವನ್ನು ನಿಭಾಯಿಸುತ್ತಾರೆ.
ಕಲರ್ಸ್ ಸೂಪರ್ ವಾಹಿನಿ ಒಂದು ಪ್ರೋಮೋ ಹಂಚಿಕೊಂಡಿದೆ. ಅದರಲ್ಲಿ ಆರ್ಯವರ್ಧನ್ ಗುರೂಜಿ ಅವರ ಮಾತುಗಳು ಕಾಮಿಡಿ ಕಿಕ್ ನೀಡುವಂತಿವೆ. ‘ರಾಕಿ ರಾಕಿ ರಾಕಿ, ನಿಮ್ಮ ವೋಟ್ ನನಗೆ ಹಾಕಿ’ ಎಂದು ಅವರು ಪ್ರಾಸ ನುಡಿದಿದ್ದಾರೆ. ‘ನನ್ನ ಕೈಯಲ್ಲಿ ಅನ್ನ ತಿಂದಿದ್ದೀಯ. ಒಂದೇ ಒಂದು ವೋಟ್ ಕೊಡು. ಬಿಗ್ ಬಾಸ್ ನಿನಗೆ ಅನ್ನ ಕೊಟ್ಟಿರಬಹುದು. ಆದರೆ ಅನ್ನ ಮಾಡಿ ಹಾಕಿದವನು ನಾನು’ ಎಂದು ಗುರೂಜಿ ಹೇಳಿದ್ದಾರೆ.
ಬಿಗ್ ಬಾಸ್ಗೆ ಬರುವುದಕ್ಕೂ ಮುನ್ನ ಸಂಖ್ಯಾಶಾಸ್ತ್ರ ಹೇಳುವ ಮೂಲಕ ಆರ್ಯವರ್ಧನ್ ಗುರೂಜಿ ಗುರುತಿಸಿಕೊಂಡಿದ್ದರು. ಅನೇಕ ಬಾರಿ ಅವರು ಟ್ರೋಲ್ ಆಗಿದ್ದುಂಟು. ‘ಬಿಗ್ ಬಾಸ್ ಕನ್ನಡ ಒಟಿಟಿ’ ಮೂಲಕ ಅವರ ಜನಪ್ರಿಯತೆ ಹೆಚ್ಚಿದೆ. ಅವರ ಸ್ವಭಾವ ಏನೆಂಬುದನ್ನು ವೀಕ್ಷಕರು ಹತ್ತಿರದಿಂದ ನೋಡಿದಂತಾಗಿದೆ.
View this post on Instagram
ಸದ್ಯ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಜಯಶ್ರೀ ಆರಾಧ್ಯ, ಸೋನು ಶ್ರೀನಿವಾಸ್ ಗೌಡ, ಜಶ್ವಂತ್, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸೋಮಣ್ಣ ಮಾಚಿಮಾಡ ಇದ್ದಾರೆ. ಇವರ ಪೈಕಿ ನಾಲ್ಕು ಜನರು ಟಿವಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್ ಕನ್ನಡ 9ನೇ ಸೀಸನ್’ನಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:53 am, Wed, 14 September 22