BBK: ಬಿಗ್ ಬಾಸ್ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್
Kichcha Sudeep | Sonu Srinivas Gowda: ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಂಡ ರೀತಿಯನ್ನು ಸುದೀಪ್ ಖಂಡಿಸಿದ್ದಾರೆ. ತಪ್ಪು ಒಪ್ಪಿಕೊಂಡು ಸೋನು ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ (Bigg Boss) ಆಟ ಎಂದರೆ ಸುಲಭ ಅಲ್ಲ. ಸ್ಪರ್ಧಿಗಳ ಮೇಲೆ 24 ಗಂಟೆಯೂ ಕ್ಯಾಮೆರಾ ಇರುತ್ತದೆ. ದೊಡ್ಮನೆ ಸದಸ್ಯರ ಪ್ರತಿ ನಡೆ ಕೂಡ ಸೆರೆಯಾಗುತ್ತದೆ. ಆದ್ದರಿಂದ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಒಂದು ವೇಳೆ ಯಾರಾದರೂ ದಾರಿ ತಪ್ಪಿದರೆ ಅಂಥವರಿಗೆ ಕಿಚ್ಚ ಸುದೀಪ್ (Kichcha Sudeep) ಅವರು ಎಚ್ಚರಿಕೆ ನೀಡುತ್ತಾರೆ. ಈ ವಾರ ಕೂಡ ಹಾಗೆಯೇ ಆಗಿದೆ. ರೀಲ್ಸ್ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಂಡ ರೀತಿ ಸುದೀಪ್ಗೆ ಇಷ್ಟ ಆಗಿಲ್ಲ. ಅದನ್ನು ಅವರು ನೇರವಾಗಿಯೇ ಹೇಳಿದ್ದಾರೆ. ಸೋನು ಮಾಡಿದ ಎಲ್ಲ ತಪ್ಪುಗಳನ್ನು ಪ್ರಸ್ತಾಪಿಸಿ, ಮುಲಾಜಿಲ್ಲದೇ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ಮನೆಯಲ್ಲಿ ಇರುವ ಇನ್ನುಳಿದ ಸ್ಪರ್ಧಿಗಳಿಗೂ ಎಚ್ಚರಿಕೆ ನೀಡಿದಂತಿತ್ತು.
ಎಲ್ಲ ಸ್ಪರ್ಧಿಗಳಿಗೂ ಆಗಾಗ ಬಿಗ್ ಬಾಸ್ ಕಡೆಯಿಂದ ಆದೇಶಗಳು ಬರುತ್ತವೆ. ಅದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಆದರೆ ಬಿಗ್ ಬಾಸ್ ನೀಡಿದ ಆದೇಶಗಳಿಗೆ ಸೋನು ಗೌಡ ಅವರು ಗೌರವ ನೀಡಿಲ್ಲ. ಅಷ್ಟೇ ಅಲ್ಲದೇ, ಬಿಗ್ ಬಾಸ್ಗೆ ಆವಾಜ್ ಹಾಕುವ ರೀತಿಯಲ್ಲಿ ಅವರು ನಡೆದುಕೊಂಡಿದ್ದಾರೆ. ಇದನ್ನು ಸುದೀಪ್ ಖಂಡಿಸಿದ್ದಾರೆ. ‘ನಿಮ್ಮ ಮಾತುಗಳು ಕ್ಯೂಟ್ ಆಗಿ ಇರಲಿಲ್ಲ. ಬಿಗ್ ಬಾಸ್ಗೆ ಅವಮಾನ ಮಾಡುವ ರೀತಿಯಲ್ಲಿ ಇತ್ತು. ಇನ್ಮುಂದೆ ನಿಮಗೆ ಬಿಗ್ ಬಾಸ್ ಆದೇಶವೇ ನೀಡುವುದಿಲ್ಲ ಎಂದುಕೊಳ್ಳಿ’ ಅಂತ ಸುದೀಪ್ ಎಚ್ಚರಿಕೆ ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಒಟಿಟಿ’ ಮನೆಯಲ್ಲಿ ಅಡುಗೆ ಮಾಡುವುದು ಮುಖ್ಯ ಕೆಲಸ. ಎಲ್ಲರೂ ಅಡುಗೆ ಕೆಲಸದಲ್ಲಿ ಭಾಗಿಯಾದರೆ ಒಳ್ಳೆಯದು. ಆದರೆ ಸೋನು ಶ್ರೀನಿವಾಸ್ ಗೌಡ ಅವರು ಅಡುಗೆ ವಿಚಾರದಲ್ಲಿ ಕಳ್ಳಾಟ ಆಡಿದ್ದಾರೆ. ತಮಗೆ ಅಡುಗೆ ಬರುತ್ತದೆ ಎಂಬ ವಿಚಾರವನ್ನು ಅವರು ಮುಚ್ಚಿಟ್ಟಿದ್ದರು. ನಾಲ್ಕನೇ ವಾರದಲ್ಲಿ ಆ ಸತ್ಯ ಬಯಲಾಗಿದೆ. ಇದನ್ನು ಗಮನಿಸಿದ ಸುದೀಪ್ ಅವರು ನೇರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
View this post on Instagram
ಸೋನು ಗೌಡ ಅವರು ಮಾತನಾಡುವಾಗ ಪದೇ ಪದೇ ಉಗಿಯುತ್ತಾರೆ. ಅದನ್ನೂ ಸುದೀಪ್ ಪ್ರಶ್ನಿಸಿದ್ದಾರೆ. ಮಾಡಿದ ತಪ್ಪುಗಳನ್ನು ವಾರದ ಪಂಚಾಯಿತಿಯಲ್ಲಿ ಎಲ್ಲರ ಎದುರು ಒಪ್ಪಿಕೊಂಡು ಸೋನು ಗೌಡ ಕಣ್ಣೀರು ಹಾಕಿದ್ದಾರೆ.
ದೊಡ್ಮನೆಯಲ್ಲಿ ಕೆಲವರು ಬಳಸುವ ಭಾಷೆ ಕೂಡ ಸುದೀಪ್ಗೆ ಹಿಡಿಸಿಲ್ಲ. ಆ ಬಗ್ಗೆಯೂ ಛಾಟಿ ಬೀಸಿದ್ದಾರೆ. ‘ನಿಮ್ಮಲ್ಲಿ ತುಂಬ ಜನ ಮಾತನಾಡುವ ಏಕವಚನ ನಿಜಕ್ಕೂ ಚಪ್ಪಲಿ ತಗೊಂಡು ಹೊಡೆದಂತೆ ಇರುತ್ತೆ. ಸ್ನೇಹಿತರಾದ ನಂತರ ಏಕವಚನ ಇರಬಾರದು ಅಂತಲ್ಲ. ಆದರೆ ನಿಮ್ಮ ಏಕವಚನದಲ್ಲಿ ಗೌರವ ಕಾಣಿಸಿಲ್ಲ’ ಎಂದು ಸುದೀಪ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.