ಬಿಗ್​ ಬಾಸ್​ ನಿರೂಪಣೆಗೆ ಸಲ್ಮಾನ್​ ಖಾನ್​ ಬದಲು ಅನಿಲ್​ ಕಪೂರ್​ ಆಯ್ಕೆ; ಪ್ರೋಮೋ ವೈರಲ್​

|

Updated on: May 31, 2024 | 8:43 PM

‘ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್​ ಬಾಸ್​ ಒಟಿಟಿ 3’ ಆರಂಭ ಆಗಲಿದೆ. ಈ ಕಾರ್ಯಕ್ರಮವನ್ನು ಸಲ್ಮಾನ್​ ಖಾನ್​ ನಿರೂಪಣೆ ಮಾಡುತ್ತಿಲ್ಲ. ಅವರ ಬದಲು ಅನಿಲ್​ ಕಪೂರ್​ ಅವರು ಆಯ್ಕೆ ಆಗಿದ್ದಾರೆ. ಅನಿಲ್​ ಕಪೂರ್​ ಅವರಿಗೆ ಇದು ಹೊಸ ಅನುಭವ. ಈ ಜವಾಬ್ದಾರಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಬಿಗ್​ ಬಾಸ್​ ನಿರೂಪಣೆಗೆ ಸಲ್ಮಾನ್​ ಖಾನ್​ ಬದಲು ಅನಿಲ್​ ಕಪೂರ್​ ಆಯ್ಕೆ; ಪ್ರೋಮೋ ವೈರಲ್​
ಅನಿಲ್​ ಕಪೂರ್​, ಸಲ್ಮಾನ್​ ಖಾನ್​
Follow us on

ನಟ ಸಲ್ಮಾನ್​ ಖಾನ್​ (Salman Khan) ಅವರು ಹಲವು ವರ್ಷಗಳಿಂದ ಬಿಗ್​ ಬಾಸ್​ ಕಾರ್ಯಕ್ರಮದ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಕಳೆದ ವರ್ಷ ಅವರು ‘ಬಿಗ್​ ಬಾಸ್​ ಒಟಿಟಿ 2’ ಕೂಡ ನಡೆಸಿಕೊಟ್ಟಿದ್ದರು. ಆದರೆ ಈ ಬಾರಿ ಒಟಿಟಿ ವರ್ಷನ್​ನಿಂದ ದೂರ ಉಳಿಯಲು ಅವರು ನಿರ್ಧರಿಸಿದ್ದಾರೆ. ಅವರ ಬದಲಿಗೆ ಅನಿಲ್​ ಕಪೂರ್​ ಅವರ ಎಂಟ್ರಿ ಆಗಿದೆ. ಹೌದು, ಹಿಂದಿಯ ‘ಬಿಗ್​ ಬಾಸ್​ ಒಟಿಟಿ 3’ (Bigg Boss OTT 3) ಕಾರ್ಯಕ್ರಮವನ್ನು ಈ ಬಾರಿ ಅನಿಲ್​ ಕಪೂರ್​ (Anil Kapoor) ನಡೆಸಿಕೊಡಲಿದ್ದಾರೆ. ಈ ವಿಷಯ ತಿಳಿಸಲು ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ. ಇದನ್ನು ಅನಿಲ್​ ಕಪೂರ್​ ಪುತ್ರಿ ಸೋನಂ ಕಪೂರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಬಿಡುಗಡೆ ಆಗಿರುವ ಈ ಪ್ರೋಮೋದಲ್ಲಿ ಅನಿಲ್​ ಕಪೂರ್​ ಅವರ ಮುಖ ಕಾಣಿಸಿಲ್ಲ. ಆದರೆ ಧ್ವನಿ ಕೇಳಿಸಿದೆ. ಹಾಗಾಗಿ ಇದು ಪಕ್ಕಾ ಅನಿಲ್​ ಕಪೂರ್​ ಎಂಬುದು ಖಚಿತವಾಗಿದೆ. ಅಲ್ಲದೇ ಸೋನಂ ಕಪೂರ್​ ಅವರು ಪ್ರೋಮೋ ಶೇರ್​ ಮಾಡಿಕೊಂಡು, ‘ಪ್ರತಿಭಾವಂತ, ಪರಿಶ್ರಮಿ ಮತ್ತು ಹ್ಯಾಂಡ್ಸಮ್​ ವ್ಯಕ್ತಿಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ ಅನ್ನು ಕರಣ್​ ಜೋಹರ್​ ನಿರೂಪಣೆ ಮಾಡಿದ್ದರು. ಆದರೆ ಎರಡನೇ ಸೀಸನ್​ಗೆ ಸಲ್ಮಾನ್​ ಖಾನ್​ ಎಂಟ್ರಿ ಆಗಿತ್ತು. ಮೂರನೇ ಸೀಸನ್​ನಲ್ಲಿ ಸಲ್ಮಾನ್​ ಖಾನ್​ ಅವರು ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಸಿಕಂದರ್​’ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ‘ಬಿಗ್​ ಬಾಸ್​ ಒಟಿಟಿ ಸೀಸನ್​ 3’ ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡರೆ ಸಮಯ ಹೊಂದಿಸುವುದು ಸುಲಭವಲ್ಲ. ಹಾಗಾಗಿ ಅವರು ಒಟಿಟಿ ವರ್ಷನ್​ನ ನಿರೂಪಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಿಸ್ಸಿಂಗ್​ ಸೀನ್​ ಮಾಡಲ್ಲ ಅಂತ ಸಲ್ಮಾನ್​ ಖಾನ್​ ಸುಳ್ಳು ಹೇಳಿದ್ರಾ? ಫೋಟೋ ವೈರಲ್​

ಇದು ವಿವಾದಾತ್ಮಕ ಶೋ. ಹೊರ ಜಗತ್ತಿನಲ್ಲಿ ಕಾಂಟ್ರಿವರ್ಸಿ ಮಾಡಿಕೊಂಡ ವ್ಯಕ್ತಿಗಳೇ ಹೆಚ್ಚಾಗಿ ಈ ಕಾರ್ಯಕ್ರಮಕ್ಕೆ ಬರುತ್ತಾರೆ. ಅಂಥವರನ್ನು ಹ್ಯಾಂಡಲ್​ ಮಾಡುವುದು ಸುಲಭವಲ್ಲ. ಅನೇಕ ಬಾರಿ ಸಲ್ಮಾನ್​ ಖಾನ್​ ಅವರು ಕೋಪ ಮಾಡಿಕೊಂಡಿದ್ದುಂಟು. ಸ್ಪರ್ಧಿಗಳ ಎದುರು ಅವರು ಕಿರುಚಾಡಿದ್ದೂ ಇದೆ. ಈ ಬಾರಿ ಅನಿಲ್​ ಕಪೂರ್​ಗೆ ನಿರೂಪಣೆಯ ಜವಾಬ್ದಾರಿ ನೀಡಲಾಗಿದೆ. ಅವರು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.