ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ವರ್ಷದಿಂದ ವರ್ಷಕ್ಕೆ ಹೊಸ ಸ್ವರೂಪ ಪಡೆದುಕೊಂಡು ಸಾಗುತ್ತಿದೆ. ಹಿಂದಿ ಬಿಗ್ ಬಾಸ್ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ಥೀಮ್ಗಳನ್ನು ಪರಿಚಯಿಸಲಾಗುತ್ತಿದೆ. ಕಳೆದ ವರ್ಷ ಮೊದಲ ಬಾರಿಗೆ ‘ಬಿಗ್ ಬಾಸ್ ಹಿಂದಿ ಒಟಿಟಿ’ (Bigg Boss OTT) ಆವೃತ್ತಿ ಆರಂಭ ಮಾಡಲಾಯಿತು. ಅಲ್ಲಿಯವರೆಗೆ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಈ ಜನಪ್ರಿಯ ರಿಯಾಲಿಟಿ ಶೋ ಮೊದಲ ಬಾರಿಗೆ 2021ರಲ್ಲಿ ಒಟಿಟಿಯಲ್ಲಿ ಬಿತ್ತರವಾಯಿತು. ಅದನ್ನು ಕರಣ್ ಜೋಹರ್ (Karan Johar) ಅವರು ನಿರೂಪಣೆ ಮಾಡಿದ್ದರು. ಆದರೆ ಅದರ ಎರಡನೇ ಸೀಸನ್ ಬರುತ್ತದೆ ಎಂದು ಕಾದು ಕುಳಿತಿದ್ದ ವೀಕ್ಷಕರಿಗೆ ಬೇಸರ ಆಗುವಂತಹ ಸುದ್ದಿ ಕೇಳಿಬಂದಿದೆ. ‘ಬಿಗ್ ಬಾಸ್ ಹಿಂದಿ ಒಟಿಟಿ ಸೀಸನ್ 2’ ಪ್ರಸಾರ ಆಗುವುದು ಅನುಮಾನ ಎನ್ನಲಾಗಿದೆ.
ಟಿವಿ ಆವೃತ್ತಿಗೆ ಹೋಲಿಸಿದರೆ ಒಟಿಟಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ಬೇರೆಯದೇ ರೀತಿ ಇತ್ತು. ಭಿನ್ನ ಮನಸ್ಥಿತಿಯ ಅನೇಕ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಸೆನ್ಸಾರ್ ವಿಚಾರದಲ್ಲಿ ಹೆಚ್ಚೇನೂ ಮಡಿವಂತಿಕೆ ಇಲ್ಲದೇ ಈ ಶೋ ಪ್ರಸಾರ ಆಯಿತು. ತುಂಬ ಬೋಲ್ಡ್ ಎನಿಸುವಂತಹ ಟಾಸ್ಕ್ಗಳನ್ನು ನೀಡಲಾಗಿತ್ತು. ಸ್ಪರ್ಧಿಗಳು ಕೂಡ ಯಾವುದೇ ಮುಲಾಜಿಲ್ಲದೇ ಅದರಲ್ಲಿ ಭಾಗವಹಿಸಿದ್ದರು. ಏನೇ ಸರ್ಕಸ್ ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಟಿಆರ್ಪಿ ಗಿಟ್ಟಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.
ಅಂದುಕೊಂಡ ರೀತಿಯಲ್ಲಿ ವೀವ್ಸ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮತ್ತೊಮ್ಮೆ ಒಟಿಟಿ ಸೀಸನ್ ಆರಂಭಿಸಲು ನಿರ್ಮಾಪಕರು ಧೈರ್ಯ ತೋರಿಸುತ್ತಿಲ್ಲ. ಹಾಗಾಗಿ ‘ಬಿಗ್ ಬಾಸ್ ಒಟಿಟಿ 2’ ಶುರುವಾಗುವುದಿಲ್ಲ ಎಂಬ ಮಾಹಿತಿ ಕೇಳಿಬಂದಿದೆ. ಅದರ ಬದಲು ನೇರವಾಗಿ ಟಿವಿ ಸೀಸನ್ ಶುರುವಾಗಲಿದೆ. ಅದನ್ನು ಸಲ್ಮಾನ್ ಖಾನ್ ಅವರು ನಡೆಸಿಕೊಡಲಿದ್ದಾರೆ.
ದಿನದಿಂದ ದಿನಕ್ಕೆ ಒಟಿಟಿ ವ್ಯಾಪ್ತಿ ಹಿರಿದಾಗುತ್ತಿದೆ. ಹೊಸ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸುವಲ್ಲಿ, ಹೊಸ ಸಿನಿಮಾಗಳನ್ನು ಕೊಂಡುಕೊಳ್ಳುವಲ್ಲಿ, ನೂತನ ವೆಬ್ ಸೀರಿಸ್ಗಳನ್ನು ನಿರ್ಮಾಣ ಮಾಡುವಲ್ಲಿ ಒಟಿಟಿ ಸಂಸ್ಥೆಗಳ ನಡುವೆ ಭಾರಿ ಪೈಪೋಟಿ ಇದೆ. ಆ ಕಾರಣದಿಂದಲೇ ವೂಟ್ ಸೆಲೆಕ್ಟ್ನಲ್ಲಿ ‘ಬಿಗ್ ಬಾಸ್ ಹಿಂದಿ ಒಟಿಟಿ’ ಮೊದಲ ಸೀಸನ್ ಪ್ರಸಾರವಾಗಿತ್ತು. ದಿವ್ಯಾ ಅಗರ್ವಾಲ್, ಪ್ರತೀಕ್ ಸೆಹಜ್ಪಾಲ್, ರಾಕೇಶ್ ಬಾಪಟ್, ಶಮಿತಾ ಶೆಟ್ಟಿ, ಉರ್ಫಿ ಜಾವೇದ್, ನೇಹಾ ಬಾಸಿನ್, ರಿಧಿಮಾ ಪಂಡಿತ್, ಅಕ್ಷರಾ ಸಿಂಗ್ ಮುಂತಾದವರು ಭಾಗವಹಿಸಿದ್ದರು. ದಿವ್ಯಾ ಅಗರ್ವಾಲ್ ಅವರು ವಿನ್ನರ್ ಆಗಿ ಹೊರಹೊಮ್ಮಿದರು. ಆ ಶೋನಲ್ಲಿ ಭಾಗವಹಿಸಿದ ಬಳಿಕ ಉರ್ಫಿ ಜಾವೇದ್ ಅವರ ಖ್ಯಾತಿ ದುಪ್ಪಟ್ಟಾಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.