ಮನರಂಜನಾ ಕ್ಷೇತ್ರದಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗಳು (OTT Platform) ಪ್ರಬಲವಾಗಿವೆ. ದಿನೇದಿನೇ ಒಟಿಟಿ ಸಂಸ್ಥೆಗಳ ವ್ಯಾಪ್ತಿ ಹೆಚ್ಚುತ್ತಿದೆ. ಅನೇಕ ಸೆಲೆಬ್ರಿಟಿಗಳು ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಭರಪೂರ ಹಣ ಗಳಿಸುತ್ತಿದ್ದಾರೆ. ಮನೆಯಲ್ಲೇ ಕುಳಿತು ಸಿನಿಮಾ ವೀಕ್ಷಿಸುವ ಟ್ರೆಂಡ್ಗೆ ಪ್ರೇಕ್ಷಕರು ಕೂಡ ಒಗ್ಗಿಕೊಂಡಿದ್ದಾರೆ. ಆದರೆ ಒಟಿಟಿಗಳ (OTT) ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯ ಇದೆ. ಇದರಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳಲ್ಲಿ ಅಶ್ಲೀಲ ದೃಶ್ಯಗಳು, ಅವಾಚ್ಯ ಶಬ್ದಗಳು ಇರುತ್ತವೆ ಎಂಬ ಆರೋಪ ಇದೆ. ಬಾಲಿವುಡ್ನ ಖ್ಯಾತ ಹಾಸ್ಯ ನಟ ರಾಜ್ಪಾಲ್ ಯಾದವ್ (Rajpal Yadav) ಅವರು ಕೂಡ ಅದೇ ರೀತಿಯ ಮನೋಭಾವ ಹೊಂದಿದ್ದರು. ಹಾಗಾಗಿ ಅವರು ಒಟಿಟಿಯಲ್ಲಿ ನಟಿಸಲು ಹಿಂದೇಟು ಹಾಕಿದ್ದರು. ಆ ಕುರಿತು ಅವರೀಗ ಬಾಯಿ ಬಿಟ್ಟಿದ್ದಾರೆ.
ರಾಜ್ಪಾಲ್ ಯಾದವ್ ಅವರು ಹಲವಾರು ವರ್ಷಗಳಿಂದ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಕಾಮಿಡಿ ಸಿನಿಮಾಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಆ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ರಾಜ್ಪಾಲ್ ಯಾವದ್ ನಟಿಸಿದ ‘ಭೂಲ್ ಭುಲಯ್ಯ 2’ ಚಿತ್ರ 175 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿ ಬೀಗುತ್ತಿದೆ. ಇಷ್ಟೆಲ್ಲ ಜನಪ್ರಿಯತೆ ಇದ್ದರೂ ಕೂಡ ಅವರು ಒಟಿಟಿಯಿಂದ ಅಂತರ ಕಾಯ್ದುಕೊಂಡಿದ್ದರು. ಅದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
‘ಅವಾಚ್ಯ ಶಬ್ದಗಳು ಹಾಗೂ ಅಶ್ಲೀಲ ದೃಶ್ಯಗಳಿರುವ ಸಿನಿಮಾ ಅಥವಾ ವೆಬ್ ಸಿರೀಸ್ನಲ್ಲಿ ನಟಿಸಲು ನಾನು ಸಿದ್ಧನಿಲ್ಲ. ಆ ಕಾರಣದಿಂದಲೇ 5 ವರ್ಷಗಳಿಂದ ಒಟಿಟಿಯಲ್ಲಿ ನಟಿಸಿಲ್ಲ. ನನ್ನ ನಟನೆಯನ್ನು ಪ್ರೇಕ್ಷಕರು ಕುಟುಂಬ ಸಮೇತ ನೋಡುವಂತೆ ಇರಬೇಕು. ಹಾಗಂತ ನಾನು ಬೇರೆ ಶೋ, ಸಿರೀಸ್ ಮತ್ತು ಸಿನಿಮಾಗಳ ವಿರೋಧಿ ಅಲ್ಲ. ಅದಕ್ಕೂ ಬೇರೆಯದೇ ಪ್ರೇಕ್ಷಕರು ಇದ್ದಾರೆ’ ಎಂದು ರಾಜ್ಪಾಲ್ ಯಾದವ್ ಹೇಳಿದ್ದಾರೆ. ಅವರು ಈಗ ಒಟಿಟಿಗೆ ಕಾಲಿಟ್ಟಿದ್ದಾರೆ. ಹಲವು ವೆಬ್ ಸಿರೀಸ್ಗಳಲ್ಲಿ ನಟಿಸುತ್ತಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರು ಒಟ್ಟಾಗಿ ಕುಳಿತು ನೋಡುವಂತಹ ಕಥೆಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಒಟಿಟಿಯಲ್ಲಿ ಅವರ ನಟನೆಯನ್ನು ನೋಡಿ ಎಂಜಾಯ್ ಮಾಡಲು ಪ್ರೇಕ್ಷಕರು ಕಾದಿದ್ದಾರೆ.
ಇದನ್ನೂ ಓದಿ: ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದ ಕಂಗನಾ; ಒಟಿಟಿಯಲ್ಲೂ ‘ಧಾಕಡ್’ ಚಿತ್ರಕ್ಕೆ ಬೇಡಿಕೆ ಇಲ್ಲ
‘299 ಅಥವಾ 499 ರೂಪಾಯಿಗೆ ನಾನು ಸಿಗಲ್ಲ’; ಮತ್ತೆ ಗರ್ವದ ಮಾತನಾಡಿದ ಜಾನ್ ಅಬ್ರಾಹಂ
Published On - 9:25 am, Fri, 24 June 22