14 ವರ್ಷ 6 ಕೊಲೆ, ಗೃಹಿಣಿಯೊಬ್ಬಳ ದ್ವೇಷದ ನಿಜ ಕತೆ ನೆಟ್ಫ್ಲಿಕ್ಸ್ನಲ್ಲಿ
Netflix: ಕೂಡತ್ತೈ ಸೈನೈಡ್ ಪ್ರಕರಣ ಅಥವಾ ಜಾಲಿ ಜೋಸೆಫ್ ಕೇಸ್ ಎಂದು ಕರೆಯಲಾಗುವ ಕೇರಳದಲ್ಲಿ ನಡೆದ ಅತ್ಯಂತ ಅಮಾನುಷ, ಭಯಾನಕ ಸರಣಿ ಹತ್ಯಾ ಪ್ರಕರಣದ ಡಾಕ್ಯುಮೆಂಟರಿ ನೆಟ್ಫ್ಲಿಕ್ಸ್ನಲ್ಲಿ ಇದೇ ತಿಂಗಳು ಬಿಡುಗಡೆ ಆಗಲಿದೆ.
ನೆಟ್ಫ್ಲಿಕ್ಸ್ (Netflix) ತನ್ನ ಅತ್ಯುತ್ತಮ ವೆಬ್ ಸರಣಿ, ಸಿನಿಮಾಗಳ ಜೊತೆಗೆ ಡಾಕ್ಯುಮೆಂಟರಿಗಳಿಗೂ (Documentary) ದೊಡ್ಡ ವೇದಿಕೆಯನ್ನು ಒದಗಿಸಿದೆ. ಇತ್ತೀಚೆಗಂತೂ ನೆಟ್ಫ್ಲಿಕ್ಸ್ನಲ್ಲಿ ಒಂದರ ಹಿಂದೊಂದು ಕ್ರೈಂ ಡಾಕ್ಯುಮೆಂಟರಿ ಬಿಡುಗಡೆ ಆಗುತ್ತಿದ್ದು ಸಖತ್ ಹಿಟ್ ಆಗುತ್ತಿವೆ. ಬೆಂಗಳೂರಿನಲ್ಲಿಯೇ ನಡೆದ ಕೆಲವು ಭಯಾನಕ ಪ್ರಕರಣಗಳು, ದೆಹಲಿಯ ಬುರಾರಿ ಪ್ರಕರಣ ಇನ್ನೂ ಕೆಲವು ದೇಶವನ್ನೇ ತಲ್ಲಣಗೊಳಿಸಿದ್ದ ಪ್ರಕರಣಗಳ ಕ್ರೈಂ ಡಾಕ್ಯುಮೆಂಟರಿಗಳನ್ನು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ ಗೃಹಿಣಿಯೊಬ್ಬಳ ದ್ವೇಷದ ನೈಜ ಕತೆಯ ಡಾಕ್ಯುಮೆಂಟರಿ ಬಿಡುಗಡೆ ಮಾಡುತ್ತಿದೆ ನೆಟ್ಫ್ಲಿಕ್ಸ್.
ಕೂಡತ್ತೈ ಸೈನೈಡ್ ಪ್ರಕರಣ ಅಥವಾ ಜಾಲಿ ಜೋಸೆಫ್ ಕೇಸ್ ಎಂದು ಕರೆಯಲಾಗುವ ಕೇರಳದಲ್ಲಿ ನಡೆದ ಅತ್ಯಂತ ಅಮಾನುಷ, ಭಯಾನಕ ಸರಣಿ ಹತ್ಯಾ ಪ್ರಕರಣದ ಡಾಕ್ಯುಮೆಂಟರಿ ನೆಟ್ಫ್ಲಿಕ್ಸ್ನಲ್ಲಿ ಇದೇ ತಿಂಗಳು ಬಿಡುಗಡೆ ಆಗಲಿದೆ. ಈ ಕ್ರೈಂ ಡಾಕ್ಯುಮೆಂಟರಿಯ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ. ಈ ಅಮಾನುಷ ಕೃತ್ಯದ ಡಾಕ್ಯುಮೆಂಟರಿಗೆ ‘ಕರ್ರಿ ಆಂಡ್ ಸೈನೈಡ್: ದಿ ಜಾಲಿ ಜೋಸೆಫ್ ಕೇಸ್’ ಎಂದು ಹೆಸರಿಡಲಾಗಿದೆ.
ಜಾಲಿ ಜೋಸೆಫ್ ಪ್ರಕರಣ ಎಂಥಹವರಿಗೂ ಭಯ ಹುಟ್ಟಿಸುವ ಪ್ರಕರಣ. ಜಾಲಿ ಜೋಸೆಫ್ ಒಬ್ಬ ಸಾಮಾನ್ಯ ಮಹಿಳೆ. ರಾಯ್ ಥಾಮಸ್ ಎಂಬುವರನ್ನು ವಿವಾಹವಾಗಿ ಕೋಯಿಕ್ಕೋಡ್ನ ಕೂಡತ್ತೈನಲ್ಲಿ ನೆಲೆಸಿದ್ದರು. 2002 ರಲ್ಲಿ ಜಾಲಿ ಜೋಸೆಫ್ರ ಅತ್ತೆ, ವಾಕಿಂಗ್ ಮುಗಿಸಿ ಮನೆಗೆ ಬಂದು ಒಂದು ಗ್ಲಾಸ್ ನೀರು ಕುಡಿಯುತ್ತಿದ್ದಂತೆ ಕುಸಿದು ಬಿದ್ದು ಸತ್ತರು. ವೈದ್ಯರು, ಆಕೆಯದ್ದು ಹೃದಯಾಘಾತ ಎಂದರು. 2008 ರಲ್ಲಿ ಜಾಲಿ ಜೋಸೆಫ್ರ ಮಾವ ಸಹ ಅದೇ ರೀತಿ ಕುಸಿದು ಬಿದ್ದು ನಿಧನ ಹೊಂದಿದರು. ಅದೂ ಸಹ ಹೃದಯಾಘಾತವೇ ಎಂದರು ವೈದ್ಯರು. ಈ ಎರಡೂ ಪ್ರಕರಣ ನಡೆದಾಗ ಜಾಲಿ ಜೋಸೆಫ್ ಸ್ಥಳದಲ್ಲಿದ್ದರು.
ಇದನ್ನೂ ಓದಿ:ನೆಟ್ಫ್ಲಿಕ್ಸ್ ಅರ್ಧ ವಾರ್ಷಿಕ ‘ಟಾಪ್’ ಪಟ್ಟಿ ಬಿಡುಗಡೆ: ಭಾರತದ ಕಂಟೆಂಟ್ಗಳಿಗೆ ಎಷ್ಟನೇ ಸ್ಥಾನ
2011ರಲ್ಲಿ ಜಾಲಿ ಜೋಸೆಫ್ರ ಪತಿ ರಾಯ್ ಥಾಮಸ್ ಅನ್ನ-ಸಾರು ತಿಂದ ಕೆಲವು ಹೊತ್ತಿನ ಬಳಿಕ ಬಾತ್ರೂಂನಲ್ಲಿ ಕುಸಿದು ಬಿದ್ದು ನಿಧನ ಹೊಂದಿದರು. ಅವರ ಪೋಸ್ಟ್ ಮಾರ್ಟನ್ ಮಾಡಲಾಗಿ, ಅವರ ದೇಹದಲ್ಲಿ ವಿಷವಿದ್ದಿದ್ದು ತಿಳಿಯಿತಾದರೂ, ಅವರದ್ದು ಆತ್ಮಹತ್ಯೆ ಎಂದು ವರದಿಯಾಯ್ತು. ರಾಯ್ನ ಸೋದರ ಮಾವ, ಮ್ಯಾಥಿವ್ ಮಂಜಯಾಡಿಲ್, ರಾಯ್ನ ಸಾವಿನ ಕುರಿತು ಉನ್ನತ ತನಿಖೆಗೆ ಆಗ್ರಹಿಸಿದ್ದರು. ದಿನವೂ ವಿಸ್ಕಿ ಕುಡಿಯುವ ಚಟವಿದ್ದ ಅವರು, ಒಮ್ಮೆ ಹೀಗೆ ವಿಸ್ಕಿ ಕುಡಿದ ಬಳಿಕ ಕುಸಿದು ಬಿದ್ದು ಸಾವನ್ನಪ್ಪಿದರು. ಅದಾದ ಬಳಿಕ 2016ರಲ್ಲಿ ರಾಯ್ರ ಹತ್ತಿರದ ಸಂಬಂಧಿ ಶಾಜುರ ಪುಟ್ಟ ಮಗಳು ಅಲ್ಫೈನ್ ಶಾಜು ಸಹ ಊಟ ಮಾಡುವಾಗಲೇ ನಿಧನ ಹೊಂದಿದಳು. ಅದೇ ವರ್ಷ ಶಾಜುರ ಪತ್ನಿ ಸೆಲಿ ಶಾಜು ನೀರು ಕುಡಿದು ನಿಧನ ಹೊಂದಿದರು. ಘಟನೆ ನಡೆದಾಗ ಜಾಲಿ ಜೋಸೆಫ್ ಸ್ಥಳದಲ್ಲಿಯೇ ಇದ್ದರು.
ಹೀಗೆ ಬರೋಬ್ಬರಿ ಆರು ಮಂದಿ ಒಬ್ಬರ ಹಿಂದೊಬ್ಬರು ನಿಧನ ಹೊಂದಿದ ಬಳಿಕ ಜಾಲಿ ಜೋಸೆಫ್ರ ಸಹೋದರ ರೋಜೋ ಥಾಮಸ್ಗೆ ಅನುಮಾನ ಬಂದು ಆರ್ಟಿಐ ಅರ್ಜಿಗಳನ್ನು ದಾಖಲಿಸಿ ಮರಣೋತ್ತರ ಪರೀಕ್ಷೆಯ ವರದಿಗಳನ್ನು ತರಿಸಿಕೊಂಡರು. ತನ್ನ ಅಣ್ಣ ರಾಯ್ ನಿಧನ ಹೊಂದಿದಾಗ ತನ್ನ ಅತ್ತಿಗೆ ಜಾಲಿ ಜೋಸೆಫ್ ಹೇಳಿದ್ದ ವಿಷಯಗಳಿಗೂ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಇರುವ ವಿಷಯಗಳಿಗೂ ತಾಳೆ ಇಲ್ಲದ ಕಾರಣ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆದು 2019ರಲ್ಲಿ ಜಾಲಿ ಜೋಸೆಫ್ ಬಂಧನವಾಯ್ತು. ವಿಚಾರಣೆ ವೇಳೆ ಜಾಲಿ, ತಾನೇ ಆ ಆರು ಮಂದಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡರು.
ಜಾಲಿ ಜೋಸೆಫ್, ಸೈನೈಡ್ ಬಳಸಿ ಆರು ಮಂದಿ ತನ್ನವರನ್ನೇ ಕೊಂದಿದ್ದರು. ಇಲಿ ಕೊಲ್ಲಲೆಂದು ಕಾರಣ ನೀಡಿ ತಮ್ಮ ಸಂಬಂಧಿಯಿಂದಲೇ ಸೈನೈಡ್ ಅನ್ನು ಜಾಲಿ ಜೋಸೆಫ್ ಪಡೆದುಕೊಂಡಿದ್ದಳು. ಜಾಲಿ ಜೋಸೆಫ್ಳ ಈ ಭಯಾನಕ ಕೃತ್ಯ ಇದೀಗ ನೆಟ್ಫ್ಲಿಕ್ಸ್ನಲ್ಲಿ ಡಾಕ್ಯುಮೆಂಟರಿಯಾಗಿ ಡಿಸೆಂಬರ್ 22ರಿಂದ ಸ್ಟ್ರೀಮ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ