ಓಟಿಟಿಯಲ್ಲಿ ಕನ್ನಡ ಚಿತ್ರಗಳ ಬೇಡಿಕೆ ಏರುತ್ತಿದೆ. ಹಲವು ಚಿತ್ರಗಳು ಉತ್ತಮ ಆಫರ್ ಗಿಟ್ಟಿಸಿಕೊಳ್ಳುತ್ತಿದ್ದು, ಬಹಳಷ್ಟು ನೇರವಾಗಿ ಓಟಿಟಿಯಲ್ಲೇ ತೆರೆಕಾಣುತ್ತಿವೆ. ಈ ಪೈಕಿ ಪುನೀತ್ ರಾಜ್ಕುಮಾರ್ (Puneeth Rajkumar) ನಿರ್ಮಾಣದ ಮೂರು ಚಿತ್ರಗಳು ಈ ತಿಂಗಳಲ್ಲಿ ರಿಲೀಸ್ ಆಗಲಿವೆ. ಈಗಾಗಲೇ ಒಂದು ಚಿತ್ರ ತೆರೆಕಂಡಿದೆ. ಹೌದು. ದಾನಿಶ್ ಸೇಠ್ ನಟನೆಯ ‘ಒನ್ ಕಟ್ ಟು ಕಟ್’ (One Cut Two Cut) ಚಿತ್ರ ಇಂದಿನಿಂದ ಅಮೆಜಾನ್ ಪ್ರೈಮ್ನಲ್ಲಿ (ಫೆ.3) ಬಿತ್ತರವಾಗುತ್ತಿದೆ. ಪಿಆರ್ಕೆ ಪ್ರೊಡಕ್ಷನ್ಸ್ ಉಸ್ತುವಾರಿ ಹೊತ್ತಿರುವ ಅಶ್ವಿನಿ ಪುನೀತ್ ರಾಜ್ಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದು, ‘ಗೋಪಿ ಈಗ ನಿಮ್ಮ ಮುಂದೆ ಬಂದಿದ್ದಾನೆ’ ಎಂದು ಬರೆದಿದ್ದಾರೆ. ನಟ ದಾನಿಶ್ ಸೇಠ್ (Danish Sait) ‘ಒನ್ ಕಟ್ ಟು ಕಟ್’ನಲ್ಲಿ ಗೋಪಿ ಎಂಬ ಪಾತ್ರವನ್ನು ನಿರ್ವಹಿಸಿದ್ದು, ವಿಭಿನ್ನ ಗೆಟಪ್ ಹಾಗೂ ಸಂಭಾಷಣೆಗಳಿಂದ ಟ್ರೈಲರ್ನಲ್ಲಿ ಗಮನ ಸೆಳೆದಿದ್ದರು. ಪಿಆರ್ಕೆ ಬ್ಯಾನರ್ನಲ್ಲಿ ಎರಡನೇ ಬಾರಿ ಕಾಣಿಸಿಕೊಂಡಿರುವ ದಾನಿಶ್ ಸೇಠ್, ಈ ಹಿಂದೆ ‘ಫ್ರೆಂಚ್ ಬಿರಿಯಾನಿ’ಯಲ್ಲಿ ಗಮನ ಸೆಳೆದಿದ್ದರು.
ವಂಶಿಧರ್ ಭೋಗರಾಜು ‘ಒನ್ ಕಟ್ ಟು ಕಟ್’ಗೆ ಆಕ್ಷನ್ ಕಟ್ ಹೇಳಿದ್ದು, ದಾನಿಶ್ ಸೇಠ್ ಅವರೊಂದಿಗೆ ಸಂಯುಕ್ತಾ ಹೊರನಾಡು, ಪ್ರಕಾಶ್ ಬೆಳವಾಡಿ, ವಿನೀತ್ ಕುಮಾರ್ ಮೊದಲಾದವರು ನಟಿಸುತ್ತಿದ್ದಾರೆ. ಸಂಪೂರ್ಣ ಕಾಮಿಡಿ ಎಂಟರ್ಟೈನರ್ ಮಾದರಿಯಲ್ಲಿ ಚಿತ್ರ ಮೂಡಿಬಂದಿದೆ. ‘ಒನ್ ಕಟ್ ಟು ಕಟ್’ನಲ್ಲಿ ಸರ್ಕಾರಿ ಶಾಲೆ ಉಳಿಸಿ ಎಂಬ ಸಂದೇಶವೂ ಇದೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
ಗೋಪಿ ಈಗ ನಿಮ್ಮ ಮುಂದೆ.
Here is “An Gopi”#OneCutTwoCutOnPrime, watch now on @PrimeVideoIN.?: https://t.co/8Is5EiSFYc@PRK_Productions @PRKAudio @danishsait @VamBho #PrakashBelawadi @samyuktahornad #VineethBeepKumar @RoopaRayappa #Sahitanand @DoCreativeLabs @NakulAbhyankar pic.twitter.com/rlcq5TvovT
— Ashwini Puneeth Rajkumar (@ashwinipuneet) February 2, 2022
ಚಿತ್ರವನ್ನು ವೀಕ್ಷಿಸಿ ಹೊಗಳಿದ್ದ ಪುನೀತ್ ರಾಜ್ಕುಮಾರ್:
ಈ ಹಿಂದೆ ಟಿವಿ9 ಡಿಜಿಟಲ್ ಜತೆ ಮಾತನಾಡಿದ್ದ ದಾನಿಶ್ ಸೇಠ್ ಚಿತ್ರದ ಕುರಿತು, ಪುನೀತ್ ರಾಜ್ಕುಮಾರ್ ಚಿತ್ರ ವೀಕ್ಷಿಸಿದ್ದರ ಕುರಿತು ಆಸಕ್ತಿಕರ ವಿಚಾರ ಹಂಚಿಕೊಂಡಿದ್ದರು. ಅದಕ್ಕೂ ಮುನ್ನ ಪಿಆರ್ಕೆ ಪ್ರೊಡಕ್ಷನ್ಸ್ ಕುರಿತು ಮಾತನಾಡಿದ್ದ ದಾನಿಶ್, ‘‘10 ವರ್ಷದ ಮೊದಲು ನಿಮ್ಮದು ಒಂದು ಸಿನಿಮಾ ಬರುತ್ತದೆ ಎಂದು ಯಾರಾದರೂ ಹೇಳಿದ್ದರೆ ನಾನೇ ನಂಬುತ್ತಿರಲಿಲ್ಲ. ಆದರೆ, ಈಗ ಮೂರು ಸಿನಿಮಾ, ಒಂದು ವೆಬ್ ಸೀರಿಸ್ನಲ್ಲಿ ನಟಿಸಿದ್ದೇನೆ. ಪಿಆರ್ಕೆ ಬ್ಯಾನರ್ ಅಡಿಯಲ್ಲಿ ನಟಿಸಿದ ಎರಡನೇ ಸಿನಿಮಾ. ಟ್ಯಾಲೆಂಟ್ ಇದ್ದರೆ ಸಾಧನೆ ಮಾಡೋಕೆ ಆಗಲ್ಲ. ಅದನ್ನು ಗುರುತಿಸುವವರೂ ಇರಬೇಕು. ಪಿಆರ್ಕೆ ಆ ಕೆಲಸವನ್ನು ಮಾಡುತ್ತಿದೆ. ಆ ಬಗ್ಗೆ ಖುಷಿ ಇದೆ’’ ಎಂದು ಹೇಳಿದ್ದರು.
ಪುನೀತ್ ಚಿತ್ರವನ್ನು ವೀಕ್ಷಿಸಿದ್ದರ ಬಗ್ಗೆ ಮಾತನಾಡಿದ್ದ ಅವರು, ‘‘ಪುನೀತ್ ಅವರು ‘ಒನ್ ಕಟ್ ಟೂ ಕಟ್’ ಚಿತ್ರವನ್ನು ನೋಡಿದ್ದರು. ಚಿತ್ರ ವೀಕ್ಷಿಸುತ್ತಾ ಸಾಕಷ್ಟು ನಕ್ಕಿದ್ದ ಅವರಿಗೆ ಸಿನಿಮಾ ತುಂಬಾ ಇಷ್ಟವಾಗಿತ್ತು. ಪುನೀತ್ ಪ್ರೊಡಕ್ಷನ್ ವಿಚಾರದಲ್ಲಿ ಬಹಳ ಇನ್ವಾಲ್ ಆಗುತ್ತಿದ್ದರು. ಏನಾಗುತ್ತಿದೆ ಎನ್ನುವ ಬಗ್ಗೆ ನಿತ್ಯವೂ ಅಪ್ಡೇಟ್ ಕೇಳುತ್ತಿದ್ದರು. ಶೂಟಿಂಗ್ ಆದ ಬಳಿಕ ಅವರು ನಿತ್ಯ ದೃಶ್ಯಗಳನ್ನು ನೋಡುತ್ತಿದ್ದರು. ನನ್ನ ನಟನೆಯನ್ನು ಅವರು ಮೆಚ್ಚಿ ಹೊಗಳಿದ್ದರು. ಇದಕ್ಕಿಂತ ಹೆಚ್ಚಿನದ್ದು ಏನನ್ನು ಕೇಳಲು ಸಾಧ್ಯ?’’ ಎಂದು ನುಡಿದಿದ್ದರು.
ಇದೀಗ ಪುನೀತ್ ಕನಸಿನ, ದಾನಿಶ್ ನಟನೆಯ ‘ಒನ್ ಕಟ್ ಟು ಕಟ್’ ತೆರೆಕಂಡಿದೆ. ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಪಿಆರ್ಕೆ ಪ್ರೊಡಕ್ಷನ್ಸ್ನ ಇನ್ನೂ ಎರಡು ಚಿತ್ರಗಳು ಸದ್ಯದಲ್ಲೇ ಪ್ರೈಮ್ನಲ್ಲಿ ತೆರೆಕಾಣಲಿವೆ. ಸತ್ಯ ಪ್ರಕಾಶ್ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಹಾಗೂ ಅರ್ಜುನ್ ಕುಮಾರ್ ಅವರ ‘ಫ್ಯಾಮಿಲಿ ಪ್ಯಾಕ್’ ಬಿಡುಗಡೆಗೆ ಕಾಯುತ್ತಿರುವ ಚಿತ್ರಗಳಾಗಿವೆ.
ಇದನ್ನೂ ಓದಿ:
‘ಅವರ ಜತೆ ಸಾಕಷ್ಟು ನೆನಪುಗಳಿವೆ’; ಪುನೀತ್, ‘ಒನ್ ಕಟ್ ಟೂ ಕಟ್’ ಸಿನಿಮಾ ಬಗ್ಗೆ ನಟ ದಾನಿಶ್ ಸೇಠ್ ಮಾತು
ಏಪ್ರಿಲ್ನಲ್ಲಿ ರಿಲೀಸ್ ಆಗಲಿದೆ ಸಮಂತಾ ಹೊಸ ಚಿತ್ರ; ಈ ಬಾರಿ ಅಭಿಮಾನಿಗಳಿಗೆ ಏನಿದೆ ಸರ್ಪ್ರೈಸ್?