ನಟ ದಾನಿಶ್ ಸೇಠ್ (Danish Sait) ಅವರಿಗೆ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇದೆ. ಅವರು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಭಿನ್ನವಾಗಿರುತ್ತದೆ ಎಂಬುದಕ್ಕೆ ಅವರು ಇಲ್ಲಿಯವರೆಗೆ ಮಾಡಿರುವ ಕೆಲಸಗಳೇ ಸಾಕ್ಷಿ. ಈಗ ಅವರು ‘ಒನ್ ಕಟ್ ಟೂ ಕಟ್’ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ನಿರ್ಮಾಣ ಆಗಿದ್ದು ಪುನೀತ್ ರಾಜ್ಕುಮಾರ್ (Puneeth Rajkumar) ಅವರ ‘ಪಿಆರ್ಕೆ ಪ್ರೊಡಕ್ಷನ್’ (PRK Production) ಬ್ಯಾನರ್ ಅಡಿಯಲ್ಲಿ. ಈ ಬ್ಯಾನರ್ ಅಡಿಯಲ್ಲಿ ದಾನಿಶ್ ನಟಿಸುತ್ತಿರುವ ಎರಡನೇ ಸಿನಿಮಾ ಇದು ಅನ್ನೋದು ವಿಶೇಷ. ಈ ಮೊದಲು ಅವರು ನಟಿಸಿದ್ದ ‘ಫ್ರೆಂಚ್ ಬಿರಿಯಾನಿ’ ಸಿನಿಮಾ ಪಿಆರ್ಕೆ ಅಡಿಯಲ್ಲಿ ಸಿದ್ಧವಾಗಿತ್ತು. ದಾನಿಶ್ ಸೃಷ್ಟಿಸಿರುವ ಗೋಪಿ ಪಾತ್ರ ಆಧರಿಸಿ ‘ಒನ್ ಕಟ್ ಟೂ ಕಟ್’ ಸಿದ್ಧವಾಗಿದೆ. ಈ ಚಿತ್ರದಲ್ಲಿ ಸರ್ಕಾರಿ ಶಾಲೆ ಉಳಿಸಿ ಎಂಬ ಒಂದು ಸಂದೇಶ ಕೂಡ ಇದೆ. ಈ ಚಿತ್ರ ಫೆಬ್ರವರಿ 3ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜತೆ ದಾನಿಶ್ ಮಾತನಾಡಿದ್ದಾರೆ.
‘ಪಿಆರ್ಕೆ’ ಬ್ಯಾನರ್ ಅಡಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದ್ದೀರಿ, ಹೇಗಿತ್ತು ಅನುಭವ?
10 ವರ್ಷದ ಮೊದಲು ನಿಮ್ಮದು ಒಂದು ಸಿನಿಮಾ ಬರುತ್ತದೆ ಎಂದು ಯಾರಾದರೂ ಹೇಳಿದ್ದರೆ ನಾನೇ ನಂಬುತ್ತಿರಲಿಲ್ಲ. ಆದರೆ, ಈಗ ಮೂರು ಸಿನಿಮಾ, ಒಂದು ವೆಬ್ ಸೀರಿಸ್ನಲ್ಲಿ ನಟಿಸಿದ್ದೇನೆ. ಪಿಆರ್ಕೆ ಬ್ಯಾನರ್ ಅಡಿಯಲ್ಲಿ ನಟಿಸಿದ ಎರಡನೇ ಸಿನಿಮಾ. ಟ್ಯಾಲೆಂಟ್ ಇದ್ದರೆ ಸಾಧನೆ ಮಾಡೋಕೆ ಆಗಲ್ಲ. ಅದನ್ನು ಗುರುತಿಸುವವರೂ ಇರಬೇಕು. ಪಿಆರ್ಕೆ ಆ ಕೆಲಸವನ್ನು ಮಾಡುತ್ತಿದೆ. ಆ ಬಗ್ಗೆ ಖುಷಿ ಇದೆ.
ಪುನೀತ್ ರಾಜ್ಕುಮಾರ್ ಈ ಸಿನಿಮಾ ನೋಡಿದ್ರಾ?
ಹೌದು, ಪುನೀತ್ ಅವರು ‘ಒನ್ ಕಟ್ ಟೂ ಕಟ್’ ಚಿತ್ರವನ್ನು ನೋಡಿದ್ದರು. ಅವರಿಗೆ ಈ ಚಿತ್ರ ತುಂಬಾನೇ ಇಷ್ಟ ಆಗಿತ್ತು. ಅವರು ಸಾಕಷ್ಟು ನಕ್ಕಿದ್ದರು. ಅವರು ಪ್ರೊಡಕ್ಷನ್ ವಿಚಾರದಲ್ಲಿ ತುಂಬಾನೇ ಇನ್ವಾಲ್ ಆಗುತ್ತಿದ್ದರು. ಏನಾಗುತ್ತಿದೆ ಎನ್ನುವ ಬಗ್ಗೆ ನಿತ್ಯವೂ ಅಪ್ಡೇಟ್ ಕೇಳುತ್ತಿದ್ದರು. ಶೂಟಿಂಗ್ ಆದ ಬಳಿಕ ಅವರು ನಿತ್ಯ ದೃಶ್ಯಗಳನ್ನು ನೋಡುತ್ತಿದ್ದರು. ನನ್ನ ನಟನೆಯನ್ನು ಅವರು ಮೆಚ್ಚಿ ಹೊಗಳಿದ್ದರು. ಇದಕ್ಕಿಂತ ಹೆಚ್ಚಿನದ್ದು ಏನನ್ನು ಕೇಳಲು ಸಾಧ್ಯ?
ನಿಮ್ಮ ಕಾಮಿಡಿಗಳು ಪುನೀತ್ಗೆ ಇಷ್ಟ ಆಗುತ್ತಿತ್ತು, ಆ ಬಗ್ಗೆ ಏನು ಹೇಳ್ತಾ ಇದ್ರು?
ಪುನೀತ್ ಅವರು ನನ್ನ ಆ್ಯಕ್ಟಿಂಗ್ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದರು, ಹೊಗಳುತ್ತಿದ್ದರು. ಅವರಿಗೆ ನನ್ನ ನಟನೆ ಇಷ್ಟ ಆಗಿದ್ದರಿಂದ ಅವರ ಬ್ಯಾನರ್ ಅಡಿಯಲ್ಲಿ ಎರಡನೇ ಸಿನಿಮಾ ಬರುತ್ತಿದೆ. ಅವರು ನಿಜಕ್ಕೂ ದೊಡ್ಡ ಮನಸ್ಸು ಹೊಂದಿದ್ದರು. ಎಲ್ಲರಿಗೂ ಸಾಕಷ್ಟು ಬೆಂಬಲ ನೀಡುತ್ತಿದ್ದರು. ಅವರ ಜತೆ ಸಾಕಷ್ಟು ಮೆಮೋರಿ ಇದೆ. ವೈಯಕ್ತಿಕವಾಗಿಯೂ ನನಗೆ ಅವರು ತುಂಬಾನೇ ಹತ್ತಿರವಾಗಿದ್ದರು. ಪುನೀತ್ ನನಗೆ ಗೆಳೆಯರಾಗಿ, ಮೆಂಟರ್ ಆಗಿ ಇದ್ದರು.
ಮೊದಲು ನೋಗರಾಜ್, ಈಗ ಗೋಪಿ ಪಾತ್ರ; ಮುಂದೆ ಯಾವ ಕ್ಯಾರೆಕ್ಟರ್ ಸಿನಿಮಾ ಆಗಬಹುದು?
ನಾನು ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತೇನೆ. ನನ್ನ ತಲೆಯಲ್ಲಿ ಹೊಳೆದ ಕ್ಯಾರೆಕ್ಟರ್ಗಳಿಗೆ ಜೀವ ತುಂಬಿ ಜನರ ಎದುರು ಇಡುತ್ತೇನೆ. ಅವುಗಳನ್ನು ಫೈನ್ ಟ್ಯೂನ್ ಮಾಡಿದ ಬಳಿಕವೇ ನನ್ನ ಪಾತ್ರಗಳು ಸಿನಿಮಾ ಆಗೋದು. ಸಿನಿಮಾ ಇಂಡಸ್ಟ್ರಿ ದೊಡ್ಡದು. ಇಲ್ಲಿ ಒಂದು ಸಣ್ಣ ಜಾಗ ಮಾಡಿಕೊಳ್ಳಬೇಕು ಎಂದರೆ ನಮ್ಮ ತನವನ್ನು ನಾವು ತೋರಿಸಬೇಕು. ಆ ಪ್ರಯತ್ನವನ್ನು ನಾನು ಮಾಡಿದ್ದೇನೆ. ಸದ್ಯಕ್ಕೆ ನಿರ್ದೇಶನದ ಆಲೋಚನೆ ಇಲ್ಲ. 10 ವರ್ಷದ ಬಳಿಕ ಆ ಬಗ್ಗೆ ಯೋಚಿಸುತ್ತೇನೆ.
‘ಒನ್ ಕಟ್ ಟೂ ಕಟ್’ ಸಿನಿಮಾ ಬಗ್ಗೆ ಹೇಳೋದಾದ್ರೆ..
ಈ ಚಿತ್ರದಲ್ಲಿ ನಾನು ರೊಮ್ಯಾನ್ಸ್ ಮಾಡಿದ್ದೇನೆ. ನಾನು ರೊಮ್ಯಾಂಟಿಕ್ ಅಲ್ಲ ಎಂದು ನನ್ನ ಹೆಂಡತಿ ಕೂಡ ಅಂದುಕೊಂಡಿದ್ದಾರೆ. ನಾನು ರೇಡಿಯೋ ಜಾಕಿ ಆಗಿದ್ದಾಗ ಸಂಯುಕ್ತಾ ಹೊರನಾಡ್ ಪರಿಚಯ ಆಗಿದ್ದರು. ಅವರ ಜತೆ ನಟಿಸಿದ ಖುಷಿ ಇದೆ. ಪ್ರಕಾಶ್ ಬೆಳವಾಡಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಒಟ್ಟಾರೆ ಅನುಭವ ಚೆನ್ನಾಗಿತ್ತು. ಸಿನಿಮಾ ಯಶಸ್ಸು ಕಾಣಲಿದೆ ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: ನಟ ದಾನಿಶ್ ಸೇಠ್ಗೆ ಅಭಿನಂದನೆ ತಿಳಿಸಿದ ಕ್ರಿಕೆಟರ್ ಕೆ.ಎಲ್. ರಾಹುಲ್; ಕಾರಣ ಏನು?
ಮದುವೆ ಆಗ್ತೀನಿ ಎಂದಾಗ ದಾನಿಶ್ಗೆ ಪುನೀತ್ ಕಡೆಯಿಂದ ಸಿಕ್ಕಿತ್ತು ವಿಶೇಷ ಟಿಪ್ಸ್
Published On - 9:21 pm, Sat, 29 January 22