ಆಗಸ್ಟ್ 15ಕ್ಕೆ ಒಟಿಟಿಯಲ್ಲಿ ಬರಲಿದೆ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಸಿನಿಮಾ
ಹಲವು ಕಾರಣಗಳಿಂದಾಗಿ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಸಿನಿಮಾ ಕೌತುಕ ಮೂಡಿಸಿತ್ತು. ಚಿತ್ರಮಂದಿರದಲ್ಲಿ ತೆರೆಕಂಡು ಉತ್ತಮ ವಿಮರ್ಶೆ ಪಡೆದ ಈ ಸಿನಿಮಾ ಈಗ ಒಟಿಟಿಗೆ ಎಂಟ್ರಿ ನೀಡುತ್ತಿದೆ. ಮಲಯಾಳಂ, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಆ ಕುರಿತು ಇಲ್ಲಿದೆ ಮಾಹಿತಿ..

ಬಿಡುಗಡೆಗೂ ಮುನ್ನ ‘ಜಾನಕಿ vs ಸ್ಟೇಟ್ ಆಫ್ ಕೇರಳ’ (Janaki V vs State of Kerala) ಸಿನಿಮಾ ಒಂದಷ್ಟು ವಿವಾದಕ್ಕೆ ಕಾರಣ ಆಗಿತ್ತು. ಜುಲೈ 17ರಂದು ಬಿಡುಗಡೆ ಆದ ಸಿನಿಮಾದಲ್ಲಿ ಕೋರ್ಟ್ ರೂಮ್ ಡ್ರಾಮಾ ಇದೆ. ಮಲಯಾಳಂ ನಟ, ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಕೂಡ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಚಿತ್ರಮಂದಿರದಲ್ಲಿ ಉತ್ತಮ ವಿಮರ್ಶೆ ಪಡೆದ ಈ ಸಿನಿಮಾ ಈಗ ಒಟಿಟಿಗೆ ಬರಲು ಸಜ್ಜಾಗಿದೆ. ಹೌದು, ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಸಿನಿಮಾ ‘ಜೀ5’ (Zee5) ಮೂಲಕ ಪ್ರಸಾರ ಆಗಲಿದೆ. ಆಗಸ್ಟ್ 15ರಿಂದ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.
ಪ್ರವೀಣ್ ನಾರಾಯಣನ್ ಅವರು ಕಥೆ ಬರೆದು ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜೆ. ಫಣೀಂದ್ರ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಸೇತುರಾಮನ್ ನಾಯರ್ ಕಂಕೋಲ್ ಅವರು ಸಹ-ನಿರ್ಮಾಪಕರಾಗಿದ್ದಾರೆ. ಸುರೇಶ್ ಗೋಪಿ, ಅನುಪಮಾ ಪರಮೇಶ್ವರನ್ ಮಾತ್ರವಲ್ಲದೇ ದಿವ್ಯ ಪಿಳ್ಳೈ, ಅಸ್ಕರ್ ಅಲಿ, ಶ್ರುತಿ ರಾಮಚಂದ್ರನ್, ಮಾಧವ್ ಸುರೇಶ್ ಗೋಪಿ, ಬೈಜು ಸಂತೋಷ್ ಕೂಡ ಈ ಸಿನಿಮಾದಲ್ಲಿ ಇದ್ದಾರೆ.
ಮಲಯಾಳಂ ಭಾಷೆಯ ಈ ಸಿನಿಮಾ ಈಗ ಕನ್ನಡ, ತಮಿಳು, ತೆಲುಗು, ಹಿಂದಿಗೆ ಡಬ್ ಆಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಆ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ತಲುಪಲಿದೆ. ಕಾನೂನು ವ್ಯವಸ್ಥೆಯ ಬಗ್ಗೆ ಈ ಸಿನಿಮಾದಲ್ಲಿ ಕಥೆ ಇದೆ. ಕಥಾನಾಯಕಿ ಜಾನಕಿ ಬಾಳಲ್ಲಿ ಒಂದು ಘಟನೆ ನಡೆಯುತ್ತದೆ. ಈ ವೇಳೆ ಆಕೆ ನ್ಯಾಯಕ್ಕಾಗಿ ಹೋರಾಡುತ್ತಾಳೆ. ಮುಂದೇನಾಗುತ್ತದೆ ಎಂಬುದು ಸಸ್ಪೆನ್ಸ್.
ಒಟಿಟಿ ಬಿಡುಗಡೆ ಬಗ್ಗೆ ಜೀ5 ತಮಿಳು ಹಾಗೂ ಮಲಯಾಳಂ ಮಾರ್ಕೆಟಿಂಗ್ ಮುಖ್ಯಸ್ಥ ಲಾಯ್ಡ್ ಸಿ ಕ್ಸೇವಿಯರ್ ಮಾತನಾಡಿ, ‘ಈ ಸಿನಿಮಾ ಮನರಂಜನೆ ನೀಡುವುದರ ಜೊತೆಗೆ ಚಿಂತನೆಯನ್ನು ಪ್ರಚೋದಿಸುತ್ತದೆ’ ಎಂದಿದ್ದಾರೆ. ನಟ ಸುರೇಶ್ ಗೋಪಿ ಮಾತನಾಡಿ, ‘ಈ ಸಿನಿಮಾಗೆ ಚಿತ್ರಮಂದಿರಗಳಲ್ಲಿ ಸಿಕ್ಕ ಪ್ರತಿಕ್ರಿಯೆ ಭಾವನಾತ್ಮಕವಾಗಿದೆ. ಡಿಜಿಟಲ್ ಮೂಲಕ ಜಾನಕಿಯ ಕಥೆ ದೇಶಾದ್ಯಂತ ಪ್ರೇಕ್ಷಕರನ್ನು ತಲುಪುತ್ತದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಮಿಂಚಿದ ಅನುಪಮಾ ಪರಮೇಶ್ವರನ್
‘ಜಾನಕಿ vs ಸ್ಟೇಟ್ ಆಫ್ ಕೇರಳ’ ಸಿನಿಮಾದಲ್ಲಿ ಜಾನಕಿ ಎಂಬ ಪಾತ್ರ ಮಾಡಿರುವ ಅನುಪಮಾ ಪರಮೇಶ್ವರನ್ ಅವರು ಒಟಿಟಿ ಬಿಡುಗಡೆ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಜಾನಕಿಯ ಧೈರ್ಯವು ಈ ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




