ಚಿತ್ರಮಂದಿರದಲ್ಲಿ ಮೋಡಿ ಮಾಡಿದ ‘ಮಾಮನ್ನನ್’ ಶೀಘ್ರ ಒಟಿಟಿಗೆ: ಬಿಡುಗಡೆ ದಿನಾಂಕ ಘೋಷಣೆ

|

Updated on: Jul 19, 2023 | 3:39 PM

Maamannan: ಕಳೆದ ತಿಂಗಳಾಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದಾಖಲೆ ಬರೆದಿದ್ದ ಮಾರಿ ಸೆಲ್ವರಾಜ್ ನಿರ್ದೇಶನದ 'ಮಾಮನ್ನನ್' ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ.

ಚಿತ್ರಮಂದಿರದಲ್ಲಿ ಮೋಡಿ ಮಾಡಿದ ಮಾಮನ್ನನ್ ಶೀಘ್ರ ಒಟಿಟಿಗೆ: ಬಿಡುಗಡೆ ದಿನಾಂಕ ಘೋಷಣೆ
ಮಾಮನ್ನನ್
Follow us on

ಮಾರಿ ಸೆಲ್ವರಾಜ್ (Mari Selvaraj) ನಿರ್ದೇಶನದ ‘ಮಾಮನ್ನನ್‘ (Maamannan) ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಜಾತಿ ರಾಜಕಾರಣದ ಸುತ್ತ ಹೆಣೆದ ‘ಮಾಮನ್ನನ್’ ಸಿನಿಮಾನಲ್ಲಿ ಪ್ರಥಮ ಬಾರಿಗೆ ವಡಿವೇಲು ಗಂಭೀರ ಪಾತ್ರದಲ್ಲಿ ನಟಿಸಿದ್ದರೆ, ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯ್ ನಿಧಿ ಸ್ಟಾಲಿನ್ (Udhayanidhi Stalin) ನಾಯಕನಾಗಿ ನಟಿಸಿದ್ದರು. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡ ಈ ಸಿನಿಮಾ ಇದೀಗ ಒಟಿಟಿಗೆ ಬರಲು ಸಜ್ಜಾಗಿದೆ.

‘ಮಾಮನ್ನನ್’ ತಮಿಳು ಸಿನಿಮಾ ಜೂನ್ 29ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆರಂಭದಲ್ಲಿ ಕೇವಲ ತಮಿಳು ಭಾಷೆಯಲ್ಲಿ ಮಾತ್ರವೇ ಬಿಡುಗಡೆ ಆಗಿದ್ದ ಈ ಸಿನಿಮಾ ಬಳಿಕ ತೆಲುಗಿಗೆ ಡಬ್ ಆಗಿ ಆಂಧ್ರ-ತೆಲಂಗಾಣಗಳಲ್ಲಿ ಬಿಡುಗಡೆ ಆಯ್ತು. ಜಾತಿ ವ್ಯವಸ್ಥೆಯ ಸೂಕ್ಷ್ಮಗಳ ಕುರಿತಾದ ಕತೆಯನ್ನು ಹೊಂದಿದ್ದ ಈ ಸಿನಿಮಾ ಬಗ್ಗೆ ಭಾರಿ ಮೆಚ್ಚುಗೆಗಳು ವ್ಯಕ್ತವಾದವು. ಕೆಲವು ಟೀಕೆಗಳನ್ನೂ ಎದುರಿಸಬೇಕಾಯ್ತು. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಮಾತ್ರವೇ ಬಿಡುಗಡೆ ಆಗಿದ್ದ ಕಾರಣ ಇತರೆ ರಾಜ್ಯದವರಿಗೆ ಸಿನಿಮಾ ನೋಡಲಾಗಿರಲಿಲ್ಲ, ಆದರೆ ಈಗ ಒಟಿಟಿ ಮೂಲಕ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ‘ಮಾಮನ್ನನ್’ ತಲುಪಲು ಮುಂದಾಗಿದೆ.

‘ಮಾಮನ್ನನ್’ ಸಿನಿಮಾವನ್ನು ಒಟಿಟಿ ದೈತ್ಯ ನೆಟ್​ಫ್ಲಿಕ್ಸ್ ಖರೀದಿ ಮಾಡಿದ್ದು ಜುಲೈ 27ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ. ಸಿನಿಮಾವು ತಮಿಳು, ತೆಲುಗು ಮಾತ್ರವೇ ಅಲ್ಲದೆ ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ. ನೆಟ್​ಫ್ಲಿಕ್ಸ್​ ಉತ್ತಮ ಮೊತ್ತಕ್ಕೆ ಸಿನಿಮಾವನ್ನು ಖರೀದಿ ಮಾಡಿದೆ ಎಂಬ ಮಾತುಗಳಿವೆ.

ಇದನ್ನೂ ಓದಿ:ನಟರ ವಯಸ್ಸು ಸಹ ನೋಡದೆ ಹೊಡೆಯುತ್ತಾನೆ, ಸಹಾಯಕರ ಮೇಲೂ ದೌರ್ಜನ್ಯ ತಮಿಳು ನಿರ್ದೇಶಕನ ವಿರುದ್ಧ ಆರೋಪ

ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಡಿವೇಲು ಮೊದಲ ಬಾರಿಗೆ ಗಂಭೀರ ಪಾತ್ರವನ್ನು ‘ಮಾಮನ್ನನ್’ ಸಿನಿಮಾದಲ್ಲಿ ಮಾಡಿದ್ದಾರೆ. ದಲಿತ ಶಾಸಕನ ಪಾತ್ರದಲ್ಲಿ ವಡಿವೇಲು ನಟಿಸಿದ್ದು, ಶಾಸಕನ ಕ್ರಾಂತಿಕಾರಿ ಮಗನ ಪಾತ್ರದಲ್ಲಿ ಉದಯ್ ನಿಧಿ ಸ್ಟಾಲಿನ್ ನಟಿಸಿದ್ದಾರೆ. ಸಿನಿಮಾದಲ್ಲಿ ಜಾತಿ ವ್ಯವಸ್ಥೆಯ ಜೊತೆಗೆ, ಮೀಸಲಾತಿ ಇದ್ದಾಗಿಯೂ ಹೇಗೆ ಸುಪ್ತವಾಗಿ ಜಾತಿಯತೆ ಎಲ್ಲೆಡೆ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಲಾಗಿದೆ. ಸಿನಿಮಾದ ವಿಲನ್ ಪಾತ್ರದಲ್ಲಿ ಫಹಾದ್ ಪಾಸಿಲ್ ನಟಿಸಿದ್ದಾರೆ. ಉದಯ್ ನಿಧಿ ನಾಯಕ, ಕೀರ್ತಿ ಸುರೇಶ್ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದು ಒಂದು ಹಾಡಂತೂ ಭಾರಿ ವೈರಲ್ ಆಗಿದೆ. ಜೂನ್ 29 ರಂದು ಬಿಡುಗಡೆ ಆಗಿದ್ದ ಈ ಸಿನಿಮಾವನ್ನು ಕಮಲ್ ಹಾಸನ್, ರಜನೀಕಾಂತ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಸಹ ಕೇಳಿ ಬಂದಿದ್ದವು. ಸೀಮಿತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದರೂ ಸಹ ಸಿನಿಮಾ ಸೂಪರ್ ಹಿಟ್ ಆಯ್ತು. ಸಿನಿಮಾ ಯಶಸ್ವಿಯಾದ ಖುಷಿಗೆ ನಟ, ನಿರ್ಮಾಪಕ ಉದಯ್​ನಿಧಿ ಸ್ಟಾಲಿನ್, ನಿರ್ದೇಶಕ ಮಾರಿ ಸೆಲ್ವರಾಜ್​ಗೆ 50 ಲಕ್ಷ ಮೌಲ್ಯದ ಮಿನಿ ಕೂಪರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ