ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿ, ಸಚಿವ ಅನುರಾಗ್ ಠಾಕೂರ್ ಘೋಷಣೆ: ‘ಒಟಿಟಿಗಳು ಭಾರತದ ಸಂಸ್ಕೃತಿಯ ಗೌರವಿಸಬೇಕು’
OTT: ಅತ್ಯುತ್ತಮ ವೆಬ್ ಸರಣಿಗಳಿಗೆ ಇನ್ನು ಮುಂದೆ ಸರ್ಕಾರದಿಂದ ಪ್ರಶಸ್ತಿ ನೀಡುವುದಾಗಿ ಸಚಿವ ಅನುರಾಗ್ ಠಾಕೂರ್ ಘೋಷಣೆ ಮಾಡಿದ್ದಾರೆ. ಬಹುಮಾನದ ಮೊತ್ತ ಎಷ್ಟು?
ಮನರಂಜನಾ (Entertainment) ಕ್ಷೇತ್ರದಲ್ಲಿ ಸಿನಿಮಾ ಹಾಗೂ ಸಿನಿಮಾಗಳ ಭಾಗವಾಗಿರುವ ವಿವಿಧ ಕಲಾಪ್ರಕಾರಗಳಿಗೆ ಮಾತ್ರವೇ ಸರ್ಕಾರಗಳು ಪ್ರಶಸ್ತಿಗಳನ್ನು ನೀಡುತ್ತಾ ಬಂದಿವೆ. ಆದರೆ ಆ ಸಂಪ್ರದಾಯವನ್ನೀಗ ಮುರಿದಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಒಟಿಟಿ (OTT) ಕಂಟೆಂಟ್ಗಳಿಗೂ ಸರ್ಕಾರ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದಾರೆ. ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಂಪ್ರದಾಯಕ್ಕೆ ಚಾಲನೆ ದೊರೆಯಲಿದ್ದು, ಅತ್ಯುತ್ತಮ ವೆಬ್ ಸರಣಿ (Web Series) ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ ಭಾರತೀಯ ಭಾಷೆಗಳಲ್ಲಿ ನಿರ್ಮಾಣಗೊಂಡ ವೆಬ್ ಸರಣಿಗಳಷ್ಟೇ ಮೀಸಲು.
ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟಿಟಿಗಳ ಸಿಇಓಗಳು ಇನ್ನಿತರೆ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ ಸಚಿವ ಅನುರಾಗ್ ಠಾಕೂರ್, ”ಒಟಿಟಿ ಪ್ಲಾಟ್‌ಫಾರ್ಮ್ ಗಳು ‘ಸೃಜನಶೀಲ ಅಭಿವ್ಯಕ್ತಿ’ ಹೆಸರಿನಲ್ಲಿ ಅಶ್ಲೀಲತೆಯನ್ನು ಪ್ರದರ್ಶಿಸುವಂತಿಲ್ಲ. ಒಟಿಟಿಗಳೇ ಕಂಟೆಂಟ್ ಅನ್ನು ಪರಾಮರ್ಶಿಸಿ ಪ್ರದರ್ಶಿಸಬೇಕು. ಸೃಜನಶೀಲ ಸ್ವಾತಂತ್ರ್ಯದ ಹೆಸರಿನಲ್ಲಿ ಭಾರತದ ಸಂಸ್ಕೃತಿಯನ್ನು ಅವಮಾನಿಸದಂತೆ ಸಂವೇದನಾಶೀಲ ಕಂಟೆಂಟ್ ಅನ್ನು ನಿರ್ಮಿಸಿ ಪ್ರದರ್ಶಿಸಬೇಕು ಎಂದು ಒಟಿಟಿಗಳಿಗೆ ಸೂಚಿಸಿದ್ದಾರೆ.
”ಭಾರತವು ವೈವಿಧ್ಯಮಯ ದೇಶ. ಒಟಿಟಿಗಳು ದೇಶದ ಸಾಮೂಹಿಕತೆಯನ್ನು ಪ್ರತಿಬಿಂಬಿಸಬೇಕು ಮತ್ತು ಎಲ್ಲಾ ವಯೋಮಾನದ ಜನರಿಗೆ ಆರೋಗ್ಯಕರ ಕಂಟೆಂಟ್ ವೀಕ್ಷಣೆಯ ಅನುಭವವನ್ನು ಒದಗಿಸಬೇಕು. ಆರ್ಥಿಕತೆಯನ್ನು ಹಿಗ್ಗಿಸುವ ಯತ್ನದಲ್ಲಿ ಒಟಿಟಿಗಳು ಸಂವೇದನಶೀಲತೆಯನ್ನು ಕಳೆದುಕೊಳ್ಳಬಾರದು. ಮಾತ್ರವಲ್ಲದೆ, ಒಟಿಟಿಗಳು ತಮ್ಮ ಪ್ಲ್ಯಾಟ್ಫಾರ್ಮ್ ಅನ್ನು ರಾಜಕೀಯ ಅಥವಾ ಸಾಮಾಜಿಕ ವಿಷಯಗಳ ಕುರಿತಾಗಿ ಜನರ ಅಭಿಪ್ರಾಯ ತಿದ್ದಲು, ಪ್ರೊಪಾಗಾಂಡಾಗಾಗಿ ಬಳಸಬಾರದು” ಎಂದು ಸಚಿವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ:Varun Dhawan: ‘ಕೆಟ್ಟ ಸಿನಿಮಾ ಒಟಿಟಿಯಲ್ಲೂ ಉಳಿಯಲ್ಲ’: ನೇರವಾಗಿ ಮಾತನಾಡಿದ ನಟ ವರುಣ್ ಧವನ್
ಭಾರತದಲ್ಲಿ ಒಟಿಟಿ ಕಂಟೆಂಟ್ ನಿರ್ಮಾಣ ಮಾಡುವವರಿಗೆ ಪ್ರೋತ್ಸಾಹ ನೀಡಲೆಂದು ಈ ಬಾರಿ ಗೋವಾ ಸಿನಿಮೋತ್ಸವದಲ್ಲಿ ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಯನ್ನು ಸೇರಿಸಲಾಗಿದ್ದು, ಭಾರತದ ಭಾಷೆಯಲ್ಲಿ ನಿರ್ಮಾಣಗೊಂಡು ಅತ್ಯುತ್ತಮ ವೆಬ್ ಸರಣಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯು ಒಂದು ಟ್ರೋಫಿ ಹಾಗೂ ಹತ್ತು ಲಕ್ಷ ರೂಪಾಯಿ ಬಹುಮಾನವನ್ನು ಒಳಗೊಂಡಿರುತ್ತದೆ. ಭಾರತೀಯ ಭಾಷೆಗಳಲ್ಲಿ ವೆಬ್ ಸರಣಿ ನಿರ್ಮಾಣ ಅಥವಾ ಇನ್ಯಾವುದೇ ಒಟಿಟಿ ಕಂಟೆಂಟ್ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲೆಂದು ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಲು ಪ್ರಾರಂಭಿಸಿದೆ.
ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಅತ್ಯುತ್ತಮ ವೆಬ್ ಸರಣಿಗಳು ಈಗಾಗಲೇ ನಿರ್ಮಾಣಗೊಂಡಿವೆ, ನಿರ್ಮಾಣಗೊಳ್ಳುತ್ತಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 3000 ಗಂಟೆಗಳ ಒಟಿಟಿ ಕಂಟೆಂಟ್ ಭಾರತದಲ್ಲಿ ನಿರ್ಮಾಣಗೊಂಡಿದ್ದು, ಹಲವು ಭಾರತೀಯ ವೆಬ್ ಸರಣಿಗಳು ವಿಶ್ವಮಟ್ಟದಲ್ಲಿ ಜನಪ್ರಿಯತೆಗಳಿಸಿವೆ. 2020ರಲ್ಲಿ ಭಾರತದಲ್ಲಿ ನಿರ್ಮಾಣವಾಗಿದ್ದ ಡೆಲ್ಲಿ ಕ್ರೈಮ್ಸ್ ವೆಬ್ ಸರಣಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದು ಇದಕ್ಕೆ ಉದಾಹರಣೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:24 pm, Tue, 18 July 23