ಮೋಹನ್​ಲಾಲ್ ಸಿನಿಮಾ ಚಿತ್ರಮಂದಿರದಲ್ಲಿ ಸೂಪರ್ ಹಿಟ್, ಒಟಿಟಿಯಲ್ಲಿ ಫ್ಲಾಪ್

Mohanlal: ಮೋಹನ್​ಲಾಲ್ ನಟನೆಯ ಸಿನಿಮಾ ಒಂದು ಏಪ್ರಿಲ್ 25 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಸಿನಿಮಾ 250 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಇತ್ತೀಚೆಗೆ ಈ ಸಿನಿಮಾ ಒಟಿಟಿಗೆ ಬಂದಿದ್ದು, ಒಟಿಟಿಯಲ್ಲಿ ಅದೇ ಸಿನಿಮಾ ನೋಡಿದ ಬಹುತೇಕ ವೀಕ್ಷಕರು ನಿರಾಸೆ ಅನುಭವಿಸಿದ್ದಾರೆ.

ಮೋಹನ್​ಲಾಲ್ ಸಿನಿಮಾ ಚಿತ್ರಮಂದಿರದಲ್ಲಿ ಸೂಪರ್ ಹಿಟ್, ಒಟಿಟಿಯಲ್ಲಿ ಫ್ಲಾಪ್
Thudarum

Updated on: Jun 01, 2025 | 6:37 PM

ಮೋಹನ್​ಲಾಲ್ (Mohanlal) ನಟನೆಯ ‘ತುಡರುಂ’ ಹೆಸರಿನ ಸಿನಿಮಾ ಏಪ್ರಿಲ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಟ್ಯಾಕ್ಸಿ ಚಾಲಕನ ಕತೆ ಹೊಂದಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆಯ್ತು. ಸುಮಾರು 30 ಕೋಟಿ ಖರ್ಚಿನಲ್ಲಿ ನಿರ್ಮಿಸಲಾಗಿದ್ದ ಈ ಸಿನಿಮಾ ಚಿತ್ರಮಂದಿರದಲ್ಲಿ ಈ ವರೆಗೆ 250 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಇತ್ತೀಚೆಗಷ್ಟೆ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಯ್ತು. ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆದ ಈ ಸಿನಿಮಾ ಒಟಿಟಿ ವೀಕ್ಷಕರಿಗೆ ನಿರಾಸೆ ಮೂಡಿಸಿದಂತಿದೆ.

‘ತುಡರುಂ’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ, ಈ ಸಿನಿಮಾವನ್ನು ಮೋಹನ್​ಲಾಲ್ ನಟನೆಯ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ’ಗೆ ಹೋಲಿಸಲಾಗಿತ್ತು. ಇದು ಮತ್ತೊಂದು ‘ದೃಶ್ಯಂ’ ಎಂದೇ ಪ್ರಚಾರ ಮಾಡಲಾಯ್ತು. ಒಟಿಟಿಗೆ ಬಿಡುಗಡೆ ಆಗುವ ಸಂದರ್ಭದಲ್ಲಿಯೂ ಇದೇ ರೀತಿ ಪ್ರಚಾರವನ್ನು ಚಿತ್ರತಂಡ ಮಾಡಿತ್ತು. ಅದೇ ಕಾರಣಕ್ಕೆ ಸಿನಿಮಾ ಒಟಿಟಿಗೆ ಬಿಡುಗಡೆ ಆಗುತ್ತಿದ್ದಂತೆ ಭಾರಿ ಸಂಖ್ಯೆಯ ಜನ ಸಿನಿಮಾ ವೀಕ್ಷಿಸಿದರು. ಆದರೆ ಬಹುತೇಕರು ನಿರಾಸೆ ಅನುಭವಿಸಿದ್ದಾರೆ.

ನೆಟ್ಟಿಗರು ಟ್ವೀಟ್ಟರ್ ಮತ್ತಿತರೆ ಕಡೆ ‘ತುಡರುಂ’ ಸಿನಿಮಾ ಬಗ್ಗೆ ಹಂಚಿಕೊಂಡಿರುವ ಅಭಿಪ್ರಾಯದಂತೆ, ಇದೊಂದು ಸಾಧಾರಣ ಸಿನಿಮಾ ಅಷ್ಟೆ ಅಂತೆ. ಒಳ್ಳೆಯ ಚಿತ್ರೀಕರಣ, ಕೆಲವು ನಟರ ಅದ್ಭುತ ನಟನೆಯ ಹೊರತಾಗಿ ಹೆಚ್ಚಿನದ್ದೇನೂ ಸಿನಿಮಾದಲ್ಲಿ ಇಲ್ಲ ಎಂಬ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿದೆ. ‘ದೃಶ್ಯಂ’ ರೀತಿ ಒಳ್ಳೆಯ ಮರ್ಡರ್ ಮಿಸ್ಟರಿ ಸಿನಿಮಾ ಆಗಬಹುದಾಗಿದ್ದ ‘ತುಡರುಂ’ ಅನ್ನು ರಿವೇಂಜ್ ಡ್ರಾಮಾ ಮಾಡಿಬಿಟ್ಟಿದ್ದಾರೆ ಎಂದು ಅನೇಕರು ದೂರಿದ್ದಾರೆ.

ಅಲ್ಲದೆ, ಸಿನಿಮಾದ ಕತೆ, ಚಿತ್ರಕತೆಯಲ್ಲಿ ಅನೇಕ ಲೂಪ್​​ಹೋಲ್​ಗಳು ಇವೆ ಎಂದು ಕೆಲವರು ಬೆರಳು ತೋರಿಸಿದ್ದಾರೆ. ಈ ಸಿನಿಮಾ ಒಬ್ಬ ಟ್ಯಾಕ್ಸಿ ಡ್ರೈವರ್​ ಹಾಗೂ ಅವನ ಕುಟುಂಬದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಸಾಮಾನ್ಯ ಟ್ಯಾಕ್ಸಿ ಡ್ರೈವರ್ ಒಬ್ಬನಿಗೆ ಪೊಲೀಸರಿಂದ ಸಮಸ್ಯೆ ಆದಾಗ ಆ ನಂತರ ಪೊಲೀಸರ ಮೇಲೆ ಹೇಗೆ ರಿವೇಂಜ್ ತೀರಿಸಿಕೊಳ್ಳುತ್ತಾರೆ ಎಂಬ ಕತೆಯನ್ನು ಒಳಗೊಂಡಿದೆ.

ಇದನ್ನೂ ಓದಿ:ಒಟಿಟಿಗೆ ಬಂತು ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಫ್ಲಾಪ್ ಸಿನಿಮಾ ‘ಸಿಕಂದರ್’

ಸಿನಿಮಾದಲ್ಲಿರುವ ಕೆಲವು ಪಾಸಿಟಿವ್ ಅಂಶಗಳನ್ನು ಸಹ ನೆಟ್ಟಿಗರು ಕೊಂಡಾಡಿದ್ದಾರೆ. ವಿಶೇಷವಾಗಿ ಸಿನಿಮಾದ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ವರ್ಮಾ ಅವರ ನಟನೆ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಇದು ಅವರ ಮೊದಲ ಸಿನಿಮಾ ಅಂತೆ. ಮೋಹನ್​ಲಾಲ್ ನಟನೆ, ಚಿತ್ರೀಕರಣ, ಸಂಗೀತ ಇನ್ನೂ ಕೆಲವು ವಿಷಯಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ಅನ್ನು ತರುಣ್ ಮೂರ್ತಿ ಎಂಬುವರು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರಸ್ತುತ ಜಿಯೋ ಹಾಟ್​ಸ್ಟಾರ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ