ಆಂಧ್ರ ಸಿಎಂ ಜೊತೆ ಬಾಲಕೃಷ್ಣ ತುಂಟಾಟ, ಸಿನಿಮಾ ಡೈಲಾಗ್ ಹೇಳಿದ ಸಿಎಂ ನಾಯ್ಡು

ನಟ, ಶಾಸಕ ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ‘ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ’ ಟಾಕ್ ಶೋ ತೆಲುಗಿನ ನಂಬರ್ 1 ಟಾಕ್ ಶೋ, ಈ ಟಾಕ್ ಶೋನ ನಾಲ್ಕನೇ ಸೀಸನ್ ಆರಂಭ ಆಗಲಿದ್ದು, ಮೊದಲ ಅತಿಥಿಯಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆಗಮಿಸಿದ್ದಾರೆ.

ಆಂಧ್ರ ಸಿಎಂ ಜೊತೆ ಬಾಲಕೃಷ್ಣ ತುಂಟಾಟ, ಸಿನಿಮಾ ಡೈಲಾಗ್ ಹೇಳಿದ ಸಿಎಂ ನಾಯ್ಡು
Follow us
ಮಂಜುನಾಥ ಸಿ.
|

Updated on:Oct 24, 2024 | 8:52 AM

ತೆಲುಗು ಚಿತ್ರರಂಗದ ಸ್ಟಾರ್ ಹೀರೋ, ನಂದಮೂರಿ ಬಾಲಕೃಷ್ಣ ರಾಜಕೀಯದಲ್ಲಿಯೂ ದಶಕಗಳಿಂದಲೂ ಸಕ್ರಿಯರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ಸಹ ಹಿಂದೂಪರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಬಾಲಕೃಷ್ಣ ನಡೆಸಿಕೊಡುವ ‘ಅನ್​ಸ್ಟಾಪೆಬಲ್ ಎನ್​ಬಿಕೆ’ ಟಾಕ್ ಶೋ ತೆಲುಗಿನ ನಂಬರ್ ಒನ್ ಟಾಕ್ ಶೋ ಸಹ ಆಗಿದೆ. ಈಗ ‘ಅನ್​ಸ್ಟಾಪೆನಲ್ ಎನ್​ಬಿಕೆ’ ಸೀಸನ್ 4 ಆರಂಭಗೊಂಡಿದ್ದು, ಮೊದಲ ಅತಿಥಿಯಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ವೇದಿಕೆಗೆ ಕರೆತಂದಿದ್ದಾರೆ ಬಾಲಕೃಷ್ಣ.

ಬಾಲಕೃಷ್ಣಗೆ ಭಾವ ಆಗಿರುವ ನಾರಾ ಚಂದ್ರಬಾಬು ನಾಯ್ಡು ಅವರನ್ನು ಸೀಸನ್​ನ ಮೊದಲ ಅತಿಥಿಯನ್ನಾಗಿ ಕರೆತಂದಿರುವ ಬಾಲಕೃಷ್ಣ, ಭಾವನ ಜೊತೆಗೆ ಸಖತ್ ತುಂಟತನ ಮಾಡಿದ್ದಾರೆ. ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಹಲವು ಪ್ರಶ್ನೆಗಳನ್ನು ಕೇಳಿ ಇಕ್ಕಟ್ಟಿಗೆ ಸಿಲುಕಿದ್ದಾರೆ, ತಮಾಷೆ ಮಾಡಿದ್ದಾರೆ. ಜೊತೆಗೆ ರಾಜಕೀಯ, ಆಂಧ್ರ ಅಭಿವೃದ್ಧಿ ಕುರಿತು ಕೆಲವು ಗಂಭೀರ ಪ್ರಶ್ನೆಗಳನ್ನು ಸಹ ಕೇಳಿದ್ದಾರೆ. ಒಂದು ಹಂತದಲ್ಲಂತೂ ಸಿಎಂ ಚಂದ್ರಬಾಬು ನಾಯ್ಡು ಭಾವುಕರಾಗಿಬಿಟ್ಟಿದ್ದಾರೆ. ಚಂದ್ರಬಾಬು ನಾಯ್ಡು ಅವರ ಎಪಿಸೋಡ್​ನ ಪ್ರೋಮೋ ಇದೀಗ ಬಿಡುಗಡೆ ಆಗಿದ್ದು ಶೋ ಶೀಘ್ರವೇ ಪ್ರಸಾರ ಆಗಲಿದೆ.

ಐದು ನಿಮಿಷದ ದೀರ್ಘವಾದ ಪ್ರೋಮೋ ಅನ್ನು ಬಿಡುಗಡೆ ಮಾಡಲಾಗಿದ್ದು, ಶೋನ ಹೈಲೈಟ್ ಸನ್ನಿವೇಶಗಳ ಝಲಕ್ ಅನ್ನು ಪ್ರೋಮೋನಲ್ಲಿ ನೀಡಲಾಗಿದೆ. ‘ನನಗೆ ಭಾವ, ಆಂಧ್ರ ಜನರಿಗೆ ಬಾಬು’ ಎಂದು ತಮ್ಮದೇ ಶೈಲಿಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ವೇದಿಕೆಗೆ ಆಹ್ವಾನಿಸಿರುವ ಬಾಲಕೃಷ್ಣ, ಶೋನಲ್ಲಿ ಸತ್ಯವನ್ನೇ ಹೇಳುವುದಾಗಿ ಸಿಎಂ ಚಂದ್ರಬಾಬು ನಾಯ್ಡು ಅವರ ಕೈಯಿಂದ ಪ್ರಮಾಣ ಮಾಡಿಸಿದ್ದಾರೆ.

ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ

ಚಂದ್ರಬಾಬು ನಾಯ್ಡು ಅವರನ್ನು ಜೈಲಿಗೆ ಹಾಕಿದ ಘಟನೆ, 83 ದಿನಗಳ ಕಾಲ ಜೈಲಿನಲ್ಲಿ ಕಳೆದ ಸಮಯ, ಜೈಲು ಅಧಿಕಾರಿಗಳು ನಡೆದುಕೊಂಡ ರೀತಿ ಹಾಗೂ ಜೈಲಿನಲ್ಲಿ ಪವನ್ ಕಲ್ಯಾಣ್ ಜೊತೆ ನಡೆದ ಐತಿಹಾಸಿಕ ಎರಡು ನಿಮಿಷದ ಸಭೆ ಹಲವು ವಿಷಯಗಳ ಬಗ್ಗೆ ಚಂದ್ರಬಾಬು ನಾಯ್ಡು ಮಾತನಾಡಿದ್ದಾರೆ. ಜೈಲು ದಿನಗಳನ್ನು ನೆನದು ಭಾವುಕರಾಗಿದ್ದಾರೆ ಚಂದ್ರಬಾಬು ನಾಯ್ಡು.

ಆ ನಂತರ ಚಂದ್ರಬಾಬು ನಾಯ್ಡು ಅವರ ಖಾಸಗಿ ಜೀವನದ ಬಗ್ಗೆಯೂ ಬಾಲಕೃಷ್ಣ ಪ್ರಶ್ನೆ ಮಾಡಿದ್ದಾರೆ. ಇಷ್ಟವಾದ ಸಿನಿಮಾ, ಯಾವ ನಗರ ಇಷ್ಟ? ಧೋನಿ ಇಷ್ಟವೋ ಕೊಹ್ಲಿ ಇಷ್ಟವೋ? ನೋಡಿದ ಸಿನಿಮಾ, ಮಾಡಿದ ತರ್ಲೆ ಕೆಲಸ? ಅಡುಗೆ ಇನ್ನಿತರೆ ಹಲವು ವಿಷಯಗಳ ಬಗ್ಗೆ ಚಂದ್ರಬಾಬು ನಾಯ್ಡು ಅವರಿಗೆ ಪ್ರಶ್ನೆ ಕೇಳಿದ್ದಾರೆ ಬಾಲಯ್ಯ. ಸದಾ ಗಂಭೀರವಾಗಿರುವ ಚಂದ್ರಬಾಬು ನಾಯ್ಡು, ಬಾಲಯ್ಯ ಅವರ ಶೋನಲ್ಲಿ ತಮಾಷೆ ಮಾಡುತ್ತಾ, ನಗುತ್ತಾ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಬಾಲಯ್ಯ ಅವರ ಜನಪ್ರಿಯ ಸಿನಿಮಾ ಡೈಲಾಗ್, ‘ಬೋತ್ ಆರ್ ನಾಟ್ ಸೇಮ್’ ಎಂದು ಅವರದ್ದೇ ಶೈಲಿನಲ್ಲಿ ಹೇಳಿ ರಂಜಿಸಿದ್ದಾರೆ ಸಿಎಂ ನಾಯ್ಡು. ‘ಅನ್​ಸ್ಟಾಪೆಬಲ್ ಎನ್​ಬಿಕೆ’ ಸೀಸನ್ 4 ರ ಮೊದಲ ಎಪಿಸೋಡ್ ಆಹಾ ಒಟಿಟಿಯಲ್ಲಿ ಅಕ್ಟೋಬರ್ 25 ರಂದು ಪ್ರಸಾರ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:48 am, Thu, 24 October 24