‘ಓಣವಿಲ್ಲು’ ಬಗ್ಗೆ ನಿಮಗೆಷ್ಟು ಗೊತ್ತು? ಜಿಯೋ ಸಿನಿಮಾದಲ್ಲಿ ದೈವಿಕ ಧನುಸ್ಸಿನ ಸಾಕ್ಷ್ಯಚಿತ್ರ

|

Updated on: Mar 08, 2024 | 9:17 PM

ಹಲವು ಬಗೆಯ ಕಂಟೆಂಟ್​ಗಳನ್ನು ‘ಜಿಯೋ ಸಿನಿಮಾ’ ಒಟಿಟಿ ನೀಡುತ್ತಿದೆ. ಅದಕ್ಕೆ ‘ಓಣವಿಲ್ಲು’ ಹೊಸ ಸೇರ್ಪಡೆ. ಕೇರಳದಲ್ಲಿನ ಪರಂಪರೆ ಬಗ್ಗೆ ಪರಿಚಯ ಇದರಲ್ಲಿ ಆಗಿದೆ. ಅಲ್ಲಿನ ಕಲೆ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಓಣವಿಲ್ಲು ಹೆಸರಿನ ದೈವಿಕ ಧನುಸ್ಸನ್ನು ಅರ್ಪಣೆ ಮಾಡುವ ಆಚರಣೆಯ ಕುರಿತು ಈ ಸಾಕ್ಷ್ಯಚಿತ್ರ ಮೂಡಿಬಂದಿದೆ. ಇಂದಿನಿಂದ (ಮಾರ್ಚ್‌ 8) ಇದನ್ನು ಉಚಿತವಾಗಿ ವೀಕ್ಷಿಸಬಹುದು.

‘ಓಣವಿಲ್ಲು’ ಬಗ್ಗೆ ನಿಮಗೆಷ್ಟು ಗೊತ್ತು? ಜಿಯೋ ಸಿನಿಮಾದಲ್ಲಿ ದೈವಿಕ ಧನುಸ್ಸಿನ ಸಾಕ್ಷ್ಯಚಿತ್ರ
ಓಣವಿಲ್ಲು ಸಾಕ್ಷ್ಯಚಿತ್ರದ ಪೋಸ್ಟರ್​
Follow us on

ಮಲಯಾಳಂನಲ್ಲಿ ಮೂಡಿಬಂದಿರುವ ಇಂಟರೆಸ್ಟಿಂಗ್​ ಆದಂತಹ ‘ಓಣವಿಲ್ಲು: ದ ಡಿವೈನ್ ಬೋವ್’ (ದೇವ ಧನುಸ್ಸು) ಸಾಕ್ಷ್ಯಚಿತ್ರವು ಮಾರ್ಚ್‌ 8ರಿಂದ ಜಿಯೋ ಸಿನಿಮಾ’ (Jio Cinema) ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಇದನ್ನು ಉಚಿತವಾಗಿ ನೋಡಬಹುದು. ಅಂದಹಾಗೆ, ತಿರುವನಂತಪುರ ಮೂಲದವರಾದ ಸಿನಿಮಾ ನಿರ್ದೇಶಕ ಆನಂದ್ ಬನಾರಸ್ ಹಾಗೂ ಶರತ್‌ ಚಂದ್ರ ಮೋಹನ್ ಅವರು ಈ ಡಾಕ್ಯುಮೆಂಟರಿಯನ್ನು ನಿರ್ದೇಶಿಸಿದ್ದಾರೆ. ಅಭಿನವ್ ಕಾಲ್ರಾ ಅವರು ನಿರ್ಮಾಣ ಮಾಡಿದ್ದು, ಪ್ರಸಿದ್ಧ ಮ್ಯೂಸಿಕ್​ ಕಂಪೋಸರ್​ ಸ್ಟೀಫನ್ ಒರ್ಲಾಂಡೊ ಅವರು ‘ಓಣವಿಲ್ಲು’ (Onavillu) ಸಾಕ್ಷ್ಯಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದರ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ..

ಈ ಸಾಕ್ಷ್ಯಚಿತ್ರದಲ್ಲಿ ಓಣವಿಲ್ಲು ಸಮರ್ಪಣೆಯ ಸಾಂಪ್ರದಾಯಿಕ ಆಚರಣೆಯ ಮಹತ್ವ ಹಾಗೂ ಅದರ ಸಾಂಸ್ಕೃತಿಕ ಶ್ರೀಮಂತಿಕೆ ಕುರಿತು ಬೆಳಕು ಚೆಲ್ಲಾಗಿದೆ. ಅಷ್ಟಕ್ಕೂ ‘ಓಣವಿಲ್ಲು’ ಎಂದರೆ ಏನು? ಇದು ಒಂದು ದೈವಿಕವಾದ ಧನುಸ್ಸು. ವಿಷ್ಣುವಿನ ದಶಾವತಾರ ಹಾಗೂ ಕೃಷ್ಣನ ಲೀಲೆಗಳ ಚಿತ್ರವನ್ನು ಈ ಧನುಸ್ಸಿನ ಮೇಲೆ ಬಿಡಿಸಲಾಗಿರುತ್ತದೆ. ಕೇರಳದ ಪ್ರಸಿದ್ಧ ತಿರುವನಂತಪುರದ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ತಿರುಓಣಂ ಹಬ್ಬದ ಸಮಯದಲ್ಲಿ ಇದನ್ನು ಸಮರ್ಪಿಸುತ್ತಾರೆ.

ವಿಶೇಷ ಏನೆಂದರೆ ‘ಓಣವಿಲ್ಲು’ವನ್ನು ಎಲ್ಲರೂ ಮಾಡುವ ಹಾಗಿಲ್ಲ. ಕರಮಾನ ಮೆಲಾರನ್ನೂರ್ ವಿಲಾಯಿಲ್ ವೀಡು ಎಂಬ ಕುಟುಂಬದವರಿಗೆ ಮಾತ್ರ ಒಣವಿಲ್ಲು ರಚಿಸುವ ಹಕ್ಕು ಇರುವುದು. ಈ ಸಾಕ್ಷ್ಯಚಿತ್ರದ ಮೂಲಕ ಈ ವಂಶದವರ ಕುರಿತು ಕೂಡ ಬೆಳಕು ಚೆಲ್ಲುವ ಪ್ರಯತ್ನ ಆಗಿದೆ. ಇದಕ್ಕೆ ಮಮ್ಮುಟ್ಟಿ ಅವರು ಧ್ವನಿ ನೀಡಿದ್ದಾರೆ ಎಂಬುದು ಕೂಡ ಇನ್ನೊಂದು ವಿಶೇಷ. ಹೌದು, ಅನೇಕ ತಲೆಮಾರುಗಳಿಂದ ನಡೆದುಕೊಂಡ ಬಂದ ಈ ವಿಶೇಷ ಸಂಪ್ರದಾಯದ ಆಚರಣೆ ಬಗ್ಗೆ ಸಿದ್ಧವಾದ ಈ ಸಾಕ್ಷ್ಯಚಿತ್ರಕ್ಕೆ ಮಲಯಾಳಂ ಚಿತ್ರರಂಗದ ಜನಪ್ರಯ ಕಲಾವಿದ ಮಮ್ಮೂಟ್ಟಿ ಹಾಗೂ ಯುವ ನಟನಾದ ಉನ್ನಿ ಮುಕುಂದನ್‌ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: ಕುಮಾರಿ ಆಂಟಿಯಂತೆ! ನೆಟ್‌ಫ್ಲಿಕ್ಸ್​​ನಲ್ಲಿ ಆಂಟಿ ಜೀವನ ಕಥೆ ಸಾಕ್ಷ್ಯಚಿತ್ರವಾಗಿ ಬರುತ್ತದಾ? ಅಸಲಿ ಕಥೆಯೇನು?

ಓಣವಿಲ್ಲು ಆಚರಣೆಯ ಬಗೆಗಿನ ಅನೇಕ ವಿಚಾರಗಳನ್ನು ಈ ಸಾಕ್ಷ್ಯಚಿತ್ರದಿಂದ ತಿಳಿಯಬಹುದು. ಈ ಬಿಲ್ಲನ್ನು ಕದಂಬ ಹಾಗೂ ಮಹಾಗನಿ ಕಟ್ಟಿಗೆಯಿಂದ ರೂಪಿಸಲಾಗುತ್ತದೆ. ಬಳಿಕ ಅದರ ಮೇಲೆ ಬಹಳ ಸುಂದರವಾಗಿ, ಆಕರ್ಷಕವಾಗಿ ವಿಷ್ಣು ದಶಾವತಾರ ಹಾಗೂ ಕೃಷ್ಣನ ಲೀಲೆಯ ಚಿತ್ರವನ್ನು ರಚಿಸಲಾಗುವುದು. ಇಂಥ ಸಾಂಪ್ರದಾಯಿಕವಾದ ಕಲೆಯನ್ನು ದೈವೀಭಕ್ತಿಯಿಂದ ಕಾಪಾಡಿಕೊಂಡು ಬಂದ ಕುಟುಂಬ ಬಗ್ಗೆ ಈ ಸಾಕ್ಷ್ಯಚಿತ್ರದಲ್ಲಿ ಕುತೂಹಲಕಾರಿ ಮಾಹಿತಿ ಇದೆ. ಈ ಮೊದಲು ತಿರುವಾಂಕೂರು ರಾಜ್ಯದ ರಾಷ್ಟ್ರಗೀತೆ ಆಗಿದ್ದ ‘ವಾಂಚಿ ಭೂಮಿ..’ ಎನ್ನುವ ಗೀತೆ ಕೂಡ ಈ ಸಾಕ್ಷ್ಯಚಿತ್ರದಲ್ಲಿ ಇದೆ. ಇದನ್ನು ಉಲ್ಲೂರು ಎಸ್. ಪರಮೇಶ್ವರ ಅಯ್ಯರ್ ಅವರು ರಚಿಸಿದ್ದಾರೆ. ತಾನಿಯಾ ದೇವ ಗುಪ್ತ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.