‘ಶೋಧ’ ವೆಬ್ ಸರಣಿಯಲ್ಲಿ ಪವನ್ ಕುಮಾರ್ ನಟನೆ: ಜೀ5 ಜತೆ ಕೈ ಜೋಡಿಸಿದ ಕೆಆರ್ಜಿ
‘ಲೂಸಿಯಾ’, ‘ಯು-ಟರ್ನ್’ ಸಿನಿಮಾಗಳ ನಿರ್ದೇಶಕ ಪವನ್ ಕುಮಾರ್ ಅವರು ನಟನಾಗಿಯೂ ಬೇಡಿಕೆ ಹೊಂದಿದ್ದಾರೆ. ಈಗಾಗಲೇ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ‘ಶೋಧ’ ವೆಬ್ ಸರಣಿಯಲ್ಲಿ ಬಣ್ಣ ಹಚ್ಚಿದ್ದಾರೆ. ‘ಕೆಆರ್ಜಿ ಸ್ಟುಡಿಯೋಸ್’ ನಿರ್ಮಾಣ ಮಾಡಿರುವ ‘ಶೋಧ’ ವೆಬ್ ಸರಣಿಯು ‘ಜೀ5’ ಒಟಿಟಿ ಮೂಲಕ ಪ್ರಸಾರ ಆಗಲಿದೆ.

‘ಕೆಆರ್ಜಿ ಸ್ಟುಡಿಯೋಸ್’ ಮೂಲಕ ನಿರ್ಮಾಪಕರಾದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಅವರು ಆ್ಯಕ್ಟೀವ್ ಆಗಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಸಿನಿಮಾ ನಿರ್ಮಾಣ ಮತ್ತು ಸಿನಿಮಾ ವಿತರಣೆ ವಿಭಾಗದಲ್ಲಿ ‘ಕೆಆರ್ಜಿ ಸ್ಟುಡಿಯೋಸ್’ (KRG Studios) ಸಂಸ್ಥೆ ಗುರುತಿಸಿಕೊಂಡಿದೆ. ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸುತ್ತಿರುವ ಈ ಸಂಸ್ಥೆ ಈಗ ಹೊಸದೊಂದು ಹೆಜ್ಜೆ ಇಟ್ಟಿದೆ. ಸಿನಿಮಾ ನಿರ್ಮಾಣ ಮತ್ತು ವಿತರಣೆ ಬಳಿಕ ವೆಬ್ ಸಿರೀಸ್ ನಿರ್ಮಾಣಕ್ಕೂ ‘ಕೆಆರ್ಜಿ ಸ್ಟುಡಿಯೋಸ್’ ಕಾಲಿಟ್ಟಿದೆ. ‘ಜೀ5’ (Zee5) ಜೊತೆ ಕೈಜೋಡಿಸಿ ‘ಶೋಧ’ ವೆಬ್ ಸರಣಿ (Shodha Web Series) ನಿರ್ಮಾಣ ಮಾಡಿದೆ.
‘ಶೋಧ’ ವೆಬ್ ಸಿರೀಸ್ಗೆ ‘ಕೆಆರ್ಜಿ ಸ್ಟುಡಿಯೋಸ್’ ಬಂಡವಾಳ ಹೂಡಿದೆ. ಈ ವೆಬ್ ಸರಣಿಗೆ ಸುನಿಲ್ ಮೈಸೂರು ಅವರು ನಿರ್ದೇಶನ ಮಾಡಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಮನಸಾರೆ, ಪಂಚರಂಗಿ, ಲೈಫು ಇಷ್ಟೇನೆ, ಲೂಸಿಯಾ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಪವನ್ ಕುಮಾರ್ ಅವರು ‘ಶೋಧ’ ವೆಬ್ ಸರಣಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನಿರ್ದೇಶಕನಾಗಿ ಹೆಚ್ಚು ಖ್ಯಾತಿ ಗಳಿಸಿರುವ ಪವನ್ ಕುಮಾರ್ ಅವರು ಉತ್ತಮ ನಟ ಕೂಡ ಹೌದು. ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ‘ಶೋಧ’ ವೆಬ್ ಸರಣಿ ಬಗ್ಗೆ ಮಾತನಾಡಿರುವ ಅವರು, ‘ಇದರಲ್ಲಿ ನಟಿಸುವುದು ನನಗೆ ಸಂಪೂರ್ಣವಾಗಿ ಹೊಸ ಅನುಭವ ಆಗಿತ್ತು’ ಎಂದ್ದಿದಾರೆ. ಈ ವೆಬ್ ಸರಣಿಯ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆಯುತ್ತಿದೆ.
‘ಮೊಟ್ಟ ಮೊದಲ ಬಾರಿಗೆ ಸಖತ್ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರೀಸ್ ‘ಶೋಧ’ದಲ್ಲಿ ರೋಹಿತ್ ಎಂಬ ಪಾತ್ರದ ಮೂಲಕ ನಿಮ್ಮ ಮುಂದೆ ಬರ್ತಿದ್ದಾರೆ ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಪವನ್ ಕುಮಾರ್’ ಎಂಬ ಕ್ಯಾಪ್ಷನ್ನೊಂದಿಗೆ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಆಗಸ್ಟ್ 22ರಿಂದ ಜೀ5 ಒಟಿಟಿಯಲ್ಲಿ ‘ಶೋಧ’ ವೆಬ್ ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ.
ಇದನ್ನೂ ಓದಿ: ಸಿನಿಮಾ ಆಗುತ್ತಿದೆ ಮತ್ತೊಂದು ಜನಪ್ರಿಯ ವೆಬ್ ಸರಣಿ, ಹೃತಿಕ್ ರೋಷನ್ ವಿಲನ್?
ಕನ್ನಡದಲ್ಲಿ ವೆಬ್ ಸಿರೀಸ್ಗಳ ಸಂಖ್ಯೆ ಕಡಿಮೆ. ಈ ಮೊದಲು ‘ಜೀ5’ ಒಟಿಟಿಯಲ್ಲಿ ಬಿಡುಗಡೆ ಆದ ‘ಅಯ್ಯನ ಮನೆ’ ಸೂಪರ್ ಸಕ್ಸಸ್ ಕಂಡಿತ್ತು. ಅದರ ಯಶಸ್ಸಿನ ನಂತರ ಬರುತ್ತಿರುವ ಮತ್ತೊಂದು ವೆಬ್ ಸರಣಿಯೇ ‘ಶೋಧ’. ‘ಅಯ್ಯನ ಮನೆ’ ರೀತಿಯೇ ‘ಶೋಧ’ ಕೂಡ ಜನಮೆಚ್ಚುಗೆ ಪಡೆಯಲಿದೆ ಎಂಬ ಭರವಸೆ ಈ ತಂಡಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:08 pm, Wed, 6 August 25




