ಒಟಿಟಿ ಬದಲಿಗೆ ಹೊಸ ಹಾದಿ ತುಳಿದ ರಕ್ಷಿತ್ ಶೆಟ್ಟಿ; ಜುಲೈ 13ಕ್ಕೆ ‘ಏಕಂ’ ರಿಲೀಸ್
‘ಏಕಂ: ಸೀಸನ್ 1 ಕರಾವಳಿ’ ವೆಬ್ ಸರಣಿ ಬಿಡುಗಡೆ ಬಗ್ಗೆ ರಕ್ಷಿತ್ ಶೆಟ್ಟಿ ಗುಡ್ ನ್ಯೂಸ್ ನೀಡಿದ್ದಾರೆ. ಜುಲೈ 13ರಂದು ಇದು ವೀಕ್ಷಣೆಗೆ ಲಭ್ಯವಾಗಲಿದೆ. ಮಾಮೂಲಿ ಒಟಿಟಿ ಬದಲಿಗೆ ಹೊಸ ವೇದಿಕೆ ಮೂಲಕ ಇದನ್ನು ರಿಲೀಸ್ ಮಾಡಲು ತಂಡ ನಿರ್ಧರಿಸಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ ಬಿ. ಶೆಟ್ಟಿ, ಪ್ರಕಾಶ್ ರಾಜ್ ಸೇರಿ ಅನೇಕ ಪ್ರತಿಭಾವಂತ ಕಲಾವಿದರು ಈ ವೆಬ್ ಸರಣಿಯಲ್ಲಿ ನಟಿಸಿದ್ದಾರೆ.
ರಕ್ಷಿತ್ ಶೆಟ್ಟಿ ಅವರು ನಟನಾಗಿ ಮಾತ್ರವಲ್ಲದೇ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಪ್ರಯತ್ನಗಳಿಗೆ ಅವರು ಬೆನ್ನು ತಟ್ಟುತ್ತಾರೆ. ಬಹಳ ಹಿಂದೆ ಅವರು ‘ಏಕಂ’ (Ekam) ವೆಬ್ ಸರಣಿ ಬಗ್ಗೆ ಅನೌನ್ಸ್ ಮಾಡಿದ್ದರು. ಕನ್ನಡದ ಈ ವೆಬ್ಸರಣಿ (Kannada Web Series) ನೋಡಲು ಫ್ಯಾನ್ಸ್ ಕಾದಿದ್ದರು. ಆದರೆ ಕಾರಣಾಂತರಗಳಿಂದ ಇದರ ರಿಲೀಸ್ ತಡವಾಯಿತು. ಈಗ ‘ಏಕಂ’ ವೆಬ್ ಸಿರೀಸ್ ಬಿಡುಗಡೆ ಮಾಡಲು ರಕ್ಷಿತ್ ಶೆಟ್ಟಿ (Rakshit Shetty) ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘2020 ಜನವರಿ, ಅಥವಾ ಫೆಬ್ರವರಿಯೇ? ನೆನಪು ಮಬ್ಬಾಗಿದೆ! ಇರಲಿ… ‘ಪರಂವಃ’ ಹಾಗು ‘ಜರ್ನಿಮ್ಯಾನ್ ಫಿಲ್ಮ್ಸ್’ ಒಟ್ಟಿಗೆ ‘ಏಕಂ’ ಮಾಡಲು ಹೊರಟಿದ್ದು ಅಂದು. ಏನೋ ಹೊಸತೊಂದನ್ನು ಮಾಡುವ ಉತ್ಸಾಹ ನಮ್ಮಲ್ಲಿ. ಕನ್ನಡದಲ್ಲೊಂದು ವೆಬ್ ಸೀರೀಸ್ ಹೊರಬರಲು ಇದೇ ಸೂಕ್ತ ಸಮಯ ಎಂದೆನಿಸಿತ್ತು. ಆದರೆ ಅದೇ ಸಮಯಕ್ಕೆ ಕೊವಿಡ್ ವಕ್ಕರಿಸಿತು. ಜಗತ್ತೇ ತಲೆ ಕೆಳಗಾದ ಸಮಯ. ನಮ್ಮಲ್ಲೂ ಆತಂಕ, ಅನಿಶ್ಚಿತತೆ. ಆದರೂ ಹಿಂದೆ ಸರಿಯದೆ ಮುನ್ನುಗ್ಗಿದೆವು’ ಎಂದು ರಕ್ಷಿತ್ ಶೆಟ್ಟಿ ಬರಹ ಆರಂಭಿಸಿದ್ದಾರೆ.
‘ಕಟ್ ಟು ಅಕ್ಟೋಬರ್ 2021. ‘ಏಕಂ’ನ ಫೈನಲ್ ಕಟ್ ನೋಡಿದೆ. ಖುಷಿ ಆಯಿತು. ಹೆಮ್ಮೆ ಎನಿಸಿತು. ಇದನ್ನ ಜಗತ್ತಿಗೆ ತೋರಿಸಬೇಕೆನಿಸಿತು. ಅದಾಗಿ ಇಂದಿಗೆ ಬರೋಬ್ಬರಿ ಎರಡೂವರೆ ವರ್ಷಗಳು! ‘ಏಕಂ’ ಅನ್ನು ಹೊರ ತರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ! ಎಲ್ಲೆಡೆ ನಿರಾಸೆ, ಅದೇ ನೆಪ, ಅದೇ ಸಬೂಬು! ಯಾವುದೇ ಕೃತಿಯ ಅರ್ಹತೆಯನ್ನ ನಿರ್ಧರಿಸುವ ಅವಕಾಶ ಹಾಗು ಹಕ್ಕು ಪ್ರೇಕ್ಷಕರಿಗಿರಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ರಕ್ಷಿತ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
ಆರು ಮರಿಗಳಿಗೆ ಜನ್ಮ ನೀಡಿದ 777 ಚಾರ್ಲಿ; ಲೈವ್ ಬಂದು ಸಿಹಿ ಸುದ್ದಿ ನೀಡಿದ ರಕ್ಷಿತ್ ಶೆಟ್ಟಿ
‘ಹಾಗಾಗಿ ಏಕಂ ಅನ್ನು ನಾವು ನಮ್ಮದೇ ಆದ ವೇದಿಕೆಯಲ್ಲಿ ನಿಮ್ಮ ಮುಂದೆ ತರಲು ನಿಶ್ಚಯಿಸಿದ್ದೇವೆ. ‘ಏಕಂ’ ನಿಮಗೆ ಇಷ್ಟವಾಗಬಹುದು, ಇಷ್ಟವಾಗದೇ ಇರಬಹುದು. ಆದರೆ ಈ ಪ್ರಯತ್ನವನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ. ‘ಏಕಂ’ ಒಂದು ಶ್ಲಾಘನೀಯ ಪ್ರಯತ್ನ. ಇದನ್ನು ನಾವು ಎಷ್ಟು ಪ್ರೀತಿಯಿಂದ ಮಾಡಿದ್ದೇವೋ, ಅಷ್ಟೇ ಪ್ರೀತಿಯಿಂದ ನೀವು ನಮ್ಮ ಈ ಪ್ರಯತ್ನವನ್ನು ಸ್ವೀಕರಿಸುತ್ತೀರಿ ಅಂತ ಆಶಿಸುತ್ತೇನೆ’ ಎಂದು ರಕ್ಷಿತ್ ಶೆಟ್ಟಿ ಅವರು ಈ ಬರಹ ಪೂರ್ಣಗೊಳಿಸಿದ್ದಾರೆ.
Presenting #EKAM – with love, from us to you! 🤗
Join the waitlist now! 🔗 https://t.co/PFMuw92M13 @ParamvahStudios @teamjourneyman #SumanthBhat @sandeep_ps5 @AaronMac05 @prakashraaj @RajbShettyOMK @ShineShetty_ @worldofekam @definestudio_ pic.twitter.com/e6DCwAj7tD
— Rakshit Shetty (@rakshitshetty) June 17, 2024
‘ಏಕಂ: ಸೀಸನ್ 1 ಕರಾವಳಿ’ ವೆಬ್ ಸರಣಿಯು ಜುಲೈ 13ರಂದು ಬಿಡುಗಡೆ ಆಗಲಿದೆ. ಯಾವುದೇ ಒಟಿಟಿ ಪ್ಲಾರ್ಟ್ಫಾರ್ಮ್ ಬದಲಿಗೆ www.ekamtheseries.com ಮೂಲಕ ಈ ವೆಬ್ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ. 149 ರೂಪಾಯಿಗೆ ಇದನ್ನು ವೀಕ್ಷಿಸಬಹುದು. ವೀಕ್ಷಣೆಯ ಜೊತೆಗೆ ‘ಏಕಂ’ ತಂಡದ ಸಂವಾದದಲ್ಲಿ ಭಾಗಿ ಆಗುವ ಅವಕಾಶ ಕೂಡ ಸಿಗಲಿದೆ. ಶೈನ್ ಶೆಟ್ಟಿ, ಪ್ರಕಾಶ್ ರಾಜ್, ರಾಜ್ ಬಿ. ಶೆಟ್ಟಿ ಸೇರಿದಂತೆ ಅನೇಕರು ಇದರಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.