ಮಗಳ ಮುಖ ತೋರಿಸುವುದು ಯಾವಾಗ? ಉತ್ತರ ಕೊಟ್ಟ ರಾಮ್ ಚರಣ್
Ram Charan-Nandamuri Balakrishna: ನಂದಮೂರಿ ಬಾಲಕೃಷ್ಣ ಅವರ ಟಾಕ್ ಶೋಗೆ ನಟ ರಾಮ್ ಚರಣ್ ಅತಿಥಿಯಾಗಿ ಪಾಲ್ಗೊಂಡಿದ್ದು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮಗಳ ಮುಖವನ್ನು ಯಾವಾಗ ಎಲ್ಲರಿಗೂ ತೋರಿಸುತ್ತೀರಿ ಎಂಬ ಪ್ರಶ್ನೆಗೂ ಸಹ ರಾಮ್ ಚರಣ್ ಉತ್ತರ ನೀಡಿದ್ದಾರೆ. ಪತ್ನಿ, ತಂದೆ, ಚಿಕ್ಕಪ್ಪ ಪವನ್ ಕಲ್ಯಾಣ್ ಬಗ್ಗೆಯೂ ಮಾತನಾಡಿದ್ದಾರೆ.
ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಬಲು ಅದ್ಧೂರಿಯಾಗಿ ಮಾಡುತ್ತಿದ್ದಾರೆ ರಾಮ್ ಚರಣ್. ನಿನ್ನೆ ರಾತ್ರಿಯಷ್ಟೆ ರಾಜಮಂಡ್ರಿಯಲ್ಲಿ ಭಾರಿ ಅದ್ಧೂರಿಯಾಗಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ನಿನ್ನೆ, ಮುಂಬೈನಲ್ಲೂ ವಿಶೇಷ ಪ್ರೀ ರಿಲೀಸ್ ಕಾರ್ಯಕ್ರಮವನ್ನು ರಾಮ್ ಚರಣ್ ಮಾಡಿದ್ದಾರೆ. ಇದರ ನಡುವೆ ಕೆಲವು ವಿಶೇಷ ಸಂದರ್ಶನಗಳನ್ನು ನೀಡಿದ್ದಾರೆ. ನಂದಮೂರಿ ಬಾಲಕೃಷ್ಣ ಅವರ ಟಾಕ್ ಶೋಗೂ ಅತಿಥಿಯಾಗಿ ಹೋಗಿದ್ದಾರೆ ರಾಮ್ ಚರಣ್.
ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಟಾಕ್ ಶೋ ‘ಅನ್ಸ್ಟಾಪೆಬಲ್ ವಿತ್ ಎನ್ಬಿಕೆ’ ಆಹಾ ಒಟಿಟಿಯಲ್ಲಿ ಪ್ರಸಾರವಾಗುವ ಶೋ ಆಗಿದ್ದು, ತೆಲುಗಿನ ಟಾಪ್ ಶೋ ಇದಾಗಿದೆ. ಬಾಲಕೃಷ್ಣ, ಯಾವುದೇ ಫಿಲ್ಟರ್ ಇಲ್ಲದೆ ಅತಿಥಿಗಳನ್ನು ಪ್ರಶ್ನೆಗಳನ್ನು ಕೇಳಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಇದೀಗ ರಾಮ್ ಚರಣ್ ಈ ಶೋಗೆ ಅತಿಥಿಯಾಗಿ ಆಗಮಿಸಿದ್ದು, ಇದು ಮೊದಲ ಬಾರಿಗೆ ರಾಮ್ ಚರಣ್ ಈ ಶೋಗೆ ಬಂದಿದ್ದಾರೆ.
ಶೋನ ಚಿತ್ರೀಕರಣ ಮುಗಿದಿದ್ದು, ಟ್ರೈಲರ್ ಸಹ ಬಿಡುಗಡೆ ಆಗಿದೆ. ಟ್ರೈಲರ್ನಲ್ಲಿ ತೋರಿಸಿರುವಂತೆ ಹಲವು ವಿಷಯಗಳ ಬಗ್ಗೆ ರಾಮ್ ಚರಣ್ ಈ ಶೋನಲ್ಲಿ ಮಾತನಾಡಿದ್ದಾರೆ. ನಿಮ್ಮ ಮಗಳ ಮುಖವನ್ನು ಯಾವಾಗ ತೋರಿಸುತ್ತೀರಿ ಎಂಬ ಪ್ರಶ್ನೆಗೆ ರಾಮ್ ಚರಣ್, ‘ಮಗಳು ಒಮ್ಮೆ ನನ್ನನ್ನು ನಾನ್ನ (ಅಪ್ಪ) ಎಂದು ಕರೆದು ಬಿಡಲಿ ಆಗಲೇ ಎಲ್ಲರಿಗೂ ಮಗಳ ಮುಖ ತೋರಿಸುತ್ತೀನಿ’ ಎಂದಿದ್ದಾರೆ. 2024 ರ ಜೂನ್ ತಿಂಗಳಲ್ಲಿ ರಾಮ್ ಚರಣ್ ಹೆಣ್ಣು ಮಗುವೊಂದರ ತಂದೆ ಆಗಿದ್ದಾರೆ. ಮಗುವಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ:ಮೊದಲ ಬಾರಿ ತಂದೆಯನ್ನು ಟಿವಿಯಲ್ಲಿ ನೋಡಿ ಖುಷಿ ಪಟ್ಟ ರಾಮ್ ಚರಣ್ ಪುತ್ರಿ
ರಾಮ್ ಚರಣ್ ಅತಿಥಿಯಾಗಿ ಆಗಮಿಸಿದ ಶೋನಲ್ಲಿ ಅವರ ತಾಯಿ ಮತ್ತು ಅಜ್ಜಿ ವಿಡಿಯೋ ಮೂಲಕ ರಾಮ್ ಬಳಿ ಹೊಸ ಬೇಡಿಕೆ ಇಟ್ಟಿದ್ದಾರೆ. 2025 ರಲ್ಲಿ ನಮಗೆ ಇನ್ನೊಂದು ಮಗು ಬೇಕು ಎಂದಿದ್ದಾರೆ. ಇವರ ಬೇಡಿಕೆ ಕೇಳಿ, ಅಯ್ಯೋ ಸುಮ್ಮನಿರಿ ನನ್ನ ಹೆಂಡತಿ ಬೈಯ್ಯುತ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ ರಾಮ್ ಚರಣ್.
ಶೋನಲ್ಲಿ ಖಾಸಗಿ ಜೀವನದ ಬಗ್ಗೆಯೂ ಪ್ರಶ್ನೆಗಳನ್ನು ಬಾಲಕೃಷ್ಣ ಕೇಳಿದ್ದಾರೆ. ಪತ್ನಿ ಉಪಾಸನಾ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಪತ್ನಿ ಎಂದರೆ ಎಷ್ಟು ಭಯ ಇದೆ ಎಂದು ಕೇಳಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅಥವಾ ಅವರ ಇಬ್ಬರು ಸಹೋದರರ ಪೈಕಿ ಯಾರೊಟ್ಟಿಗೆ ಪಾರ್ಟಿಗೆ ಹೋಗುವುದು ಇಷ್ಟ ಎಂದು ಕೇಳಿದ್ದಾರೆ ಇದಕ್ಕೆ ರಾಮ್ ಚರಣ್, ನನಗೆ ನಮ್ಮ ಮಾವ ಅಲ್ಲು ಅರವಿಂದ್ ಜೊತೆ ಪಾರ್ಟಿಗೆ ಹೋಗುವುದು ಇಷ್ಟ ಎಂದಿದ್ದಾರೆ. ಹಲವು ತಮಾಷೆಯ ಹಾಗೂ ಕೆಲ ಗಂಭೀರ ಪ್ರಶ್ನೆಗಳನ್ನು ಬಾಲಯ್ಯ ಕೇಳಿದ್ದಾರೆ. ಶೋಗೆ ರಾಮ್ ಗೆಳೆಯರಾಗಿ ನಟ ಶರವಣ ಮತ್ತು ಇನ್ನೂ ಕೆಲವರು ಆಗಮಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ