ಶೇರ್ಷಾ ಚಿತ್ರಕ್ಕೆ ತನ್ನ ಸಂಬಂಧಿಯನ್ನು ನಾಯಕನನ್ನಾಗಿಸಿ ಎಂದು ಮೂಗು ತೂರಿಸಿದ್ದ ಸಲ್ಮಾನ್ ಖಾನ್; ಆಮೇಲೇನಾಯ್ತು?
Salman Khan: ಬಾಲಿವುಡ್ನಲ್ಲಿ ನೆಪೋಟಿಸಂ ಬಗ್ಗೆ ತೀವ್ರವಾಗಿ ಚರ್ಚೆಯಾಗುತ್ತಿರುವಾಗಲೇ, ಶೇರ್ಷಾ ಚಿತ್ರದ ನಿರ್ಮಾಪಕ ಶಬ್ಬೀರ್ ಬಾಕ್ಸ್ವಾಲಾ ತಮ್ಮ ಚಿತ್ರದ ನಾಯಕನ ಆಯ್ಕೆಯಲ್ಲಿ ಸಲ್ಮಾನ್ ಖಾನ್ ತಮ್ಮ ಸಂಬಂಧಿಯ ಹೆಸರನ್ನು ಸೂಚಿಸಿದ್ದರು ಎಂದಿದ್ದಾರೆ. ನಂತರ ಏನಾಯ್ತು? ಮುಂದೆ ಓದಿ.
ಶೇರ್ಷಾ ಚಿತ್ರದ ನಟನೆಗಾಗಿ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅಪಾರ ಜನಮೆಚ್ಚುಗೆಯನ್ನು ಗಳಿಸುತ್ತಿದ್ದಾರೆ. ಆಗಸ್ಟ್ 12ರಂದು ಬಿಡುಗಡೆಯಾಗಿದ್ದ ಶೇರ್ಷಾ ಕಾರ್ಗಿಲ್ ಯುದ್ಧದ ವೀರ ಯೋಧ ಕ್ಯಾಪ್ಟನ್ ವಿಕ್ರಮ್ ಬಾತ್ರಾರ ಜೀವನ ಕತೆಯನ್ನು ಆಧರಿಸಿದೆ. ಈ ಚಿತ್ರಕ್ಕೆ ನಾಯಕನ ಆಯ್ಕೆಯಲ್ಲಿ ಮೂಗು ತೂರಿಸಿದ್ದ ಸಲ್ಮಾನ್ ಖಾನ್, ನಿರ್ಮಾಪಕರಿಗೆ ತಮ್ಮ ಸೋದರ ಸಂಬಂಧಿ ಆಯುಷ್ ಶರ್ಮಾ ನಾಯಕರಾಗಲಿ ಎಂದು ಸೂಚಿಸಿದ್ದರಂತೆ. ಆದರೆ ನಿರ್ಮಾಪಕ ಶಬ್ಬೀರ್ ಬಾಕ್ಸ್ವಾಲಾ ಈ ಮಾತನ್ನು ನಯವಾಗಿಯೇ ನಿರಾಕರಿಸಿದರಂತೆ. ಇದನ್ನು ಸ್ವತಃ ಶಬ್ಬೀರ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಆಯುಶ್ ಏಕೆ ನಿರಾಕರಿಸಿದೆ ಎಂದು ಇದೇ ವೇಳೆ ಶಬ್ಬೀರ್ ತಿಳಿಸಿದ್ದಾರೆ. ‘‘ತನ್ನ ಸಹೋದರ ಸಂಬಂಧಿ(ತಂಗಿ ಅರ್ಪಿತಾ ಖಾನ್ರ ಪತಿ) ಆಯುಶ್ ಶರ್ಮಾರಿಗೆ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಜೀವನಾಧಾರಿತವಾದ, ದೇಶಭಕ್ತಿಯ ಕತೆಯನ್ನು ಹೊಂದಿರುವ ಶೇರ್ಷಾ ಚಿತ್ರ ಬಾಲಿವುಡ್ ಪ್ರವೇಶಕ್ಕೆ ಉತ್ತಮ ವೇದಿಕೆ ಒದಗಿಸಬಲ್ಲದು ಎಂದು ಸಲ್ಮಾನ್ ಯೋಚಿಸಿದ್ದರು. ಆದರೆ ಅವರು ಆಯುಷ್ ಹೆಸರನ್ನು ಸೂಚಿಸುವಾಗ, ನಾನು ವಿಕ್ರಮ್ ಬಾತ್ರಾರ ಕುಟುಂಬಸ್ಥರಿಗೆ ಸಿದ್ಧಾರ್ಥ್ ಹೆಸರನ್ನು ಸೂಚಿಸಿಯಾಗಿತ್ತು. ಈಗಾಗಲೇ ಮಾತುಕತೆ ನಡೆದು, ಹೆಸರು ಸೂಚಿಸಿದ ನಂತರ ಮತ್ತೊಬ್ಬರಿಗೆ ಅವಕಾಶ ನೀಡುವ ಸಲುವಾಗಿ ಮೊದಲಿನವರ ಹೆಸರನ್ನು(ಸಿದ್ಧಾರ್ಥ್) ಕಿತ್ತುಹಾಕುವುದು ಅನ್ಯಾಯವಾಗುತ್ತದೆ ಎಂಬ ಕಾರಣದಿಂದ ನಾನು ಇದಕ್ಕೆ ಮುಂದಾಗಲಿಲ್ಲ’’ ಎಂದು ಶಬ್ಬೀರ್ ಹೇಳಿಕೊಂಡಿದ್ದಾರೆ.
ಜಂಗ್ಲೀ ಪಿಚ್ಚರ್ಸ್ನ ಕಾರ್ಯಕ್ರಮವೊಂದರಲ್ಲಿ ವೇದಿಕೆ ಸಮೀಪದಲ್ಲಿ ಈ ಕುರಿತು ಸಲ್ಮಾನ್ ಕೇಳಿದ್ದರು ಎಂದು ಶಬ್ಬೀರ್ ಹೇಳಿಕೊಂಡಿದ್ದಾರೆ. ಸಲ್ಮಾನ್ ಆಹ್ವಾನವನ್ನು ನಯವಾಗಿಯೇ ನಿರಾಕರಿಸಿದ ಶಬ್ಬೀರ್, ಅದನ್ನು ಸಲ್ಮಾನ್ರಿಗೂ ಮನವರಿಕೆ ಮಾಡಿಕೊಟ್ಟರಂತೆ. ಶೇರ್ಷಾ ಚಿತ್ರಕ್ಕಾಗಿ ವಿಕ್ರಮ್ ಬಾತ್ರಾ ಅವರ ಕುಟುಂಬ ವರ್ಗ ತನ್ನನ್ನು ನಂಬಿ, ಹಕ್ಕುಗಳನ್ನು ನೀಡಿದ್ದು ಬಹಳ ದೊಡ್ಡ ವಿಷಯ. ಅವರ ಕುಟುಂಬಕ್ಕೆ ಸಿದ್ಧಾರ್ಥ್ ಮಲ್ಹೋತ್ರಾರ ಹೆಸರನ್ನೂ ತಿಳಿಸಿ, ಮಾತುಕತೆ ನಿಶ್ಚಯಿಸಿದ ಮೇಲೆ ಅದರಿಂದ ಹಿಂದೆ ಸರಿಯುವುದು ಎಳ್ಳಷ್ಟೂ ಸರಿಯಲ್ಲ ಎಂಬ ನಿರ್ಧಾರಕ್ಕೆ ತಾನು ಬದ್ಧನಾಗಿದ್ದೆ ಎಂದು ಶಬ್ಬೀರ್ ಇದೇ ವೇಳೆ ತಿಳಿಸಿದ್ದಾರೆ.
ಶಬ್ಬೀರ್ ನಿರ್ಧಾರವನ್ನು ಸಲ್ಮಾನ್ ಖಾನ್ ಗೌರವಿಸಿದರಂತೆ. ಹಾಗೂ ಆಯುಷ್ ಕೂಡಾ ಮುಕ್ತ ಮನಸ್ಸಿನಿಂದ ಇದನ್ನು ಸ್ವೀಕರಿಸಿದರಂತೆ. ನಂತರ ಆಯುಶ್ ಶರ್ಮಾ ತಮ್ಮ ಮೊದಲ ಚಿತ್ರ ‘ಲವ್ಯಾತ್ರಿ’ಯಲ್ಲಿ ನಟಿಸಿದರು. ಇದನ್ನು ಸಲ್ಮಾನ್ ಖಾನ್ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿದರು. ಈ ಚಿತ್ರದಲ್ಲಿ ಆಯುಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಚಿತ್ರ ಬಾಕ್ಸ್ಆಫೀಸ್ನಲ್ಲಿ ಸೋಲು ಕಂಡಿದ್ದಲ್ಲದೇ, ತೀವ್ರ ಟೀಕೆಗೂ ಗುರಿಯಾಗಿತ್ತು. ಆದರೆ, ನಟನೆಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡಿರುವ ಆಯುಶ್ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದು, ‘ಆಂಟಿಮ್- ದಿ ಫೈನಲ್ ಟ್ರುಥ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡಾ ಬಣ್ಣ ಹಚ್ಚಲಿದ್ದಾರೆ.
ಶೇರ್ಷಾ ಚಿತ್ರವು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ವಿಕ್ರಮ್ ಬಾತ್ರಾರ ಜೀವನಾಧಾರಿತ ಚಿತ್ರ. ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಕರಣ್ ಜೋಹರ್ ಸೇರಿದಂತೆ, ಶಬ್ಬೀರ್ ಬಾಕ್ಸ್ವಾಲಾ,ಹಿಮಾಂಶು ಗಾಂಧಿ ಮೊದಲಾದವರು ನಿರ್ಮಿಸಿದ್ದಾರೆ. ಚಿತ್ರವನ್ನು ವಿಷ್ಣುವರ್ಧನ್ ನಿರ್ದೇಶಿಸಿದ್ದು, ಸಿದ್ಧಾರ್ಥ್ ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಮೆಜಾನ್ ಪ್ರೈಮ್ ಮುಖಾಂತರ ನೇರವಾಗಿ ಬಿಡುಗಡೆಗೊಂಡಿರುವ ಈ ಚಿತ್ರಕ್ಕೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶಸ್ಸಿನತ್ತ ಮುನ್ನುಗ್ಗುತ್ತಿದೆ.
ಇದನ್ನೂ ಓದಿ:
ಸರ್ಜರಿ ಬಳಿಕ ಚಿರಂಜೀವಿ ಜೊತೆ ಪ್ರಕಾಶ್ ರೈ ಫೋಟೋ ವೈರಲ್; ಇನ್ನಷ್ಟು ಹೆಚ್ಚಿತು ಅನುಮಾನ
ಶಿಲ್ಪಾ ಶೆಟ್ಟಿಯಿಂದಾಗಿ ತಾವು ಅನುಭವಿಸಿದ ಹಿಂಸೆ ಬಗ್ಗೆ ವಿವರಿಸಿ ಗಳಗಳನೆ ಅತ್ತ ತಂಗಿ ಶಮಿತಾ ಶೆಟ್ಟಿ
(Salman Khan wants his brother in law Ayush to be feature in Shershaah says producer Shabbir Boxwala)