ಮಹೇಶ್ ಬಾಬು (Mahesh Baby) ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ಮಹೇಶ್ ಬಾಬು ಅವರಿಗೆ ಮತ್ತೊಂದು ಯಶಸ್ಸು ಸಿಕ್ಕಿದೆ. ಸತತ ಸೋಲು ಕಂಡಿದ್ದ ನಟಿ ಕೀರ್ತಿ ಸುರೇಶ್ ಅವರು (Keerthy Suresh) ಈ ಚಿತ್ರದಿಂದ ಗೆಲುವಿನ ನಗೆ ಬೀರಿದ್ದಾರೆ. ಈ ಸಿನಿಮಾ ಕೆಲವು ಕಡೆಗಳಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video) ಬಿಡುಗಡೆ ಆಗಿದೆ. ಇದರಿಂದ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ.
‘ಸರ್ಕಾರು ವಾರಿ ಪಾಟ’ ಸಿನಿಮಾ ಮೇ 12ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಕೆಲವರು ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಕೊಟ್ಟರು. ಆದರೆ, ಇದು ಚಿತ್ರದ ಮೇಲೆ ಅಷ್ಟು ಪ್ರಭಾವ ಬೀರಿಲ್ಲ. ಸಿನಿಮಾ ಮೊದಲ ವಾರ ಒಳ್ಳೆಯ ಕಲೆಕ್ಷನ್ ಮಾಡಿತು. ಎರಡನೇ ವಾರವೂ ಅನೇಕರು ಚಿತ್ರ ವೀಕ್ಷಿಸಿದರು. ಸಿನಿಮಾ ತೆರೆಕಂಡು 19 ದಿನ ಕಳೆದಿದೆ. ಹೀಗಿರುವಾಗಲೇ ಚಿತ್ರವನ್ನು ಒಟಿಟಿಗೆ ತರಲಾಗಿದೆ.
‘ಕೆಜಿಎಫ್ 2’ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ವೀಕ್ಷಿಸಬೇಕು ಎಂದರೆ ಹೆಚ್ಚಿನ ಹಣ ನೀಡಬೇಕು. ಕೆಲ ಒಟಿಟಿಗಳು ಮಾತ್ರ ಸಿನಿಮಾವನ್ನು ರೆಂಟ್ಗೆ ಕೊಡುವ ತಂತ್ರ ಉಪಯೋಗಿಸಿದ್ದವು. ಅಮೇಜಾನ್ ಪ್ರೈಮ್ ವಿಡಿಯೋ ‘ಕೆಜಿಎಫ್ 2’ ಸಿನಿಮಾ ಮೂಲಕ ಈ ಮಾರ್ಗ ಆಯ್ಕೆ ಮಾಡಿಕೊಂಡಿದೆ. ಈಗ ದುಡ್ಡು ಕೊಟ್ಟು ‘ಸರ್ಕಾರು ವಾರಿ ಪಾಟ’ ಚಿತ್ರ ವೀಕ್ಷಿಸುವ ಆಯ್ಕೆಯನ್ನು ನೀಡಲಾಗಿದೆ. ಇದರನ್ವಯ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕು ಎಂದರೆ 199 ರೂಪಾಯಿ ಪಾವತಿಸಬೇಕು. ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೇ ಒಟಿಟಿಗೆ ಬಂದಿದ್ದು ಮಹೇಶ್ ಬಾಬು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ‘ಸರ್ಕಾರು ವಾರಿ ಪಾಟ’ ಗೆಲುವಿನ ಖುಷಿಯಲ್ಲಿ ಸೀರೆ ಉಟ್ಟು ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್
‘ಸರ್ಕಾರು ವಾರಿ ಪಾಟ’ ಸಿನಿಮಾ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಭಾಗದಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ವೀಕೆಂಡ್ನಲ್ಲಿ ಜನರು ಈ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಹೀಗಿರುವಾಗಲೇ ಇದು ಒಟಿಟಿಗೆ ರಿಲೀಸ್ ಆಗಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಅಭಿಮಾನಿಗಳದ್ದು.
ನೀವು ಅಮೇಜಾನ್ ಪ್ರೈಮ್ ವಿಡಿಯೋ ಚಂದಾದಾರರಾಗಿದ್ದರೂ ‘ಸರ್ಕಾರು ವಾರಿ ಪಾಟ’ ಸಿನಿಮಾ ವೀಕ್ಷಿಸಲು ಸಾಧ್ಯವಿಲ್ಲ. ಕೆಲ ದಿನಗಳು ಕಳೆದ ನಂತರದಲ್ಲಿ ಈ ಚಿತ್ರವನ್ನು ಚಂದಾದಾರರಿಗೆ ಉಚಿತವಾಗಿ ನೋಡಲು ಅವಕಾಶ ಮಾಡಿಕೊಡಲಾಗುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.