ಒಟಿಟಿಗೆ ಕಾಲಿಟ್ಟ ಶಾರುಖ್ ಖಾನ್, ಮಗನೇ ನಿರ್ದೇಶಕ

Aryan Khan: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹೊಸ ವೆಬ್ ಸರಣಿ ನಿರ್ದೇಶನ ಮಾಡುತ್ತಿದ್ದು ಅದರಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದಾರೆ.

ಒಟಿಟಿಗೆ ಕಾಲಿಟ್ಟ ಶಾರುಖ್ ಖಾನ್, ಮಗನೇ ನಿರ್ದೇಶಕ

Updated on: Mar 07, 2024 | 2:17 PM

ಶಾರುಖ್ ಖಾನ್ (Shah Rukh Khan) ಪುತ್ರಿ ಸುಹಾನಾ ಇತ್ತೀಚೆಗಷ್ಟೆ ನಟನೆಗೆ ಕಾಲಿರಿಸಿದ್ದಾರೆ. ‘ದಿ ಆರ್ಚಿಸ್’ ಸಿನಿಮಾದಲ್ಲಿ ಸುಹಾನಾ ನಟಿಸಿದ್ದು, ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಶಾರುಖ್ ಖಾನ್​ರ ಪುತ್ರ ಆರ್ಯನ್ ಖಾನ್ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದು, ನಟನಾಗಿ ಅಲ್ಲ ಬದಲಿಗೆ ನಿರ್ದೇಶಕನಾಗಿ. ಮಗನ ಮೊದಲ ಪ್ರಯತ್ನಕ್ಕೆ ಬಂಡವಾಳ ಹೂಡುವುದು ಮಾತ್ರವೇ ಅಲ್ಲದೆ ತಾವೇ ಸ್ವತಃ ನಟನೆಯನ್ನೂ ಮಾಡಿದ್ದಾರೆ ಶಾರುಖ್ ಖಾನ್. ವಿಶೇಷವೆಂದರೆ ಆರ್ಯನ್ ಖಾನ್ ನಿರ್ದೇಶಿಸುತ್ತಿರುವುದು ಸಿನಿಮಾ ಅಲ್ಲ ಬದಲಿಗೆ ವೆಬ್ ಸರಣಿ.

ಆರ್ಯನ್ ಖಾನ್ ವೆಬ್ ಸರಣಿ ನಿರ್ದೇಶನ ಮಾಡುತ್ತಾರೆಂಬ ಸುದ್ದಿ ಹಲವು ದಿನಗಳಿಂದಲೂ ಹರಿದಾಡುತ್ತಲೇ ಇದೆ. ಆದರೆ ಆ ವೆಬ್ ಸರಣಿಯಲ್ಲಿ ಶಾರುಖ್ ಖಾನ್ ಸಹ ನಟಿಸಲಿದ್ದಾರೆ ಎಂಬುದು ಹೊಸ ವಿಷಯ. ಶಾರುಖ್ ಖಾನ್, ವೆಬ್ ಸರಣಿಯನ್ನು ನಿರ್ಮಾಣ ಮಾತ್ರವೇ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಸ್ವತಃ ಆರ್ಯನ್ ಖಾನ್ ಹೇಳಿಕೊಂಡಿರುವಂತೆ ತಮ್ಮ ವೆಬ್ ಸರಣಿಯಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ. ವೆಬ್ ಸರಣಿಗೆ ‘ಸ್ಟಾರ್​ಡಮ್’ ಎಂದು ಹೆಸರಿಡಲಾಗಿದ್ದು, ಈ ವೆಬ್ ಸರಣಿ ಸಿನಿಮಾ ಉದ್ಯಮದ ಕುರಿತ ಕತೆಯನ್ನು ಒಳಗೊಂಡಿರಲಿದೆ.

‘ಎಲ್ಲರೂ ಅಪ್ಪನ ವೃತ್ತಿ ಬದ್ಧತೆಯ ಬಗ್ಗೆ ಮಾತನಾಡುತ್ತಾರೆ. ನಾನು ಅದನ್ನು ಕಣ್ಣಾರೆ ನೋಡಲು ಈ ಪ್ರಾಜೆಕ್ಟ್​ನಿಂದ ಸಾಧ್ಯವಾಯಿತು. ತಂದೆಯವರು ನಮ್ಮ ಈ ಪ್ರಾಜೆಕ್ಟ್​ಗೆ ಹೆಚ್ಚಿನ ಮೌಲ್ಯ ತಂದುಕೊಟ್ಟಿದ್ದಾರೆ. ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಲು ಕಾತರನಾಗಿದ್ದೇನೆ’ ಎಂದಿದ್ದಾರೆ ಆರ್ಯನ್ ಖಾನ್.

ಇದನ್ನೂ ಓದಿ:‘ಡಂಕಿ’ ಸಿನಿಮಾ ಹಾಡಿದ ಅಲ್ಲು ಅರ್ಜುನ್ ಮಗ; ಸ್ವೀಟ್ ಆಗಿ ಉತ್ತರಿಸಿದ ಶಾರುಖ್ ಖಾನ್

ಆರ್ಯನ್ ಖಾನ್ ಈಗಾಗಲೇ ಡಿವೋಲ್ ಹೆಸರಿನ ಬ್ರ್ಯಾಂಡ್ ಒಂದನ್ನು ಸ್ಥಾಪಿಸಿದ್ದು, ಡಿವೋಲ್ ಮೂಲಕ ಬಟ್ಟೆ, ವೋಡ್ಕ ಇನ್ನಿತರೆ ಫ್ಯಾಷನ್ ಆಕ್ಸಸರಿಗಳ ಮಾರಾಟ ಮಾಡುತ್ತಾರೆ. ಡಿವೋಲ್ ಬ್ರ್ಯಾಂಡ್​ಗೆ ಸ್ವತಃ ಆರ್ಯನ್ ಖಾನ್ ಮಾಡೆಲ್ ಆಗಿದ್ದಾರೆ. ಶಾರುಖ್ ಖಾನ್ ಸಹ ಈ ಬ್ರ್ಯಾಂಡ್​ನ ಮಾಡೆಲ್ ಆಗಿದ್ದಾರೆ. ಇತ್ತೀಚೆಗಷ್ಟೆ ಡಿವೋಲ್ ಬ್ರ್ಯಾಂಡ್​ನಿಂದ ಹೊಸ ಸ್ವೆಟ್ ಶರ್ಟ್​ಗಳ ಕಲೆಕ್ಷನ್ ಅನ್ನು ಆರ್ಯನ್ ಖಾನ್ ಬಿಡುಗಡೆ ಮಾಡಿದ್ದಾರೆ.

ಆರ್ಯನ್ ಖಾನ್, ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆದರೆ ಆರ್ಯನ್ ಬಂಧನ ನಿಯಮಬಾಹಿರ ಎಂಬ ಅಭಿಪ್ರಾಯ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ವ್ಯಕ್ತವಾಯಿತು. ಆರ್ಯನ್ ಖಾನ್ ಬಂಧನದ ಹಿಂದೆ ವೈಯಕ್ತಿಕ ಹಿತಾಸಕ್ತಿ, ಲಂಚದ ದುರಾಸೆಗಳು ಇದ್ದಿದ್ದನ್ನು ಆರ್ಯನ್ ಖಾನ್ ಅನ್ನು ಬಂಧಿಸಿದ್ದ ತನಿಖಾ ಸಂಸ್ಥೆ ಎನ್​ಸಿಬಿ, ತನ್ನ ಆಂತರಿಕ ತನಿಖಾ ವರದಿಯಲ್ಲಿ ಹೇಳಿತ್ತು. ಕೊನೆಗೆ ಜಾಮೀನಿನ ಮೇಲೆ ಆರ್ಯನ್ ಖಾನ್ ಬಿಡುಗಡೆ ಆಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ