ಒಟಿಟಿಯಲ್ಲಿ ‘ಲವ್ ಯೂ ಮುದ್ದು’ ಸಿನಿಮಾ ನೋಡಿ ಮೆಚ್ಚಿದ ಶಿವಣ್ಣ
ಕಳೆದ ವರ್ಷ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ‘ಲವ್ ಯೂ ಮುದ್ದು’ ಸಿನಿಮಾ ಈಗ ಒಟಿಟಿಗೆ ಬಂದಿದೆ. ಈ ಸಿನಿಮಾವನ್ನು ನೋಡಿದ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಅವರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಹಾಗಾಗಿ, ‘ಲವ್ ಯೂ ಮುದ್ದು’ ಚಿತ್ರತಂಡದವರನ್ನು ಭೇಟಿ ಮಾಡಿ ಅವರು ಮೆಚ್ಚುಗೆಯ ಮಾತಾಡಿದ್ದಾರೆ.

ನೈಜ ಘಟನೆ ಆಧಾರಿತ ‘ಲವ್ ಯೂ ಮುದ್ದು’ (Love You Muddu) ಸಿನಿಮಾ 2025ರಲ್ಲಿ ತೆರೆಕಂಡಿತ್ತು. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ಕುಮಾರ್ ಅವರು ‘ಲವ್ ಯೂ ಮುದ್ದು’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಭಾರಿ ಸದ್ದು ಮಾಡಿದ್ದ ಪ್ರೇಮಿಗಳ ನೈಜ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು. ಭಾಷೆಯ ಗಡಿಯನ್ನು ಮೀರಿ ಈ ಸಿನಿಮಾ ಎಲ್ಲರಿಗೂ ಇಷ್ಟ ಆಯಿತು. ಈಗ ಈ ಸಿನಿಮಾ ಒಟಿಟಿಗೆ ಬಂದಿದೆ. ‘ಅಮೇಜಾನ್ ಪ್ರೈಮ್ ವಿಡಿಯೋ’ (Amazon Prime Video) ಮೂಲಕ ಪ್ರಸಾರ ಆಗುತ್ತಿದೆ. ಈ ಸಿನಿಮಾವನ್ನು ಶಿವರಾಜ್ಕುಮಾರ್ (Shivarajkumar) ನೋಡಿದ್ದಾರೆ.
ಒಟಿಟಿಯಲ್ಲಿ ‘ಲವ್ ಯೂ ಮುದ್ದು’ ಸಿನಿಮಾ ನೋಡಿದ ಶಿವರಾಜ್ಕುಮಾರ್ ಅವರಿಗೆ ಈ ಚಿತ್ರ ಸಖತ್ ಇಷ್ಟ ಆಗಿದೆ. ಹೊಸ ತಂಡಗಳಿಗೆ, ಒಳ್ಳೆಯ ಸಿನಿಮಾಗಳಿಗೆ ಶಿವಣ್ಣ ಯಾವಾಗಲೂ ಬೆಂಬಲ ನೀಡುತ್ತಾರೆ. ಈಗ ಅವರು ‘ಲವ್ ಯೂ ಮುದ್ದು’ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಸಿನಿಮಾದ ನಾಯಕ ನಟ ಸಿದ್ದು ಮೂಲಿಮನಿ ಅವರಿಗೆ ಶಿವಣ್ಣ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರೆ ಮಾಡಿ ಮಾತನಾಡಿದ್ದು ಮಾತ್ರವಲ್ಲದೇ ಚಿತ್ರತಂಡದ ಸಮೇತ ತಮ್ಮನ್ನು ಭೇಟಿ ಆಗುವಂತೆ ಆಹ್ವಾನವನ್ನೂ ನೀಡಿದ್ದಾರೆ. ಇದರಿಂದ ಖುಷಿಯಾದ ಹೀರೋ ಸಿದ್ದು ಮೂಲಿಮನಿ, ಹೀರೋಯಿನ್ ರೇಷ್ಮಾ, ನಿರ್ದೇಶಕ ಕುಮಾರ್, ನಿರ್ಮಾಪಕ ನರಸಿಂಹ ಮೂರ್ತಿ, ವಿತರಕ ಜಗದೀಶ್ ಗೌಡ ಸೇರಿದಂತೆ ತಂಡದ ಹಲವರು ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಶಿವರಾಜ್ಕುಮಾರ್ ಅವರನ್ನು ‘ಲವ್ ಯೂ ಮುದ್ದು’ ಚಿತ್ರತಂಡ ಭೇಟಿ ಮಾಡಿದೆ. ಚಿತ್ರೀಕರಣದ ನಡುವೆಯೂ ಬಿಡುವು ಮಾಡಿಕೊಂಡ ಶಿವಣ್ಣ ಅವರು ಈ ಸಿನಿಮಾದ ಬಗ್ಗೆ ಮಾತನಾಡಿದರು. ಸಿನಿಮಾ ಮೂಡಿ ಬಂದಿರುವ ಬಗೆಯನ್ನು ಕೊಂಡಾಡಿದರು. ಇದರಿಂದ ಚಿತ್ರತಂಡದ ಖುಷಿ ಡಬಲ್ ಆಗಿದೆ. ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರಿಗೂ ಇಷ್ಟ ಆಗುತ್ತಿದೆ.
ಇದನ್ನೂ ಓದಿ: ‘ಲವ್ ಯೂ ಮುದ್ದು’ ಗೆದ್ದಿದ್ದಕ್ಕೆ ಕನ್ನಡದಲ್ಲೇ ಧನ್ಯವಾದ ಹೇಳಿದ ಮರಾಠಿ ರಿಯಲ್ ಜೋಡಿ
‘ಕಿಶನ್ ಎಂಟರ್‌ಟೈನ್ಮೆಂಟ್’ ಬ್ಯಾನರ್ ಮೂಲಕ ಕಿಶನ್ ಟಿ.ಎನ್. ಅವರು ‘ಲವ್ ಯೂ ಮುದ್ದು’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಲಕ್ಷ್ಮಿಕಾಂತ್ ಟಿ.ಎಸ್. ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಕೃಷ್ಣ ದೀಪಕ್ ಅವರ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರಿ ಅವರ ಸಂಗೀತ ನಿರ್ದೇಶನ, ಸಿ.ಎಸ್. ದೀಪು ಅವರ ಸಂಕಲನ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




