ಲೈಂಗಿಕ ಕಿರುಕುಳ ಪ್ರಕರಣ; ‘ಸ್ಕ್ವಿಡ್ ಗೇಮ್’ 001 ಪ್ಲೇಯರ್ಗೆ 80ನೇ ವಯಸ್ಸಲ್ಲಿ 1 ವರ್ಷ ಜೈಲು
ಸ್ಕ್ವಿಡ್ ಗೇಮ್ ಖ್ಯಾತಿಯ ದಕ್ಷಿಣ ಕೊರಿಯಾದ ನಟ ಓ ಯೆಂಗ್ ಸು ಅವರಿಗೆ 2017ರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ತನ್ನ ಅಪರಾಧವನ್ನು ಅಲ್ಲಗಳೆದಿದ್ದರೂ, ನ್ಯಾಯಾಲಯವು ಸಂತ್ರಸ್ತೆಯ ಹೇಳಿಕೆಯನ್ನು ಪರಿಗಣಿಸಿ ತೀರ್ಪು ನೀಡಿದೆ. ಈ ತೀರ್ಪಿನಿಂದ ಸ್ಕ್ವಿಡ್ ಗೇಮ್ 3ರ ಚಿತ್ರೀಕರಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ದಕ್ಷಿಣ ಕೊರಿಯಾ ನಟ ಓ ಯಂಗ್ ಸು (O Yeong-su ) ಅವರು ತೊಂದರೆ ಎದುರಿಸಿದ್ದಾರೆ. ಮಹಿಳೆಗೆ ಲೈಂಗಿಕವಾಗಿ ಕಿರುಕುಳ ಕೊಟ್ಟ ಪ್ರಕರಣದಲ್ಲಿ ಅವರು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ. ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಂಡ ‘ಸ್ಕ್ವಿಡ್ ಗೇಮ್’ ಸೀರಿಸ್ನಲ್ಲಿ ಓ ಯೆಂಗ್ ಸೂ ಅವರು ಪ್ಲೇಯರ್ ನಂಬರ್ 1 ಪಾತ್ರ ಮಾಡಿದ್ದರು. ಈ ಪಾತ್ರ ಮೊದಲ ಸೀಸನ್ನಲ್ಲೇ ಕೊನೆಗೊಳ್ಳುತ್ತದೆ. ಹೀಗಾಗಿ, ಅವರ ಜೈಲು ವಾಸದಿಂದ ‘ಸ್ಕ್ವಿಡ್ ಗೇಮ್ 3’ ಶೂಟ್ಗೆ ಯಾವುದೇ ಸಮಸ್ಯೆ ಆಗುವುದಿಲ್ಲ.
ಓ ಯಂಗ್ ಸು ಅವರು ರಂಗಭೂಮಿಯಲ್ಲಿ ಕಳೆದ 50 ವರ್ಷಗಳಿಂದ ಕಾರ್ಯೋನ್ಮುಖವಾಗಿದ್ದಾರೆ. ಥಿಯೇಟರ್ ಗ್ರೂಪ್ನ ಸದಸ್ಯೆ ಒಬ್ಬರಿಗೆ ಅವರು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಇತ್ತು. ಈ ಘಟನೆ ಬಳಿಕ ಆ ಯುವತಿ ಭಯದ ವಾತಾವರಣದಲ್ಲೇ ವಾಸವಾಗಿದ್ದಾಳೆ ಎಂದು ಅವರ ಪರ ವಕೀಲರು ವಾದಿಸಿದ್ದಾರೆ. ಏಪ್ರಿಲ್ 3ರಂದು ಓ ಯೆಂಗ್ ಸು ಅವರ ಅರ್ಜಿಯ ಕೊನೆಯ ವಿಚಾರಣೆ ನಡೆದಿದೆ. ಇದರಲ್ಲಿ ಅವರಿಗೆ 1 ವರ್ಷ ಶಿಕ್ಷೆ ನೀಡಿ ಆದೇಶ ಹೊರಡಿಸಲಾಗಿದೆ.
‘ಓ ಯಂಗ್ ಸು ಅವರು ಸಂತ್ರಸ್ತೆ ಬಳಿ ಕ್ಷಮೆ ಕೇಳುವ ಬದಲು, ತಂದೆಯಾಗಿ ನಾನು ಆ ರೀತಿ ಮಾಡಿದೆ ಎಂದು ಹೇಳುವ ಮೂಲಕ ಮತ್ತಷ್ಟು ನೋವು ಮಾಡಿದ್ದಾರೆ. ಆರೋಪ ಮಾಡಲ್ಪಟ್ಟಾಗಿನಿಂದ ಓ ಯಂಗ್ ಸು ಹೇಳಿಕೆಗಳು ಸ್ಥಿರವಾಗಿವೆ. ಸಂತ್ರಸ್ತೆಗೆ ಬೆಂಬಲ ನೀಡಲು ಮತ್ತು ಭವಿಷ್ಯದಲ್ಲಿ ಇಂತಹ ಅಪರಾಧಗಳನ್ನು ತಡೆಯಲು ಆರೋಪಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬೇಕು’ ಎಂದು ಸಂತ್ರಸ್ತೆ ಪರ ವಕೀಲರು ಕೋರಿದರು.
ಆದರೆ, ಓ ಯೆಂಗ್ ಸು ಅವರು ಈ ಎಲ್ಲಾ ಆರೋಪಗಳನ್ನು ಅಲ್ಲ ಗಳೆದಿದ್ದಾರೆ. ‘ಸಂತ್ರಸ್ತೆಯ ಹೇಳಿಕೆ ಮಾತ್ರ ಅವರ ವಿರುದ್ಧದ ಏಕೈಕ ಸಾಕ್ಷಿ. ಸಂತ್ರಸ್ತೆಯ ಸಾಕ್ಷ್ಯಕ್ಕೆ ಸ್ಥಿರತೆ ಮತ್ತು ತಾರ್ಕಿಕ ಸುಸಂಬದ್ಧತೆಯ ಕೊರತೆ ಇದೆ’ ಎಂದಿರುವ ವಕೀಲರು, ‘ಸ್ಕ್ವಿಡ್ ಗೇಮ್ ಹಿಟ್ ಆದ ಬಳಿಕ ಶೋ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಇದನ್ನು ತಪ್ಪಿಸಲು ನಟ ಔಪಚಾರಿಕವಾಗಿ ಕ್ಷಮೆ ಕೇಳಿದ್ದರು’ ಎಂದು ವಕೀಲರು ಹೇಳಿದ್ದಾರೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ ಮಾಡಿದ ಅಚಾತುರ್ಯದಿಂದ ರಿವೀಲ್ ಆಯ್ತು ‘ಸ್ಕ್ವಿಡ್ ಗೇಮ್ 3’ ರಿಲೀಸ್ ದಿನಾಂಕ
ಘಟನೆ ಏನು?
2017ರಲ್ಲಿ ಈ ಘಟನೆ ನಡೆದಿದೆ. ಓ ಯಂಗ್ ಸು ಅವರು ತಮ್ಮ ಮನೆ ಸಮೀಪ ಸಂತ್ರಸ್ತೆಯನ್ನು ಅಪ್ಪಿಕೊಂಡು ಕಿಸ್ ಮಾಡಿದ್ದಾನೆ ಎನ್ನಲಾಗಿದೆ. ಈ ಮೊದಲು ಅವರಿಗೆ 8 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ ಹೊಸ ಆದೇಶದಲ್ಲಿ ಒಂದು ವರ್ಷ ಶಿಕ್ಷೆ ವಿಧಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.