ನೆಟ್ಫ್ಲಿಕ್ಸ್ ಒಟಿಟಿ ಮೂಲಕ ಬಿಡುಗಡೆ ಆಗಿರುವ ‘ಐಸಿ 814: ದಿ ಕಂದಹಾರ್ ಹೈಜಾಕ್’ ವೆಬ್ ಸರಣಿ ವಿವಾದಕ್ಕೆ ಕಾರಣ ಆಗಿದೆ. ರಿಯಲ್ ಘಟನೆಯನ್ನು ಆಧರಿಸಿದ ಈ ವೆಬ್ ಸಿರೀಸ್ನಲ್ಲಿ ಕೆಲವು ಮಾಹಿತಿಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮುಸ್ಲಿಂ ಭಯೋತ್ಪಾದಕರ ಪಾತ್ರಗಳಿಗೆ ಹಿಂದೂಗಳ ಹೆಸರನ್ನು ಇಡಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್ಫ್ಲಿಕ್ಸ್ ಮುಖ್ಯಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
1999ರ ಡಿಸೆಂಬರ್ 24ರಂದು ನೇಪಾಳದ ಕಠ್ಮಂಡು ಇಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ಪಾಕಿಸ್ತಾನದ ಭಯೋತ್ಪಾದಕರು ಹೈಜಾಕ್ ಮಾಡಿದ್ದರು. ಆ ವಿಮಾನದಲ್ಲಿ 190 ಪ್ರಯಾಣಿಕರು ಇದ್ದರು. ಅಮೃತಸರ, ಲಹೋರ್, ದುಬೈ ಮುಂತಾದ ಕಡೆಗಳಲ್ಲಿ ಸುತ್ತಾಡಿದ ಬಳಿಕ ಮರುದಿನ ಅಂದರೆ, ಡಿಸೆಂಬರ್ 25ರಂದು ಅಫ್ಘಾನಿಸ್ತಾನದ ಕಂದಹಾರ್ನಲ್ಲಿ ‘ಐಸಿ 814’ ವಿಮಾನವನ್ನು ಲ್ಯಾಂಡ್ ಮಾಡಲಾಯಿತು. ಭಾರತದ ಜೈಲಿನಲ್ಲಿ ಇರುವ ಪಾಕಿಸ್ತಾನದ ಭಯೋತ್ಪಾದಕರ ಬಿಡುಗಡೆಗೆ ಒತ್ತಾಯಿಸಿ ಈ ಹೈಜಾಕ್ ಮಾಡಲಾಗಿತ್ತು.
ಈ ರೋಚಕ ಘಟನೆಯನ್ನು ಇಟ್ಟುಕೊಂಡು ‘ಐಸಿ 814: ದಿ ಕಂದಹಾರ್ ಹೈಜಾಕ್’ ವೆಬ್ ಸಿರೀಸ್ ಮೂಡಿಬಂದಿದೆ. ವಿಮಾನ ಹೈಜಾಕ್ ಮಾಡಿದ್ದ ಭಯೋತ್ಪಾದಕರ ಹೆಸರು ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್ ಸಯೀದ್, ಸನ್ನಿ ಅಹ್ಮದ್ ಖಾಜಿ, ಝಹೂರ್ ಮಿಸ್ತ್ರೀ ಮತ್ತು ಶಾಖಿರ್. ಆದರೆ ಈ ವೆಬ್ ಸರಣಿಯಲ್ಲಿ ಭಯೋತ್ಪಾಕರ ಹೆಸರನ್ನು ಭೋಲಾ ಮತ್ತು ಶಂಕರ್ ಎಂದು ತೋರಿಸಲಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿದ ಪ್ರಯಾಣಿಕನ ಬಂಧನ, ಹೀಗೆ ಮಾಡಲು ಕಾರಣವೇನು?
‘ಐಸಿ 814: ದಿ ಕಂದಹಾರ್ ಹೈಜಾಕ್’ ವೆಬ್ ಸರಣಿಯಲ್ಲಿ ಭಯೋತ್ಪಾದಕರ ಹೆಸರು ಬದಲಾಗಿದ್ದು ಯಾಕೆ ಎಂದು ವಿವರಣೆ ನೀಡುವಂತೆ ನೆಟ್ಫ್ಲಿಕ್ಸ್ನ ಕಾಂಟೆಂಟ್ ಮುಖ್ಯಸ್ಥರಿಗೆ ಪ್ರಶ್ನೆ ಮಾಡಲಾಗಿದೆ. ಈ ವಿಚಾರವಾಗಿ ಸೆಪ್ಟೆಂಬರ್ 3ರಂದು ವಿಚಾರಣೆಗೆ ಬರುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಮನ್ಸ್ ನೀಡಿದೆ. ‘ಭೋಲಾ ಮತ್ತು ಶಂಕರ್ ಎಂಬುದು ಭಯೋತ್ಪಾದಕರ ಕೋಡ್ನೇಮ್ ಆಗಿತ್ತು’ ಎಂದು ಕೆಲವರು ವಾದಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.