ನ.2ರಂದು ‘ಜೈ ಭೀಮ್​’ ಸಿನಿಮಾ ರಿಲೀಸ್​; ಮತ್ತೆ ಓಟಿಟಿ ಮೇಲೆ ಭರವಸೆ ಇಟ್ಟ ಸೂರ್ಯ

ಸೂರ್ಯ ನಟನೆಯ ‘ಜೈ ಭೀಮ್​’ ಮೂಲ ತಮಿಳಿನ ಸಿನಿಮಾ ಆದರೂ ಸಹ ಕನ್ನಡದಲ್ಲೂ ರಿಲೀಸ್​ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ಗಳು ಗಮನ ಸೆಳೆದಿವೆ.

ನ.2ರಂದು ‘ಜೈ ಭೀಮ್​’ ಸಿನಿಮಾ ರಿಲೀಸ್​; ಮತ್ತೆ ಓಟಿಟಿ ಮೇಲೆ ಭರವಸೆ ಇಟ್ಟ ಸೂರ್ಯ
‘ಜೈ ಭೀಮ್’ ಸಿನಿಮಾ ಪೋಸ್ಟರ್​

ಕಾಲಿವುಡ್​ ನಟ ಸೂರ್ಯ ಅಭಿನಯದ ‘ಜೈ ಭೀಮ್​’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಲಾಯರ್​ ಪಾತ್ರದಲ್ಲಿ ಸೂರ್ಯ ನಟಿಸಿರುವ ಈ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ನ.2ರಂದು ‘ಜೈ ಭೀಮ್​’ ರಿಲೀಸ್​ ಆಗಲಿದೆ. ಹೆಸರೇ ಹೇಳುವಂತೆ ಶೋಷಿತರಿಗೆ ನ್ಯಾಯ ಒದಗಿಸಿಕೊಡುವಂತಹ ಕಥೆಯುಳ್ಳ ಸಿನಿಮಾ ಇದು. ಸದ್ಯದ ಕೊವಿಡ್​ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳನ್ನು ಸಂಪೂರ್ಣ ನಂಬಿಕೊಳ್ಳುವಂತಿಲ್ಲ. ಹಾಗಾಗಿ ಓಟಿಟಿ ಮೂಲಕ ಚಿತ್ರವನ್ನು ರಿಲೀಸ್​ ಮಾಡಲು ಸೂರ್ಯ ತೀರ್ಮಾನಿಸಿದ್ದಾರೆ. ಅಮೇಜಾನ್​ ಪ್ರೈಂ ಮೂಲಕ ‘ಜೈ ಭೀಮ್​’ ವೀಕ್ಷಣಗೆ ಲಭ್ಯವಾಗಲಿದೆ.

ಸೂರ್ಯ ಮತ್ತು ಅಮೇಜಾನ್​ ಪ್ರೈಂ ವಿಡಿಯೋ ಸಂಸ್ಥೆ ನಡುವೆ ಒಳ್ಳೆಯ ಒಡನಾಟ ಇದೆ. ಕಳೆದ ವರ್ಷ ಸೂರ್ಯ ನಟಿಸಿದ ‘ಸೂರರೈ ಪೋಟ್ರು’ ಚಿತ್ರ ಕೂಡ ಅಮೇಜಾನ್​ ಪ್ರೈಂನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅವರ ಪತ್ನಿ ಜ್ಯೋತಿಕಾ ಅಭಿನಯಿಸಿದ್ದ ‘ಪೊನ್​ಮಗಳ್​ ವಂದಾಳ್​’ ಸಿನಿಮಾ ಕೂಡ ಅಮೇಜಾನ್​ ಪ್ರೈಂ ಮೊರೆ ಹೋಗಿತ್ತು. ಈಗ ಸೂರ್ಯ ಮತ್ತೆ ಓಟಿಟಿ ಪ್ರೇಕ್ಷಕರ ಮೇಲೆ ನಂಬಿಕೆ ಇಟ್ಟಿದ್ದಾರೆ. ನ.2ರಂದು ‘ಜೈ ಭೀಮ್’ ಬಿಡುಗಡೆ ಆಗಲಿದೆ ಎಂಬ ಸುದ್ದಿ ಕೇಳಿ ಅವರ ಅಭಿಮಾನಿಗಳು ಖುಷಿ ಆಗಿದ್ದಾರೆ.

‘ಜೈ ಭೀಮ್​’ ಮೂಲ ತಮಿಳಿನ ಸಿನಿಮಾ ಆದರೂ ಸಹ ಕನ್ನಡದಲ್ಲೂ ರಿಲೀಸ್​ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ಗಳು ಗಮನ ಸೆಳೆದಿವೆ. ಪೋಸ್ಟರ್​ ನೋಡಿದಾಗಲೇ ಕಥೆಯ ಬಗ್ಗೆ ಸುಳಿವು ಸಿಕ್ಕುವಂತಿತ್ತು. ನ್ಯಾಯಾಲಯ ಕಟ್ಟಡ ಮತ್ತು ಅದರ ಮುಂದೆ ಬುಡಕಟ್ಟು ಜನರು ನಿಂತಿರುವುದು ಪೋಸ್ಟರ್​ನಲ್ಲಿ ಹೈಲೈಟ್ ಆಗಿತ್ತು. ಅದರಲ್ಲೂ ಜೈ ಭೀಮ್​ ಎಂಬ ಶೀರ್ಷಿಕೆ ಗಮನಿಸಿದರೆ, ಈ ಚಿತ್ರದಲ್ಲಿ ದೀನ ದಲಿತರ ಪರವಾಗಿ ಕಥಾನಾಯಕ ಹೋರಾಡುತ್ತಾನೆ ಎಂಬುದು ಖಚಿತವಾಗುವಂತಿತ್ತು. ಚಿತ್ರದ ಕಥೆ ಏನು ಎಂಬ ಬಗ್ಗೆ ಈಗಾಗಲೇ ಕೆಲವು ಮಾಹಿತಿ ಹರಿದಾಡುತ್ತಿವೆ.

ಚಂದ್ರು ಎಂಬ ಹಿರಿಯ ಲಾಯರ್​ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಳ್ಳಲಿದ್ದಾರಂತೆ. ಬುಡಕಟ್ಟು ಮಹಿಳೆಯೊಬ್ಬರಿಗೆ ಚಂದ್ರು ನ್ಯಾಯ ಕೊಡಿಸಿದ ರೋಚಕ ಕಥೆಯನ್ನು ಈ ಸಿನಿಮಾ ವಿವರಿಸಲಿದೆ. ಅದು 1993ರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ನ.2ರಂದು ಈ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ.

ಇದನ್ನೂ ಓದಿ:

ಓಟಿಟಿಗೆ ಬಂತು ‘ತಲೈವಿ’; ಚಿತ್ರಮಂದಿರದಲ್ಲಿ ಸೋತ ಕಂಗನಾ ಸಿನಿಮಾಗೆ ನೆಟ್​ಫ್ಲಿಕ್ಸ್​ನಲ್ಲಿ ಸಿಗುತ್ತಾ ಜಯ?

ಸೋತು ಸುಣ್ಣವಾದ ಶಾರುಖ್​ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್​ ಮಾಡಿದ ನಟ

Read Full Article

Click on your DTH Provider to Add TV9 Kannada