ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಬಗ್ಗೆ ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಕೆಲವರಿಗೆ ಈ ಕಾರ್ಯಕ್ರಮ ಎಂದರೆ ಸಖತ್ ಇಷ್ಟ. ಆದರೆ ಒಂದಷ್ಟು ಜನರು ಟೀಕೆ ಮಾಡುತ್ತಾರೆ. ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ತಮ್ಮ ಜೀವನದ ಗೋಳು ತೋಡಿಕೊಂಡು ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಬಾರಿ ‘ಬಿಗ್ ಬಾಸ್ ಒಟಿಟಿ ಕನ್ನಡ’ (Bigg Boss OTT Kannada) ಕೂಡ ಅಂಥ ಕ್ಷಣಗಳಿಗೆ ಸಾಕ್ಷಿ ಆಗಿದೆ. 16 ಸ್ಪರ್ಧಿಗಳ ಪೈಕಿ ಬಹುತೇಕರು ತಮ್ಮ ಜೀವನದ ಕಷ್ಟದ ಕ್ಷಣಗಳನ್ನು ತೆರೆದಿಟ್ಟಿದ್ದಾರೆ. ಸಾನ್ಯಾ ಅಯ್ಯರ್, ಉದಯ್ ಸೂರ್ಯ, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ, ಲೋಕೇಶ್ (Lokesh) ಮುಂತಾದವರು ನೋವು ತೋಡಿಕೊಂಡಿದ್ದಾರೆ. ಇದನ್ನು ಆರ್ಯವರ್ಧನ್ ಗುರೂಜಿ (Aryavardhan Guruji) ವಿರೋಧಿಸಿದ್ದಾರೆ. ಅದರಿಂದಾಗಿ ದೊಡ್ಮನೆಯಲ್ಲಿ ಮಾತಿನ ಚಕಮಕಿ ನಡೆದಿದೆ.
‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಫೇಮಸ್ ಆಗಿದ್ದ ಲೋಕೇಶ್ ಅವರು ಈಗ ‘ಬಿಗ್ ಬಾಸ್ ಒಟಿಟಿ’ ಶೋಗೆ ಬಂದಿದ್ದಾರೆ. ಅವರ ಬಾಲ್ಯ ತುಂಬ ಕಷ್ಟಕರವಾಗಿತ್ತು. ಮನೆ ಬಿಟ್ಟು ಓಡಿ ಹೋಗಿದ್ದ ಅವರು ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಭಿಕ್ಷೆ ಸಿಗಲಿ ಎಂದು ಮೂಕನಂತೆ ನಟಿಸುತ್ತಿದ್ದರು. ನಂತರ ನಿರಾಶ್ರಿತ ಮಕ್ಕಳ ಕೇಂದ್ರ ಸೇರಿದ ಬಳಿಕ ಬದುಕು ಕಂಡುಕೊಂಡರು.
ಈ ಎಲ್ಲ ಸಂಗತಿಗಳನ್ನು ಲೋಕೇಶ್ ಅವರು ಬಿಗ್ ಬಾಸ್ ಮನೆಯೊಳಗೆ ಹೇಳಲು ಆರಂಭಿಸಿದರು. ‘ಇದನ್ನೆಲ್ಲ ಹೇಳಿಕೊಂಡು ಸಿಂಪಥಿ ಪಡೆದುಕೊಳ್ಳಬೇಡಿ’ ಎಂದು ಆರ್ಯವರ್ಧನ್ ಗುರೂಜಿ ಮಾತಿನಲ್ಲೇ ಡಿಚ್ಚಿ ಕೊಟ್ಟರು. ಈ ಮಾತು ಲೋಕೇಶ್ಗೆ ಸರಿ ಎನಿಸಲಿಲ್ಲ. ‘ನಿಮ್ಮ ಪ್ರಕಾರ ಇಲ್ಲಿ ನಾವು ಹೇಳುವುದೆಲ್ಲ ವೋಟ್ ಪಡೆಯೋದಕ್ಕೋಸ್ಕರನಾ?’ ಎಂದು ಮರುಪ್ರಶ್ನೆ ಹಾಕಿದರು.
ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಸಂಗತಿಗಳು ಆಗಾಗ ಎದುರಾಗುತ್ತವೆ. ಎಮೋಷನ್ಗಳನ್ನು ಇಟ್ಟುಕೊಂಡು ಆಟ ಆಡಲಾಗುತ್ತದೆ. ಈ ಕಾರಣದಿಂದ ಒಂದು ವರ್ಗದ ವೀಕ್ಷಕರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೂ ಪ್ರತಿ ಸೀಸನ್ನಲ್ಲಿ ಇದು ಮುಂದುವರಿಯುತ್ತಲೇ ಇದೆ. ಈ ಬಾರಿ ಶೋ ಆರಂಭದಲ್ಲೇ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ.
ಮೊದಲ ವಾರ 8 ಮಂದಿ ನಾಮಿನೇಟ್:
ಸೋನು ಶ್ರೀನಿವಾಸ್ ಗೌಡ ಸೇರಿದಂತೆ ಒಟ್ಟು 8 ಜನರು ಮೊದಲ ವಾರವೇ ನಾಮಿನೇಟ್ ಆಗಿದ್ದಾರೆ. ಸ್ಫೂರ್ತಿ ಗೌಡ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯಾ, ನಂದಿನಿ, ಜಶ್ವಂತ್, ಕಿರಣ್ ಯೋಗೇಶ್ವರ್ ಮತ್ತು ಅಕ್ಷತಾ ಕುಕ್ಕಿ ಅವರ ಮೇಲೆ ಎಲಿಮಿನೇಷನ್ ಕತ್ತಿ ತೂಗುತ್ತಿದೆ. ಈ ಪೈಕಿ ಯಾರು ಬಿಗ್ ಬಾಸ್ ಮನೆಯಿಂದ ಮೊದಲು ಹೊರಬರುತ್ತಾರೆ ಎಂದು ತಿಳಿಯಲು ವೀಕೆಂಡ್ ಎಪಿಸೋಡ್ ನೋಡಬೇಕು. ಇನ್ನುಳಿದ ಸ್ಪರ್ಧಿಗಳಾದ ಚೈತ್ರಾ ಹಳ್ಳಿಕೇರಿ, ಅರ್ಜುನ್ ರಮೇಶ್, ಲೋಕೇಶ್, ಸೋಮಣ್ಣ ಮಾಚಿಮಾಡ, ರಾಕೇಶ್ ಅಡಿಗ, ಸಾನ್ಯಾ ಐಯ್ಯರ್, ಉದಯ್ ಸೂರ್ಯ, ರೂಪೇಶ್ ಶೆಟ್ಟಿ ಸದ್ಯಕ್ಕೆ ಸೇಫ್ ಆಗಿದ್ದಾರೆ. ನಾಮಿನೇಟ್ ಆಗಿರುವವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಚ್ಚು ಶ್ರಮ ಹಾಕಬೇಕು. ಹಾಗಾಗಿ ಎಮೋಷನಲ್ ಕಾರ್ಡ್ ಬಳಸುತ್ತಿದ್ದಾರೆ ಎಂಬ ಅಭಿಪ್ರಾಯ ವೀಕ್ಷಕರ ವಲಯದಿಂದ ಕೇಳಿಬರುತ್ತಿದೆ.
Published On - 10:16 pm, Sun, 7 August 22