ಜನಪ್ರಿಯ ‘ಕಾಫಿ ವಿತ್ ಕರಣ್’ (Koffee With Karan) ಟಾಕ್ ಶೋ ಹೊಸ ರೂಪದಲ್ಲಿ ಬರುತ್ತಿದೆ. ಇಷ್ಟು ವರ್ಷಗಳ ಕಾಲ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಈ ಕಾರ್ಯಕ್ರಮ ಈಗ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಒಟಿಟಿ ಮೂಲಕ ಪ್ರಸಾರ ಆಗುತ್ತಿದೆ. ಈವರೆಗೂ 6 ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಕಾರ್ಯಕ್ರಮದ 7ನೇ ಸೀಸನ್ ಭರ್ಜರಿಯಾಗಿ ಮೂಡಿಬರುತ್ತಿದೆ. ನಿರೂಪಕ ಕರಣ್ ಜೋಹರ್ (Karan Johar) ಅವರು ಎಂದಿನ ಜೋಶ್ನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಪ್ರತಿ ಎಪಿಸೋಡ್ನಲ್ಲಿ ಇಬ್ಬರು ಅತಿಥಿಗಳನ್ನು ಆಹ್ವಾನಿಸಲಾಗುತ್ತಿದೆ. 4ನೇ ಸಂಚಿಕೆಯಲ್ಲಿ ವಿಜಯ್ ದೇವರಕೊಂಡ (Vijay Devarakonda) ಮತ್ತು ಅನನ್ಯಾ ಪಾಂಡೆ ಅವರು ಗೆಸ್ಟ್ ಆಗಿ ಬಂದಿದ್ದಾರೆ. ಈ ಎಪಿಸೋಡ್ ಜುಲೈ 28ರಂದು ರಾತ್ರಿ 7 ಗಂಟೆಗೆ ಪ್ರಸಾರ ಆಗಲಿದೆ.
ನೇರ ಪ್ರಶ್ನೆಗಳಿಂದಲೇ ‘ಕಾಫಿ ವಿತ್ ಕರಣ್’ ಶೋ ಫೇಮಸ್ ಆಗಿದೆ. ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆ ಕರಣ್ ಜೋಹರ್ ಅವರು ಪ್ರಶ್ನೆ ಕೇಳುತ್ತಾರೆ. ಅವುಗಳಿಗೆ ಉತ್ತರಿಸಲು ನಟ-ನಟಿಯರು ಕೆಲವೊಮ್ಮೆ ಹಿಂದೇಟು ಹಾಕುತ್ತಾರೆ. ಇನ್ನೂ ಕೆಲವರು ತುಂಬ ಜಾಣತನದಿಂದ ಉತ್ತರಿಸಿ ಗಮನ ಸೆಳೆಯುತ್ತಾರೆ. ಈಗ ಕರಣ್ ಜೋಹರ್ ಕೇಳಿದ ಅನೇಕ ಡೈರೆಕ್ಟ್ ಪ್ರಶ್ನೆಗಳಿಗೆ ವಿಜಯ್ ದೇವರಕೊಂಡ ಅವರು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
‘ಲೈಗರ್’ ಸಿನಿಮಾದಲ್ಲಿ ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಕರಣ್ ಜೋಹರ್ ಕೂಡ ನಿರ್ಮಾಪಕರು. ಹಾಗಾಗಿ ತಮ್ಮ ಶೋಗೆ ಇಬ್ಬರನ್ನೂ ಜೋಡಿಯಾಗಿ ಅವರು ಆಹ್ವಾನಿಸಿದ್ದಾರೆ. ಈ ವೇಳೆ ಮದುವೆ, ರಿಲೇಷನ್ಶಿಪ್, ಸೆxಕ್ಸ್ ಮುಂತಾದ ವಿಚಾರಗಳ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಎಪಿಸೋಡ್ನ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ವಿಜಯ್ ದೇವರಕೊಂಡ ಅಭಿಮಾನಿಗಳು ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ವಿಜಯ್ ದೇವರಕೊಂಡ ಅವರಿಗೆ ದೇಶಾದ್ಯಂತ ಬೇಡಿಕೆ ಇದೆ. ‘ಲೈಗರ್’ ಚಿತ್ರದ ಮೂಲಕ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಆಗಸ್ಟ್ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ವಿಶ್ವವಿಖ್ಯಾತ ಬಾಕ್ಸರ್ ಮೈಕ್ ಟೈಸರ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
Published On - 9:31 am, Wed, 27 July 22