
ಖ್ಯಾತ ಗಾಯಕಿ ಪಲಕ್ ಮುಚ್ಚಲ್ (Palak Muchhal) ಅವರ ಸುಮಧುರ ಕಂಠಕ್ಕೆ ಕೋಟ್ಯಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೇವಲ ಹಾಡಿನಿಂದ ಮಾತ್ರವಲ್ಲದೇ ಜನಪರ ಕಾರ್ಯಗಳಿಂದಲೂ ಪಲಕ್ ಮುಚ್ಚಲ್ ಅವರು ಜನಮನ ಗೆದ್ದಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಅವರು ಚಾರಿಟಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಈವರೆಗೂ 3800 ಬಡಮಕ್ಕಳ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ (Heart Surgery) ನೆರವಾಗುವ ಮೂಲಕ ಪಲಕ್ ಮುಚ್ಚಲ್ ಅವರು ಗಿನ್ನೆಸ್ ದಾಖಲೆ (Guinness record) ಬರೆದಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಬಹುಭಾಷೆಯಲ್ಲಿ ಹಾಡುವ ಮೂಲಕ ಪಲಕ್ ಮುಚ್ಚಲ್ ಅವರು ಅಪಾರ ಜನಪ್ರಿಯತೆ ಪಡೆದಿದ್ದಾರೆ. ಕನ್ನಡದಲ್ಲಿ ಕೂಡ ಅವರು ಅನೇಕ ಸೂಪರ್ ಹಿಟ್ ಗೀತೆಗಳಿಗೆ ಧ್ವನಿ ಆಗಿದ್ದಾರೆ. ‘ಅಧ್ಯಕ್ಷ’ ಸಿನಿಮಾದ ‘ಸುಮ್ ಸುಮ್ನೇ..’, ‘ಅಯೋಗ್ಯ’ ಚಿತ್ರದ ‘ಏನಮ್ಮಿ ಏನಮ್ಮಿ..’ ಮುಂತಾದ ಹಾಡುಗಳ ಮೂಲಕ ಕನ್ನಡ ಚಿತ್ರರಂಗದಲ್ಲೂ ಪಲಕ್ ಮುಚ್ಚಲ್ ಅವರು ಹೆಸರು ಮಾಡಿದ್ದಾರೆ. ಅವರ ಹೃದಯವಂತಿಕೆ ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ಹೆಮ್ಮೆ ಇದೆ.
‘ಪಲಕ್ ಪಲಾಶ್ ಚಾರಿಟೆಬಲ್ ಫೌಂಡೇಶನ್’ ಮೂಲಕ ಪಲಕ್ ಮುಚ್ಚಲ್ ಅವರು ಸಾವಿರ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದಾರೆ. ಭಾರತದ ಹಾಗೂ ವಿದೇಶದಲ್ಲಿ ಇರುವ ಬಡ ಮಕ್ಕಳ ಹಾರ್ಟ್ ಸರ್ಜಿರಿಗೆ ಅವರು ನೆರವಾಗಿದ್ದಾರೆ. ಬಾಲಕಿ ಆಗಿದ್ದಾಗಿನಿಂದಲೂ ಪಲಕ್ ಮುಚ್ಚಲ್ ಅವರು ಈ ಕಾರ್ಯ ಮಾಡುತ್ತಾ ಬಂದಿದ್ದಾರೆ. ಈವರೆಗೂ ಒಟ್ಟು 3800 ಬಡ ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲು ನೆರವಾಗಿರುವುದು ಗಿನ್ನೆಸ್ ದಾಖಲೆ ಆಗಿದೆ.
‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಹಾಗೂ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಪುಟಗಳಲ್ಲಿ ಪಲಕ್ ಮುಚ್ಚಲ್ ಅವರ ಹೆಸರು ಸೇರ್ಪಡೆ ಆಗಿದೆ. ಪಲಕ್ ಮುಚ್ಚಲ್ ಅವರು ದೇಶ ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅದರಿಂದ ಬರುವ ಹಣವನ್ನು ಅವರು ಬಡಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಾಗಿ ಮೀಸಲಿಡುತ್ತಾರೆ. ಅವರಿಂದಾಗಿ ಸಾವಿರಾರು ಬಡ ಮಕ್ಕಳ ಜೀವ ಉಳಿದಿದೆ.
ಇದನ್ನೂ ಓದಿ: 3 ದಿನದ ಹಸುಗೂಸಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ: ಶಿವಮೊಗ್ಗದಿಂದ ಬೆಂಗಳೂರಿಗೆ ಶಿಫ್ಟ್
ಇಷ್ಟಕ್ಕೆ ಮಾತ್ರ ಅವರ ಜನಪರ ಕಾರ್ಯಗಳು ಸೀಮಿತವಾಗಿಲ್ಲ. ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೆ ಕೂಡ ಅವರು ಸಹಾಯ ಮಾಡಿದ್ದಾರೆ. ಗುಜರಾತ್ ಭೂಕಂಪ ಸಂತ್ರಸ್ತರ ನೆರವಿಗಾಗಿ ಅವರು 10 ಲಕ್ಷ ರೂಪಾಯಿ ನೀಡಿದ್ದರು. ಹಿಂದಿ, ಕನ್ನಡ, ಬೆಂಗಾಲಿ, ತೆಲುಗು, ತಮಿಳು, ಮರಾಠಿ, ಗುಜರಾತಿ ಮುಂತಾದ ಭಾಷೆಗಳ ಚಿತ್ರರಂಗದಲ್ಲಿ ಪಲಕ್ ಮುಚ್ಚಲ್ ಅವರಿಗೆ ಬೇಡಿಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.