ಒಂದೇ ವರ್ಷದಲ್ಲಿ ಮೂರು ಸಿನಿಮಾಗಳ ಬಿಡುಗಡೆಗೆ ರೆಡಿಯಾದ ನಟ ಪ್ರಭಾಸ್?

‘ರೆಬೆಲ್ ಸ್ಟಾರ್’ ಪ್ರಭಾಸ್ ಅವರ ಮುಂಬರುವ ಸಿನಿಮಾಗಳ ಬಿಡುಗಡೆ ಬಗ್ಗೆ ಇಂಟರೆಸ್ಟಿಂಗ್ ವಿಷಯ ಕೇಳಿಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದೇ ವರ್ಷದ ಅಂತರದಲ್ಲಿ ಪ್ರಭಾಸ್ ಅವರ ಮೂರು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರಲಿವೆ. ‘ಫೌಜಿ’, ‘ಸ್ಪಿರಿಟ್’, ‘ಕಲ್ಕಿ 2’ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿವೆ.

ಒಂದೇ ವರ್ಷದಲ್ಲಿ ಮೂರು ಸಿನಿಮಾಗಳ ಬಿಡುಗಡೆಗೆ ರೆಡಿಯಾದ ನಟ ಪ್ರಭಾಸ್?
Prabhas

Updated on: Jun 16, 2026 | 10:40 PM

ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ (Prabhas) ಸದ್ಯ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಸದ್ಯ ಮೂರ್ನಾಲ್ಕು ದೊಡ್ಡ ಸಿನಿಮಾಗಳಿದ್ದು, ಅವುಗಳ ಬಿಡುಗಡೆಯ ಬಗ್ಗೆ ಸಿನಿಮಾ ವಲಯದಲ್ಲಿ ಒಂದು ಲೆಕ್ಕಾಚಾರ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕೇವಲ ಒಂದು ವರ್ಷದ ಅಂತರದಲ್ಲಿ ಪ್ರಭಾಸ್ ಅವರ 3 ಮೆಗಾ ಸಿನಿಮಾಗಳು (Prabhas Upcoming Movies) ಥಿಯೇಟರ್​ನಲ್ಲಿ ತೆರೆಕಾಣಲಿವೆ. ಒಂದು ವೇಳೆ ಆ ರೀತಿ ಆಗಿದ್ದೇ ಹೌದಾದರೆ ಪ್ರಭಾಸ್ ಅವರ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ಬ್ಯಾಕ್ ಟು ಬ್ಯಾಕ್ ಮನರಂಜನೆ ಸಿಗಲಿದೆ.

ಪ್ರಭಾಸ್ ಅವರ ಮುಂಬರುವ ಸಿನಿಮಾಗಳ ಸಂಭಾವ್ಯ ಬಿಡುಗಡೆಯ ಪಟ್ಟಿಯಲ್ಲಿ ‘ಫೌಜಿ’, ‘ಸ್ಪಿರಿಟ್’, ‘ಕಲ್ಕಿ 2’ ಸಿನಿಮಾಗಳಿವೆ. ಈ ಸಾಲಿನಲ್ಲಿ ಮೊದಲಿಗೆ ಥಿಯೇಟರ್‌ಗೆ ಬರಲು ಸಜ್ಜಾಗುತ್ತಿರುವುದು ಹನು ರಾಘವಪುಡಿ ನಿರ್ದೇಶನದ ‘ಫೌಜಿ’ ಸಿನಿಮಾ. ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಬಹಳ ವೇಗವಾಗಿ ಮುಂದುವರಿಯಲಿದ್ದು, ಚಿತ್ರತಂಡವು ಡಿಸೆಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರಲು ಭರ್ಜರಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.

‘ಅರ್ಜುನ್ ರೆಡ್ಡಿ’, ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಭಾಸ್ ಕಾಂಬಿನೇಷನ್‌ನ ‘ಸ್ಪಿರಿಟ್’ ಚಿತ್ರದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ. ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರವು 2027ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

2024ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ‘ಕಲ್ಕಿ 2’ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಸಿನಿಮಾದ ಅಧಿಕೃತ ಬಿಡುಗಡೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲವಾದರೂ, ಚಿತ್ರವು 2027ರ ಡಿಸೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: ಭೀಕರ ಅಪಘಾತ: ಪ್ರಭಾಸ್ ನಟನೆಯ ‘ಫೌಜಿ’ ಚಿತ್ರತಂಡದ ಸದಸ್ಯ ಸಾವು; ಶೂಟಿಂಗ್ ಸ್ಥಗಿತ

ಒಂದು ವೇಳೆ ಈ ಬಿಡುಗಡೆಯ ಪ್ಲ್ಯಾನ್ ನಿಜವಾದರೆ, 2026ರ ಡಿಸೆಂಬರ್ ತಿಂಗಳಿಂದ 2027ರ ಡಿಸೆಂಬರ್ ನಡುವಿನ ಕೇವಲ 12 ತಿಂಗಳ ಅವಧಿಯಲ್ಲಿ ಪ್ರಭಾಸ್ ಅವರ ಮೂರು ಬಿಗ್ ಬಜೆಟ್ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿವೆ. ಭಾರತೀಯ ಚಿತ್ರರಂಗದ ಇಂದಿನ ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಮಟ್ಟದ ಸಿನಿಮಾಗಳು ಒಂದೇ ವರ್ಷದಲ್ಲಿ ಒಬ್ಬ ಸ್ಟಾರ್ ನಟನಿಂದ ಬರುವುದು ಅಪರೂಪ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us