ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Andhra Pradesh Assembly Election) ಪವನ್ ಕಲ್ಯಾಣ್ (Pawan Kalyan) ಭರ್ಜರಿ ವಿಜಯ ಸಾಧಿಸಿದ ಮೇಲೆ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಮನೆಗೆ ಭೇಟಿ ನೀಡಿದ್ದರು. ಅಣ್ಣನ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಹಾಕಿದರು ಪವನ್ ಕಲ್ಯಾಣ್. ಗೆದ್ದು ಬಂದ ತಮ್ಮನನ್ನು ತಬ್ಬಿ ಮುತ್ತಿಟ್ಟರು ಚಿರಂಜೀವಿ, ಜೊತೆಗೆ ದೊಡ್ಡ ಗುಲಾಬಿ ಹಾರವೊಂದನ್ನು ಹಾಕಿ ಒಳಗೆ ಕರೆದೊಯ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೋಡಿದವರೆಲ್ಲ ಅಣ್ಣ-ತಮ್ಮಂದಿರ ನಡುವಿನ ಪ್ರೀತಿಗೆ, ಪರಸ್ಪರ ಗೌರವಕ್ಕೆ ವಾಹ್ ಎನ್ನುತ್ತಿದ್ದಾರೆ. ಆದರೆ ಈ ಪ್ರೀತಿ ಕೆಲ ವರ್ಷಗಳ ಹಿಂದೆ ಇರಲಿಲ್ಲ. ಪವನ್ ಹಾಗೂ ಚಿರಂಜೀವಿ ಉತ್ತರ ಧ್ರುವ, ದಕ್ಷಿಣ ಧ್ರುವ ಆಗಿದ್ದರು.
ನಂದಮೂರಿ ಕುಟುಂಬಕ್ಕೆ ಹೋಲಿಸಿದರೆ ಮೆಗಾಸ್ಟಾರ್ ಕುಟುಂಬದಲ್ಲಿ ವಿವಾದಗಳು ಕಡಿಮೆ. ಪರಸ್ಪರರ ಬಗ್ಗೆ ಪ್ರೀತಿ-ವಿಶ್ವಾಸವೇ ಹೆಚ್ಚು. ಅದಕ್ಕೆ ಮುಖ್ಯ ಕಾರಣವಾಗಿದ್ದಿದ್ದು ಮೆಗಾಸ್ಟಾರ್ ಕುಟುಂಬದವರು ರಾಜಕೀಯದಿಂದ ದೂರ ಉಳಿದಿದ್ದೇ. ಚಿರಂಜೀವಿ ರಾಜಕೀಯ ಪಕ್ಷ ಸ್ಥಾಪಿಸುವ ಮುನ್ನ ಚಿರು ಸಿನಿಮಾದಲ್ಲಿ ಪವನ್ ಕಲ್ಯಾಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು, ಪವನ್ ಸಿನಿಮಾದಲ್ಲಿ ಚಿರಂಜೀವಿಯ ಹಾಡು, ಚಿತ್ರ, ರೆಫೆರೆನ್ಸ್ಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಚಿರಂಜೀವಿ ಪ್ರಜಾರಾಜ್ಯ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಎಲ್ಲವೂ ಬದಲಾಯ್ತು. ಪವನ್ ಹಾಗೂ ಚಿರಂಜೀವಿ ದೂರಾಗಲು ಸಹ ರಾಜಕೀಯವೇ ಕಾರಣವಾಯ್ತು.
ಪ್ರಜಾರಾಜ್ಯಂ ಸ್ಥಾಪಿಸಿದ್ದ ಚಿರಂಜೀವಿ, ಆ ಪಕ್ಷದ ಯುವ ಘಟಕದ ಜವಾಬ್ದಾರಿಯನ್ನು ಸಹೋದರ ಪವನ್ ಕಲ್ಯಾಣ್ಗೆ ನೀಡಿದ್ದರು. ಪಕ್ಷದ ಮೊದಲ ಸಭೆಯಲ್ಲಿಯೇ ತಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ ಎಂದು ಪವನ್ ಕಲ್ಯಾಣ್, ಚಿರಂಜೀವಿ ಇಬ್ಬರೂ ಘೋಷಿಸಿದರು. ಆದರೆ ಚುನಾವಣೆಯಲ್ಲಿ ಹಿನ್ನಡೆ ಆದ ಬಳಿಕ 2011 ರಲ್ಲಿ ಚಿರಂಜೀವಿ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ ಜೊತೆಗೆ ವಿಲೀನಗೊಳಿಸಿದರು. ಇದು ಪವನ್ಗೆ ಹಿಡಿಸಲಿಲ್ಲ. ಆಗಿನಿಂದಲೇ ಪವನ್, ಅಣ್ಣನೊಂದಿಗೆ ಅಂತರ ಕಾಯ್ದುಕೊಳ್ಳಲು ಪ್ರಾರಂಭ ಮಾಡಿದರು.
ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾಗಳಿಗೆ ಹೆಚ್ಚಳವಾಯ್ತು ಬೇಡಿಕೆ, ದುಪ್ಪಟ್ಟು ಹಣಕ್ಕೆ ಮಾರಾಟ
ಚಿರಂಜೀವಿ ಕಾಂಗ್ರೆಸ್ ಜೊತೆ ಸೇರಿ ಮಂತ್ರಿ ಆದರು, ಚುನಾವಣೆ ಪ್ರಚಾರ ಆರಂಭ ಮಾಡಿದರು. ಆದರೆ ಇತ್ತ ಪವನ್ ಕಲ್ಯಾಣ್ ಅಣ್ಣನ ಮಾತು ವಿರೋಧಿಸಿ ಸ್ವಂತ ಪಕ್ಷ ‘ಜನಸೇನಾ’ ಪ್ರಾರಂಭ ಮಾಡಿದರು. 2014 ರಲ್ಲಿ ಪಕ್ಷ ಸ್ಥಾಪಿಸಿದ ಪವನ್ ಕಲ್ಯಾಣ್, ‘ನನ್ನ ಹಿಂದೆ ರಾಜು ರವಿತೇಜ’ ಬಿಟ್ಟರೆ ಇನ್ಯಾರೂ ಇಲ್ಲ, ಇನ್ಯಾರ ಬೆಂಬಲವೂ ಬೇಕಿಲ್ಲ’ ಎಂದು ಅಣ್ಣ ಚಿರಂಜೀವಿಗೆ ಪರೋಕ್ಷವಾಗಿ ತಿವಿದಿದ್ದರು. 2014 ರ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸಿ ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದರು ಪವನ್. ಅತ್ತ ಅಣ್ಣ ಕಾಂಗ್ರೆಸ್ ನಲ್ಲಿದ್ದರು.
2014 ರ ಚುನಾವಣೆ ಬಳಿಕ ಇಬ್ಬರ ನಡುವಿನ ಅಂತರ ಇನ್ನೂ ಹೆಚ್ಚಾಯ್ತು. 2016 ರಲ್ಲಿ ಚಿರಂಜೀವಿಯವರ 60ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಬಂದ ಪವನ್ ಕಲ್ಯಾಣ್ ಅಭಿಮಾನಿಗಳು, ತೀವ್ರ ಗದ್ದಲ ಎಬ್ಬಿಸಿದ್ದರು. ಸ್ವತಃ ಚಿರಂಜೀವಿ ಮನವಿ ಮಾಡಿದರೂ ಸಹ ಸುಮ್ಮನಾಗದೆ ಪವನ್ ಹೆಸರು ಕೂಗಿದರು. ಈಗ ಪವನ್ ಜೊತೆ ನೆರಳಾಗಿರುವ ಅಣ್ಣ ನಾಗಬಾಬು, ಅಂದು ವೇದಿಕೆ ಮೇಲಿನಿಂದಲೇ ಪವನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದರು. ಪವನ್ ಬಗ್ಗೆಯೂ ಖಾರವಾಗಿ ಮಾತನಾಡಿದ್ದರು. ಆ ಘಟನೆ ಬಳಿಕ ಅಲ್ಲು ಅರ್ಜುನ್ ಸಿನಿಮಾ ಕಾರ್ಯಕ್ರಮದಲ್ಲಿಯೂ ಪವನ್ ಅಭಿಮಾನಿಗಳು ದಾಂಧಲೆ ಎಬ್ಬಿಸಿದ್ದರು. ಆಗ ಅಲ್ಲು ನೇರವಾಗಿಯೇ ಪವನ್ ಪರವಾಗಿ ನಾನು ಮಾತನಾಡುವುದಿಲ್ಲ ಎಂದು ವೇದಿಕೆ ಮೇಲೆ ಹೇಳಿದ್ದರು. ಇದು ಪವನ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳ ನಡುವೆ ಗಲಾಟೆಗೆ ನಾಂದಿಯಾಗಿತ್ತು.
ಇದನ್ನೂ ಓದಿ:ಪವನ್ ಕಲ್ಯಾಣ್ ಗೆದ್ದ ಬೆನ್ನಲ್ಲೆ ಹಳೆಯ ಸಿನಿಮಾ ಮರು ಬಿಡುಗಡೆ
ಆ ಬಳಿಕವೂ ಸಹ ಅಲ್ಲೊಮ್ಮೆ ಇಲ್ಲೊಮ್ಮೆ ಪರೋಕ್ಷವಾಗಿ ಪವನ್ ಕಲ್ಯಾಣ್ ಹಾಗೂ ನಾಗಬಾಬು ಪರಸ್ಪರರ ಬಗ್ಗೆ ಮಾತಿನ ಛಡಿ ಬೀಸಿಕೊಳ್ಳುತ್ತಲೇ ಇದ್ದರು. ಆದರೆ ಕೊನೆಗೆ ಪವನ್ ಕಲ್ಯಾಣ್ ಅವರೇ ಮುಂದೆ ಹೋಗಿ ಅಣ್ಣನೊಂದಿಗಿನ ವಿವಾದವನ್ನು ಬಗೆಹರಿಸಿಕೊಂಡರು. ಹಬ್ಬದಂದು ಚಿರಂಜೀವಿ ಮನೆಗೆ ಹೋಗಿದ್ದ ಪವನ್ ಕಲ್ಯಾಣ್ ಎಲ್ಲರೊಟ್ಟಿಗೆ ಫೋಟೊಕ್ಕೆ ಫೋಸು ನೀಡಿ ಶಾಂತಿ ಸಂಧಾನ ಮಾಡಿಕೊಂಡರು.
ಅಷ್ಟರಲ್ಲಾಗಲೆ ಕಾಂಗ್ರೆಸ್ನಿಂದ ಮಾತ್ರವಲ್ಲದೆ ರಾಜಕೀಯದಿಂದಲೇ ದೂರಾಗಿದ್ದ ಚಿರಂಜೀವಿ, ಪವನ್ ಕಲ್ಯಾಣ್ರ ಯಾವುದೇ ರಾಜಕೀಯ ಕಾರ್ಯಕ್ರಮಕ್ಕೆ ಹೋಗುತ್ತಿರಲಿಲ್ಲ. ಅವರ ಪಕ್ಷಕ್ಕೆ ಬೆಂಬಲವನ್ನೂ ನೀಡಿರಲಿಲ್ಲ. ಅವರ ಪುತ್ರ ರಾಮ್ ಚರಣ್ ಸಹ ಹೋಗಿರಲಿಲ್ಲ. ಆದರೆ ನಾಗಬಾಬು ಮಾತ್ರ ಪವನ್ ಕಲ್ಯಾಣ್ ಜೊತೆ ಸೇರಿಕೊಂಡು ಜನಸೇನಾ ಪಕ್ಷದ ಮುಖಂಡರಾದರು. ಪವನ್ ಜೊತೆ ನೆರಳಾಗಿ ನಿಂತರು. ಆದರೆ ಆಂಧ್ರದಲ್ಲಿ ಜಗನ್ ಸರ್ಕಾರ ಬಂದು ಸಿನಿಮಾ ಮಂದಿಗೆ ಸಮಸ್ಯೆ ಮಾಡಲು ಪ್ರಾರಂಭಿಸಿದ ಬಳಿಕ ಚಿರಂಜೀವಿ, ಪವನ್ಗೆ ಒಂದು ರೀತಿ ಬಹಿರಂಗ ಬೆಂಬಲ ನೀಡಿದರು. ತಮ್ಮನ ಪಕ್ಷಕ್ಕೆ ಕೋಟ್ಯಂತರ ಹಣ ದೇಣಿಗೆ ನೀಡಿದರು. ಈ ಚುನಾವಣೆಯಲ್ಲಿ ಚಿರಂಜೀವಿ ಪತ್ನಿ ಸುರೇಖ ಹಾಗೂ ಚಿರಂಜೀವಿ ಪುತ್ರ ರಾಮ್ ಚರಣ್ ಪೀಠಾಪುರಂಗೆ ತೆರಳಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಪವನ್ ಗೆಲುವಿಗೆ ಸಹಕಾರ ನೀಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ