ಪೊಸಾನಿ ಕೃಷ್ಣ ಮುರಳಿ ಮೇಲೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಹಲ್ಲೆಗೆ ಯತ್ನ, 10 ಜನರ ಬಂಧನ; ಏನಿದು ಪ್ರಕರಣ?
Pawan Kalyan and Posani Krishna Murali: ಟಾಲಿವುಡ್ನ ಖ್ಯಾತ ನಟ ಪವನ್ ಕಲ್ಯಾಣ್ ಅಭಿಮಾನಿಗಳು ನಟ ಪೊಸಾನಿ ಕೃಷ್ಣ ಮುರಳಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂಬಂಧ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಯಾಗಿ ಪೊಸಾನಿ ವಿರುದ್ಧ ಪವನ್ ಅಭಿಮಾನಿಗಳು ದೂರು ದಾಖಲಿಸಿದ್ದಾರೆ.
ತೆಲುಗಿನ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ನಟ ಮತ್ತು ಚಲನಚಿತ್ರ ನಿರ್ಮಾಪಕ ಪೊಸಾನಿ ಕೃಷ್ಣ ಮುರಳಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಮಂಗಳವಾರದಂದು ಹೈದರಾಬಾದ್ ಪ್ರೆಸ್ ಕ್ಲಬ್ ಹೊರಗೆ ಘಟನೆ ನಡೆದಿದೆ. ಪೊಸಾನಿ ಕೃಷ್ಣ ಮುರಳಿ ಮಾತನಾಡುವಾಗ, ಪವನ್ ಕಲ್ಯಾಣ್ರ ವಿರುದ್ಧ ಟೀಕಿಸಿದ್ದಾರೆ ಮತ್ತು ವೈಯಕ್ತಿಕ ತೇಜೋವಧೆಗೆ ಯತ್ನಿಸಿದ್ದಾರೆ ಎಂಬುದು ಅಭಿಮಾನಿಗಳ ಆರೋಪವಾಗಿದೆ. ಕೃಷ್ಣ ಮುರಳಿಯವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಪಟ್ಟ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪವನ್ ಕಲ್ಯಾಣ್ ಇತ್ತೀಚೆಗೆ ಆಂಧ್ರಪ್ರದೇಶದ ಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸುವಾಗ ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾರೆ ಎಂದು ಪೊಸಾನಿ ಕೃಷ್ಣ ಮುರಳಿ ಆರೋಪಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪವನ್ ಕಲ್ಯಾಣ್ ವೈಯಕ್ತಿಕ ಜೀವನದ ವಿಚಾರಗಳನ್ನು ಎಳೆದುತಂದು ಅವರಿಗೆ ಪಂಜಾಬ್ ಮೂಲದ ನಟಿಯೊಂದಿಗೆ ಸಂಬಂಧ ಇತ್ತು ಎಂದು ಆರೋಪಿಸಿದ್ದರು.
ಪೊಸಾನಿ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರುವಾಗ, ಸ್ಥಳ ತಲುಪಿದ ಪವನ್ ಅಭಿಮಾನಿಗಳು ಪೊಸಾನಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ, ಪವನ್ ಅಭಿಮಾನಿಗಳು ಸಭಾಂಗಣದ ಒಳ ಹೋಗಲೂ ಯತ್ನಿಸಿದ್ದಾರೆ. ಆಗ ಪೊಲೀಸರು ಮಧ್ಯಪ್ರವೇಶಿಸಿದ್ದು, ಅಭಿಮಾನಿಗಳನ್ನು ತಡೆದಿದ್ದಾರೆ. ಜೊತೆಗೆ 10 ಜನ ಅಭಿಮಾನಿಗಳನ್ನು ಬಂಧಿಸಿದ್ದಾರೆ. ನಂತರ ಪೊಸಾನಿಯವರಿಗೆ ಸುರಕ್ಷಿತವಾಗಿ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.
ಇತ್ತೀಚೆಗೆ ಪವನ್ ಕಲ್ಯಾಣ್, ಮಾತನಾಡುತ್ತಾ ಆಂಧ್ರ ಪ್ರದೇಶ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದರು. ತಮ್ಮ ಮೇಲಿನ ವೈಯಕ್ತಿಕ ದ್ವೇಷಕ್ಕೆ ಸರ್ಕಾರ ಚಿತ್ರರಂಗವನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದರು. ಬೇಕಿದ್ದರೆ ತನ್ನ ಚಿತ್ರಕ್ಕೆ ನಿಯಮಗಳನ್ನು ಹೇರಲಿ, ಉಳಿದ ನಿರ್ಮಾಪಕರ ಚಿತ್ರಗಳಿಗೆ ಅವಕಾಶ ನೀಡಿ ಎಂದು ಅವರು ನುಡಿದಿದ್ದರು. ಪೊಸಾನಿ ಕೃಷ್ಣ ಮುರಳಿ ವೈಎಸ್ಆರ್ ಪಕ್ಷದ ಬೆಂಬಲಿಗರಾಗಿದ್ದು, ಪವನ್ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದಿದ್ದರು. ಇದೇ ವೇಳೆ ಪವನ್ ವಿರುದ್ಧ ದೂರು ನೀಡುವುದಾಗಿಯೂ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ಈಗಾಗಲೇ ಪೊಸಾನಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ:
ಹೊಸ ಫೋಟೋಶೂಟ್ನಲ್ಲಿ ಮಿಂಚಿದ ಬಿಗ್ ಬಾಸ್ ಪ್ರಿಯಾಂಕಾ ತಿಮ್ಮೇಶ್
Kangana Ranaut: ‘ಬಾಲಿವುಡ್ ಮಾಫಿಯಾ’ಗೆ ಮತ್ತೆ ಟಾಂಗ್ ನೀಡಿದ ಕಂಗನಾ; ಕಾರಣವೇನು?
Published On - 4:48 pm, Wed, 29 September 21