ಮೊದಲ ಚುನಾವಣಾ ಗೆಲುವಿನತ್ತ ಪವನ್ ಕಲ್ಯಾಣ್: ಭಾರಿ ಮುನ್ನಡೆ

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಟ ಪವನ್ ಕಲ್ಯಾಣ್ ಎದುರಾಳಿ ವೈಸಿಪಿಯ ವಂಗಾ ಗೀತಾ ಅವರ ವಿರುದ್ಧ ಭಾರಿ ಮುನ್ನಡೆ ಸಾಧಿಸಿದ್ದಾರೆ. ಮೊದಲ ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ.

ಮೊದಲ ಚುನಾವಣಾ ಗೆಲುವಿನತ್ತ ಪವನ್ ಕಲ್ಯಾಣ್: ಭಾರಿ ಮುನ್ನಡೆ
Follow us
|

Updated on: Jun 04, 2024 | 11:19 AM

ನಟ ಪವನ್ ಕಲ್ಯಾಣ್ (Pawan Kalyan) ರಾಜಕಾರಣ ಪ್ರಾರಂಭಿಸಿ 16 ವರ್ಷಗಳಾಗಿವೆ. ಈ ವರೆಗೆ ನಾಲ್ಕು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ ಗೆಲುವು ನೋಡಲಿದ್ದಾರೆ. ಆಂಧ್ರ ಪ್ರದೇಶದ ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧಿಸಿರುವ ಪವನ್ ಕಲ್ಯಾಣ್​ಗೆ ಮುನ್ನಡೆ ದೊರಕಿದೆ. ಟಿಡಿಪಿ ಬೆಂಬಲದ ಮೂಲಕ ಸ್ಪರ್ಧಿಸಿದ್ದ ಪವನ್ ಕಲ್ಯಾಣ್​ ಮೊದಲಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದು, 11 ಗಂಟೆ ಸುಮಾರಿಗೆ 25 ಸಾವಿರ ಮತಗಳ ಅಂತರದ ಮುನ್ನಡೆಯಲಿದ್ದಾರೆ.

ಪವನ್ ಕಲ್ಯಾಣ್​ಗೆ ಟಿಡಿಪಿಯ ಹಾಲಿ ಶಾಸಕ ಪೀಠಾಪುರಂ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಪವನ್ ಕಲ್ಯಾಣ್ ಅನ್ನು ಸೋಲಿಸಿಯೇ ತೀರಲು ಆಡಳಿತ ಪಕ್ಷವಾಗಿದ್ದ ವೈಸಿಪಿ ಹಲವು ಪ್ರಯತ್ನಗಳನ್ನು ಮಾಡಿತ್ತು. ಟಿಡಿಪಿ ಹಾಲಿ ಶಾಸಕನಿಗೂ ಹಣ ಆಮೀಷ ಒಡ್ಡಿತ್ತು ಹೀಗೆಂದು ಸ್ವತಃ ಶಾಸಕರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಪೀಠಾಪುರಂನಲ್ಲಿ ರ್ಯಾಲಿ ಮಾಡಿದ್ದ ಜಗನ್, ಪವನ್ ಎದುರಾಳಿ ವೈಸಿಪಿ ಅಭ್ಯರ್ಥಿ ವಂಗ ಗೀತಾ ಅವರನ್ನು ಗೆಲ್ಲಿಸಿದರೆ ಅವರನ್ನು ಉಪಮುಖ್ಯ ಮಂತ್ರಿ ಮಾಡುವುದಾಗಿ ಘೋಷಿಸಿದ್ದರು.

ರಾಜ್ಯದಾದ್ಯಂತ ಪ್ರಚಾರ ಮಾಡಿದ್ದ ಪವನ್ ಕಲ್ಯಾಣ್​ ಪೀಠಾಪುರಂ ಕ್ಷೇತ್ರದಲ್ಲಿ ಹೆಚ್ಚಿನ ಪ್ರಚಾರ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಪವನ್ ಪರವಾಗಿ ರಾಮ್ ಚರಣ್, ಪವನ್​ರ ಅತ್ತಿಗೆ ಸುರೇಖಾ ಚಿರಂಜೀವಿ, ಹಲವು ಕಲಾವಿದರು ಆಗಮಿಸಿ ಬಹಿರಂಗ ಪ್ರಚಾರ ಮಾಡಿದ್ದರು. ಇದೆಲ್ಲದರ ಫಲವಾಗಿ ಈಗ ಪವನ್ ಕಲ್ಯಾಣ್ ಭಾರಿ ಮುನ್ನಡೆ ಪಡೆದಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಸೋಲಿಸಲು ನೂರಾರು ಕೋಟಿ ಆಫರ್: ಗುಟ್ಟು ಬಿಚ್ಚಿಟ್ಟ ಮಾಜಿ ಶಾಸಕ

ಇನ್ನು ಆಂಧ್ರ ವಿಧಾನಸಭೆಯಲ್ಲಿ ಟಿಡಿಪಿ ಪಕ್ಷ ಭಾರಿ ಮುನ್ನಡೆಯಲ್ಲಿದ್ದು ಗೆಲುವು ಖಾತ್ರಿಯಾಗಿದೆ. ಟಿಡಿಪಿ, ಪವನ್ ಕಲ್ಯಾಣ್​ರ ಜನಸೇನಾ ಹಾಗೂ ಬಿಜೆಪಿ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಪವನ್ ಕಲ್ಯಾಣ್​ರ ಜನಸೇನಾ ಪಕ್ಷಕ್ಕೆ 25 ಸೀಟುಗಳನ್ನು ನೀಡಲಾಗಿತ್ತು, ಅದರಲ್ಲಿ 17 ಸೀಟುಗಳಲ್ಲಿ ಜನಸೇನಾ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಆ ಮೂಲಕ ಪವನ್ ಕಲ್ಯಾಣ್ ಆಂಧ್ರ ರಾಜಕೀಯದಲ್ಲಿ ಖಾತೆ ತೆರೆಯುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ