ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಮತ್ತೆ ಮುಂದೂಡಿಕೆ

Pawan Kalyan movie: ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಜೂನ್ 12 ಕ್ಕೆ ಬಿಡುಗಡೆ ಆಗಲಿತ್ತು. ಆದರೆ ಇದೀಗ ಮತ್ತೊಮ್ಮೆ ಸಿನಿಮಾದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ಹೊಸ ಬಿಡುಗಡೆ ದಿನಾಂಕದ ಘೋಷಣೆಯನ್ನೂ ಮಾಡಿಲ್ಲ. ಕಳೆದ ಮೂರು ವರ್ಷದಿಂದ ಪವನ್ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ತೀವ್ರ ನಿರಾಸೆ ತಂದಿದೆ.

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಮತ್ತೆ ಮುಂದೂಡಿಕೆ
Hari Hara Veera Mallu

Updated on: Jun 06, 2025 | 4:04 PM

ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ (Pawan Kalyan) ನಟಿಸಿರುವ ‘ಹರಿ ಹರ ವೀರ ಮಲ್ಲು’ ಐದು ವರ್ಷಗಳ ಬಳಿಕ ಜೂನ್ 12 ರಂದು ಬಿಡುಗಡೆ ಆಗುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಸಿನಿಮಾ ಬಿಡುಡಗೆಗೆ ಸಕಲ ತಯಾರಿ ನಡೆಸಿಯಾಗಿತ್ತು. ಸಿನಿಮಾ ತಂಡ ಪ್ರಚಾರ ಕಾರ್ಯಕ್ರಮಗಳನ್ನು ಸಹ ಮಾಡಿದ್ದರು. ಆದರೆ ಇದೀಗ ಮತ್ತೊಮ್ಮೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಈಗಾಗಲೇ ಹಲವು ಬಾರಿ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದ್ದು, ಜೂನ್ 12 ರಂದು ಪಕ್ಕಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಇದೀಗ ಪವನ್ ಅಭಿಮಾನಿಗಳ ನಿರೀಕ್ಷೆ ಮತ್ತೆ ಹುಸಿಯಾಗಿದೆ.

ಸಿನಿಮಾದ ವಿಎಫ್​ಎಕ್ಸ್ ಕಾರಣಕ್ಕೆ ಫೈನಲ್ ಪ್ರಿಂಟ್ ರೆಡಿಯಾಗಲು ತಡ ಆಗುತ್ತಿದೆಯಂತೆ. ಫೈನಲ್ ಪ್ರಿಂಟ್ ರೆಡಿ ಆಗದೆ ಸಿನಿಮಾ ಅನ್ನು ಸೆನ್ಸಾರ್​ಗೆ ವಿಶೇಷವಾಗಿ ವಿದೇಶಗಳಲ್ಲಿ ಸೆನ್ಸಾರ್​ಗೆ ಕಳಿಸಲು ಸಾಧ್ಯವಿಲ್ಲದ ಕಾರಣ ಸಿನಿಮಾ ಬಿಡುಗಡೆಯನ್ನೇ ಚಿತ್ರತಂಡ ಮುಂದೂಡಿದೆ. ಆದರೆ ಮುಂದಿನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಲ್ಲ. ಅಸಲಿಗೆ ಜೂನ್ 8 ರಂದು ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ತಿರುಪತಿಯಲ್ಲಿ ಆಯೋಜಿಸಲಾಗಿತ್ತು. ಅದನ್ನೂ ಸಹ ರದ್ದು ಮಾಡಲಾಗಿದೆ. ಆದರೆ ಅದಕ್ಕೆ ಸ್ಪಷ್ಟ ಕಾರಣ ನೀಡಲಾಗಿಲ್ಲ. ಆ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಜೊತೆಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹ ಭಾಗಿ ಆಗುವವರಿದ್ದರು.

ಇದೀಗ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿರುವುದು ನೋಡಿದರೆ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮದ ಬಳಿಕವೇ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಲ್ಲಿ ಚಿತ್ರತಂಡ ಇದ್ದಂತಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಸಹ ಬಾಕಿ ಇದೆ. ಸಮಂಜಸವಾದ ಪ್ರಚಾರದ ಬಳಿಕವೇ ಸಿನಿಮಾ ಅನ್ನು ಬಿಡುಗಡೆ ಮಾಡುವಂತೆ ಬಾಲಿವುಡ್ ಸಿನಿಮಾ ವಿತರಕ ಅನಿಲ್ ತಂಡಾನಿ ಸಹ ಸಲಹೆ ನೀಡಿದ್ದಾರಂತೆ. ಉತ್ತರ ಭಾರತದಲ್ಲಿ ಸಿನಿಮಾದ ವಿತರಣೆಯನ್ನು ಅವರೇ ಮಾಡಲಿದ್ದಾರೆ.

ಇದನ್ನೂ ಓದಿ:ಯೂಟ್ಯೂಬರ್ ಬಂಧನ, ಬೆಂಬಲಕ್ಕೆ ಬಂದ ಪವನ್ ಕಲ್ಯಾಣ್, ಕಂಗನಾ

‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣವನ್ನು ಐದು ವರ್ಷದ ಹಿಂದೆ ಪ್ರಾರಂಭ ಮಾಡಲಾಗಿತ್ತು. ಆಗ ಕ್ರಿಶ್ ಸಿನಿಮಾ ನಿರ್ದೇಶಕರಾಗಿದ್ದರು. ಸಿನಿಮಾದ ಚಿತ್ರೀಕರಣ ಕೆಲ ದಿನಗಳು ನಡೆದ ನಂತರ ಸೆಟ್​ನಲ್ಲಿ ಬೆಂಕಿ ಬಿದ್ದು ಸಮಸ್ಯೆಯಾಗಿ ಕೆಲ ಕಾಲ ಚಿತ್ರೀಕರಣ ಬಂದ್ ಆಯ್ತು. ಆ ನಂತರ ಪವನ್ ಅವರು ಬೇರೊಂದು ಸಿನಿಮಾದಲ್ಲಿ ತೊಡಗಿಕೊಂಡರು. ಬಳಿಕ ‘ಹರಿ ಹರ ವೀರ ಮಲ್ಲು’ ಸಿನಿಮಾ ಚಿತ್ರೀಕರಣಕ್ಕೆ ಮರಳಿದರಾದರೂ, ಅದೇ ವೇಳೆಗೆ ಆಂಧ್ರ ಪ್ರದೇಶ ರಾಜಕೀಯದಲ್ಲಿ ಚಂದ್ರಬಾಬು ನಾಯ್ಡು ಬಂಧನ, ಸರಣಿ ಪ್ರತಿಭಟನೆಗಳು ಪ್ರಾರಂಭವಾಗಿ ಪವನ್ ಕಲ್ಯಾಣ್ ಚಿತ್ರೀಕರಣ ಬಿಟ್ಟು ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡರು.

ಬಳಿಕ ಆಂಧ್ರ ಪ್ರದೇಶ ಚುನಾವಣೆ ಪ್ರಚಾರಕ್ಕೆ ಧುಮುಕುವ ಮೂಲಕ ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣವನ್ನು ಸಂಪೂರ್ಣವಾಗಿ ಬದಿಗೊತ್ತಿದರು. ಚುನಾವಣೆ ಫಲಿತಾಂಶ ಬಂದ ಬಳಿಕ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆದ ಪವನ್ ಕಲ್ಯಾಣ್ ಚಿತ್ರರಂಗದಿಂದಲೇ ದೂರಾದರು. ಆದರೆ ನಿರ್ಮಾಪಕರು, ಫೈನ್ಯಾನ್ಶಿಯರ್​ಗಳ ಒತ್ತಡದಿಂದಾಗಿ 15 ದಿನದ ಸಮಯ ನೀಡಿ ‘ಹರಿ ಹರ ವೀರ ಮಲ್ಲು’ ಸಿನಿಮಾ ಚಿತ್ರೀಕರಣ, ಡಬ್ಬಿಂಗ್ ಮುಗಿಸಿಕೊಟ್ಟರು. ಈ ಸಮಯದಲ್ಲಿ ಸಿನಿಮಾದ ನಿರ್ದೇಶಕರು ಸಹ ಬದಲಾದರು. ಕ್ರಿಶ್ ಬದಲು ಜ್ಯೋತಿ ಕೃಷ್ಣ ನಿರ್ದೇಶನ ಮಾಡಿದರು. ಸಿನಿಮಾ ಅನ್ನು ಜೂನ್ 12 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಂಗಳ ಮುಂಚೆಯೇ ಘೋಷಣೆ ಮಾಡಿತ್ತು. ಆದರೆ ಈಗ ಸಿನಿಮಾ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ಮುಂದಿನ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ