150 ವರ್ಷ ಬದುಕುತ್ತೇನೆ, ಆ ಗುಟ್ಟು ಹೇಳುತ್ತೇನೆ ಆದರೊಂದು ಷರತ್ತು: ಶರತ್ ಕುಮಾರ್
Sharath Kumar: ನಟ ಶರತ್ ಕುಮಾರ್ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ್ದು, ಶರತ್ ಅವರ ವಯಸ್ಸು 69 ಆದರೆ ಈಗಲೂ ಫಿಟ್ ಆಗಿದ್ದಾರೆ. ಶರತ್ ಅವರು ಹೇಳಿರುವಂತೆ ಅವರು 150 ವರ್ಷ ಬದುಕಿರಲಿದ್ದಾರಂತೆ. 150 ವರ್ಷ ಹೇಗೆ ಬದುಕಿರಬೇಕು ಎಂಬುದು ಅವರಿಗೆ ಗೊತ್ತಿದ್ದು, ಅದನ್ನು ಎಲ್ಲರಿಗೂ ಹೇಳಿಕೊಡುತ್ತಾರಂತೆ ಆದರೆ ಒಂದು ಷರತ್ತು ವಿಧಿಸಿದ್ದಾರೆ.

ನಟ ಶರತ್ ಕುಮಾರ್ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ಬಲು ಜನಪ್ರಿಯ ನಟ. ಈಗ ನಟ ಶರತ್ಗೆ ವಯಸ್ಸು 69 ಆದರೆ ಈಗಲೂ ಸಹ ಫಿಟ್ ಆಗಿದ್ದಾರೆ. ಒಳ್ಳೆಯ ದೇಹದಾರ್ಡ್ಯ ಹೊಂದಿದ್ದಾರೆ. ಈಗಲೂ ಸಿನಿಮಾಗಳಲ್ಲಿ ಪೋಷಕ ನಟ, ವಿಲನ್ ಪಾತ್ರಗಳಲ್ಲಿಯೂ ಮಿಂಚುತ್ತಿದ್ದಾರೆ. ರಾಜಕೀಯದಲ್ಲಿಯೂ ಶರತ್ ಕುಮಾರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶರತ್ ಕುಮಾರ್, ‘ನಾನು 150 ವರ್ಷ ಬದುಕುತ್ತೇನೆ, ಆ ವಿದ್ಯೆ ಎಲ್ಲರಿಗೂ ಹೇಳಿಕೊಡುತ್ತೇನೆ, ಆದರೆ ಅದಕ್ಕೊಂದು ಷರತ್ತು ಇದೆ’ ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶರತ್ ಕುಮಾರ್, ‘ನನಗೀಗ 69 ವರ್ಷ ವಯಸ್ಸು, ಕೆಲವೇ ದಿನಗಳಲ್ಲಿ 70 ವರ್ಷದವನಾಗಲಿದ್ದೇನೆ, ಆದರೆ ಈಗಲೂ ಸಹ 25 ವರ್ಷದವನಂತೆ ಉತ್ಸಾಹ ಶಕ್ತಿ ನನ್ನಲ್ಲಿದೆ. ನಾನು 150 ವರ್ಷಗಳ ವರೆಗೆ ಬದುಕುತ್ತೇನೆ, ಏಕೆಂದರೆ ಅಷ್ಟು ವರ್ಷ ಹೇಗೆ ಬದುಕಬೇಕು ಎಂಬುದನ್ನು ನಾನು ಕಲಿತಿದ್ದೇನೆ. ಅದನ್ನು ಪಾಲಿಸುತ್ತಿದ್ದೇನೆ. ಆ ವಿದ್ಯೆಯನ್ನು ನಿಮಗೂ ಹೇಳಿಕೊಡುತ್ತೇನೆ. ಆದರೆ 2026ರ ಚುನಾವಣೆಯಲ್ಲಿ ಗೆಲ್ಲಿಸಿ, ನನ್ನನ್ನು ಸಿಎಂ ಮಾಡಿದರೆ ಮಾತ್ರವೇ ನಿಮಗೆ ಆ ಗುಟ್ಟು ನಾನು ಹೇಳಲಿದ್ದೇನೆ’ ಎಂದಿದ್ದಾರೆ.
ಶರತ್ ಕುಮಾರ್ ಅವರ ಮಾತುಗಳು ಸಖತ್ ಟ್ರೋಲ್ ಆಗಿವೆ. ‘ನೀವು ಮೊದಲು 150 ವರ್ಷ ಬದುಕಿ ತೋರಿಸಿ, ನಿಮಗೆ 149 ವರ್ಷ ಆಗಿದ್ದಾಗ ಬೇಕಾದರೆ ನಾವು ನಿಮ್ಮನ್ನು ಸಿಎಂ ಮಾಡುತ್ತೇವೆ. ಆಗ ನಮಗೆ ವಿದ್ಯೆ ಹೇಳಿಕೊಡಿ’ ಎಂದಿದ್ದಾರೆ ಕೆಲವರು. ಇನ್ನು ಕೆಲವರು ಸಿಎಂ ಆಗುವ ಆಸೆಯಿಂದ ಈ ವ್ಯಕ್ತಿ ಜನರಿಗೆ ಸುಳ್ಳು ಹೇಳುತ್ತಿದ್ದಾನೆ ಎಂದು ಕೆಲವರು ಟೀಕೆ ಮಾಡಿದ್ದಾರೆ. ವ್ಯಕ್ತಿಯ ಆಯಸ್ಸು 60 ರಿಂದ 70 ಅಷ್ಟೆ, ಈ ವ್ಯಕ್ತಿಯ ಮಾತು ಕೇಳಿ ಮೂರ್ಖರಾಗಬೇಡಿ ಎಂದು ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:ತಮಿಳು ಸಿನಿಮಾ ನಿರ್ಮಾಪಕರ ಸಂಘದಿಂದ ಫಿಲಂ ಚೇಂಬರ್ಗೆ ಪತ್ರ
ಶರತ್ ಕುಮಾರ್ 1994 ರಿಂದಲೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲಿಗೆ ಅವರು ಎಐಎಡಿಎಂಕೆ ಪಕ್ಷದೊಂದಿಗೆ ಆತ್ಮೀಯವಾಗಿದ್ದರು. ಜಯಲಲಿತಾ ಅವರ ಹತ್ತಿರದ ಗೆಳೆಯರಾಗಿದ್ದರು. ಬಳಿಕ ‘ನೆಟ್ಟಮೈ’ ಸಿನಿಮಾ ವಿವಾದದಿಂದಾಗಿ ಇಬ್ಬರು ದೂರಾದರು. ಎಐಡಿಎಂಕೆ ಪಕ್ಷದವರು ಶರತ್ ವಿರುದ್ಧ ವಾಗ್ದಾಳಿ ಆರಂಭಿಸಿದರು. ಬಳಿಕ ಶರತ್ ಕುಮಾರ್, ರಜನೀಕಾಂತ್ ಜೊತೆ ಸೇರಿ ಡಿಎಂಕೆ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಲ್ಲದೆ, ಆ ಪಕ್ಷವನ್ನೂ ಸೇರ್ಪಡೆಗೊಂಡರು. ಆ ಬಳಿಕ ರಾಜ್ಯಸಭಾ ಸದಸ್ಯರಾದರು, 2006 ರಲ್ಲಿ ಅವರು ಡಿಎಂಕೆ ಪಕ್ಷ ತೊರೆದು ಪತ್ನಿ ರಾಧಿಕಾ ಜೊತೆಗೆ ಎಐಡಿಎಂಕೆ ಸೇರ್ಪಡೆಗೊಂಡರು. ಆದರೆ ಅಲ್ಲಿಂದಲೂ ಉಚ್ಛಾಟನೆಗೊಂಡರು.
ಆ ಬಳಿಕ 2007 ರಲ್ಲಿ ಪತ್ನಿ ರಾಧಿಕಾ ಜೊತೆ ಸೇರಿ ಆಲ್ ಇಂಡಿಯಾ ಸಮುತ್ವ ಮಕ್ಕಳ್ ಕಚ್ಚಿ ಹೆಸರಿನ ಪಕ್ಷ ಸ್ಥಾಪನೆ ಮಾಡಿದರು. ಈಗಲೂ ಸಹ ಆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 2024 ರಲ್ಲಿ ತಮ್ಮ ಪಕ್ಷವನ್ನು ಭಾರತೀಯ ಜನತಾ ಪಾರ್ಟಿ ಜೊತೆಗೆ ಸೇರ್ಪಡೆಗೊಳಿಸಿದರು. ಮುಂದಿನ ಚುನಾವಣೆಗೆ ತಾವು ಸಿಎಂ ಅಭ್ಯರ್ಥಿ ಎಂದು ಸಹ ಆಗ ಅವರು ಘೋಷಿಸಿದ್ದರು.
ದಕ್ಷಿಣದ ಎಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸಿರುವ ಶರತ್ ಕುಮಾರ್, ಕನ್ನಡದಲ್ಲಿ ‘ಸಾರಥಿ’, ‘ರಾಜಕುಮಾರ’, ‘ಮೈನಾ’, ‘ಜೇಮ್ಸ್’, ‘ಸೀತಾರಾಮ ಕಲ್ಯಾಣ’ ಇನ್ನೂ ಕೆಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಪತ್ನಿ ರಾಧಿಕಾ ಪುತ್ರಿ ವರಲಕ್ಷ್ಮಿ ಶರತ್ಕುಮಾರ್ ಸಹ ಜನಪ್ರಿಯ ನಟಿಯರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ