ಪವನ್ ಕಲ್ಯಾಣ್ ನಟನೆಯ ಸಿನಿಮಾ ಸೆಟ್​ನಲ್ಲಿ ಭಾರಿ ಅಗ್ನಿ ಅವಘಡ

|

Updated on: May 30, 2023 | 5:06 PM

Pawan Kalyan: ಪವನ್ ಕಲ್ಯಾಣ್ ನಟನೆಯ ಐತಿಹಾಸಿಕ ಕತೆ ಆಧರಿತ ಹರಿಹರ ವೀರ ಮಲ್ಲು ಸಿನಿಮಾ ಚಿತ್ರೀಕರಣಕ್ಕಾಗಿ ಹಾಕಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸೆಟ್ ಬೆಂಕಿಗೆ ಆಹುತಿಯಾಗಿದೆ.

ಪವನ್ ಕಲ್ಯಾಣ್ ನಟನೆಯ ಸಿನಿಮಾ ಸೆಟ್​ನಲ್ಲಿ ಭಾರಿ ಅಗ್ನಿ ಅವಘಡ
ಹರಿ ಹರ ವೀರ ಮಲ್ಲು
Follow us on

ಪವನ್ ಕಲ್ಯಾಣ್ (Pawan Kalyan) ನಟನೆಯ ಐತಿಹಾಸಿಕ ಕತೆಯುಳ್ಳ ಹರಿಹರ ವೀರ ಮಲ್ಲು (Hari Hara Veera Mallu) ಸಿನಿಮಾದ ಸೆಟ್​ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು ಸೆಟ್​ ಬಹುತೇಕ ಅಗ್ನಿಗೆ ಆಹುತಿಯಾಗಿದೆ. ಅವಘಡದಲ್ಲಿ ಯಾವುದೇ ಜೀವ ಹಾನಿ ಅಥವಾ ಯಾರಿಗೂ ಗಾಯಗಳಾಗಿಲ್ಲವಾದರೂ ಸೆಟ್​ಗೆ ಹೂಡಲಾಗಿದ್ದ ಕೋಟ್ಯಂತರ ರುಪಾಯಿಗಳ ಬಂಡವಾಳ ಉರಿದು ಬೂದಿಯಾಗಿದೆ. ತೆಲಂಗಾಣದ (Telangana) ದುಂಡಿಗಲ್​ನ ಬೀರಂಪೇಟ್ ನಲ್ಲಿ ಹರಿಹರ ವೀರ ಮಲ್ಲು ಸಿನಿಮಾಕ್ಕಾಗಿ ಅದ್ಧೂರಿ ಸೆಟ್​ಗಳನ್ನು ಹಾಕಲಾಗಿತ್ತು. ಆದರೆ ಭಾನುವಾರ ತಡರಾತ್ರಿ ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದಾಗಿ ಸೆಟ್ ಸಂಪೂರ್ಣ ನಾಶವಾಗಿದೆ. ಆದರೆ ಯಾರಿಗೂ ಗಾಯಗಳಾಗಲಿ, ಜೀವ ಹಾನಿಯಾಗಲಿ ಆಗಿಲ್ಲ. ಆದರೆ ಈಗ ಬೆಂಕಿಗೆ ಆಹುತಿಯಾಗಿರುವ ಸೆಟ್​ ಅನ್ನು ಸುಮಾರು 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು ಎನ್ನಲಾಗುತ್ತಿದೆ.

ಹರಿಹರ ವೀರ ಮಲ್ಲು ಸಿನಿಮಾದ 75% ಚಿತ್ರೀಕರಣ ಮುಗಿದಿತ್ತು ಆದರೆ ಇನ್ನೂ 25% ಚಿತ್ರೀಕರಣ ಬಾಕಿ ಇತ್ತು. ಈ ಸಿನಿಮಾದ ಚಿತ್ರೀಕರಣ ಮುಗಿಸಿ ಆಂಧ್ರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಯೋಜನೆಯಲ್ಲಿ ಪವನ್ ಕಲ್ಯಾಣ್ ಇದ್ದರು. ಆದರೆ ಈಗ ಸೆಟ್​ ಬೆಂಕಿಗೆ ಆಹುತಿಯಾಗಿರುವ ಕಾರಣ ಮತ್ತೆ ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡಬೇಕಿದೆ. ಇದು ಪವನ್ ಕಲ್ಯಾಣ್ ಸೇರಿದಂತೆ ಸಿನಿಮಾದ ಇತರ ನಟರ ಡೇಟ್​ಗಳ ಮೇಲೆಯೂ ಪರಿಣಾಮ ಬೀರಲಿದ್ದು, ಚುನಾವಣೆಗೆ ತಯಾರಾಗುತ್ತಿರುವ ಪವನ್ ಕಲ್ಯಾಣ್ ಹೇಗೆ ಈ ಸಿನಿಮಾ ಮುಗಿಸುತ್ತಾರೆ ಅಥವಾ ಚುನಾವಣೆ ಬಳಿಕ ಸಿನಿಮಾ ಮುಗಿಸುತ್ತಾರೆಯೋ ಕಾದು ನೋಡಬೇಕಿದೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಮೊದಲ ಪತ್ನಿ ನಂದಿನಿ ಈಗ ಎಲ್ಲಿದ್ದಾರೆ? ಅಬ್ಬಬ್ಬಾ ಅವರ ಆಸ್ತಿ ಇಷ್ಟೊಂದಾ?

ಹರಿ ಹರ ವೀರ ಮುಲ್ಲು, ಪವನ್ ಕಲ್ಯಾಣ್​ರ ಮೊತ್ತ ಮೊದಲ ಐತಿಹಾಸಿಕ ಕತೆ ಆಧರಿತ ಸಿನಿಮಾ ಆಗಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ಬಾಲಿವುಡ್​ನ ಬಾಬಿ ಡಿಯೋಲ್ ಸಹ ಇದ್ದಾರೆ. ನಾಯಕಿಯರಾಗಿ ನಿಧಿ ಅಗರ್ವಾಲ್ ಹಾಗೂ ನರ್ಗಿಸ್ ಫಕ್ರಿ ನಟಿಸುತ್ತಿದ್ದಾರೆ. 17ನೇ ಶತಮಾನದಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ವೀರ ಮಲ್ಲು ಜೀವನದ ಕುರಿತ ಸಿನಿಮಾ ಇದಾಗಿದೆ. ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಮೇಘ ಸೂರ್ಯ ಪ್ರೊಡಕ್ಷನ್​ನ ದಿವಾಕರ್ ರಾವ್.

ಪವನ್ ಕಲ್ಯಾಣ್ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಹರಿ ಹರ ವೀರ ಮಲ್ಲು ಸಿನಿಮಾದ ಜೊತೆಗೆ ಓಜಿ- ಒರಿಜಿನಲ್ ಗ್ಯಾಂಗ್​ಸ್ಟರ್ ಹೆಸರಿನ ಸಿನಿಮಾವನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದರ ಜೊತೆಗೆ ಉಸ್ತಾದ್ ಭಗತ್ ಸಿಂಗ್, ಹಾಗೂ ತಮ್ಮದೇ ಸಹೋದರ ಸಂಬಂಧಿ ಸಾಯಿ ಧರಮ್ ತೇಜ್ ಜೊತೆಗೆ ಬ್ರೋ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇವುಗಳ ಬಳಿಕ ಸುರೇಂದರ್ ರೆಡ್ಡಿ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ.
ಒಟ್ಟಿಗೆ ಐದು ಸಿನಿಮಾಗಳು ಪವನ್ ಕಲ್ಯಾಣ್ ಒಪ್ಪಿಕೊಂಡಿದ್ದು ಆಂಧ್ರ ವಿಧಾನಸಭೆ ಚುನಾವಣೆಗೆ ಮುನ್ನ ಕನಿಷ್ಟ ನಾಲ್ಕು ಸಿನಿಮಾಗಳನ್ನಾದರೂ ಮುಗಿಸುವ ಆತುರದಲ್ಲಿ ಪವನ್ ಕಲ್ಯಾಣ್ ಇದ್ದಾರೆ. ಹರಿಹರ ವೀರ ಮಲ್ಲು, ಹಾಗೂ ಉಸ್ತಾದ್ ಭಗತ್ ಸಿಂಗ್ ಸಿನಿಮಾಗಳ ಮುಕ್ಕಾಲು ಭಾಗ ಚಿತ್ರೀಕರಣ ಮುಗಿದಿದೆ. ಬ್ರೋ ಹಾಗೂ ಓಜಿ ಸಿನಿಮಾಗಳ ಚಿತ್ರೀಕರಣ ಇತ್ತೀಚೆಗಷ್ಟೆ ಪ್ರಾರಂಭವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ