ಪವನ್ ಕಲ್ಯಾಣ್ ನಟನೆ ‘ಓಜಿ’ ಟ್ರೈಲರ್ ಬಿಡುಗಡೆ ತಡ, ಆದರೆ ಅದ್ಧೂರಿ
OG Movie trailer: ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾದ ಟ್ರೈಲರ್ ಇಂದು (ಸೆಪ್ಟೆಂಬರ್ 21) ಬೆಳಿಗ್ಗೆ ಬಿಡುಗಡೆ ಆಗಬೇಕಿತ್ತು ಆದರೆ ಚಿತ್ರತಂಡವು ಟ್ರೈಲರ್ ಬಿಡುಗಡೆ ಮುಂದೂಡಿದೆ. ಆದರೆ ಮತ್ತಷ್ಟು ಅದ್ಧೂರಿಯಾಗಿ ಟ್ರೈಲರ್ ಅನ್ನು ಬಿಡುಗಡೆ ಮಾಡಲಿದೆ. ಇದೇ ದಿನ ಸಂಜೆ ವೇಳೆಗೆ ಅದ್ಧೂರಿ ಕಾರ್ಯಕ್ರಮದಲ್ಲಿ ಟ್ರೈಲರ್ ಬಿಡುಗಡೆ ಆಗಲಿದೆ.

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರ ‘ಓಜಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಇಂದು (ಸೆಪ್ಟೆಂಬರ್ 21) ಬೆಳಿಗ್ಗೆ ಬಿಡುಗಡೆ ಆಗಬೇಕಿತ್ತು, ಆದರೆ ಟ್ರೈಲರ್ ಬಿಡುಗಡೆಯನ್ನು ಮುಂದೂಡಲಾಗಿದೆ. ಹಾಗೆಂದು ಟ್ರೈಲರ್ ಬಿಡುಗಡೆ ಬಹಳ ತಡವಾಗುತ್ತಿಲ್ಲ, ಇಂದೇ ಬಿಡುಗಡೆ ಆಗಲಿದೆ ಆದರೆ ಇನ್ನಷ್ಟು ಅದ್ಧೂರಿಯಾಗಿ ಟ್ರೈಲರ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ‘ಓಜಿ ಕಾನ್ಸರ್ಟ್’ ಅನ್ನು ಆಯೋಜಿಸಲಾಗಿದ್ದು, ಕಾನ್ಸರ್ಟ್ನ ಭಾಗವಾಗಿ ಟ್ರೈಲರ್ ಬಿಡುಗಡೆ ಸಹ ನಡೆಯಲಿದೆ.
ಹೈದರಾಬಾದ್ನಲ್ಲಿ ಇಂದು (ಸೆಪ್ಟೆಂಬರ್ 21) ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಬಲು ಅದ್ಧೂರಿಯಾಗಿ ಆಯೋಜನೆ ಮಾಡಲಾಗಿದೆ. ಹೈದರಾಬಾದ್ನ ಎಲ್ಬಿ ಸ್ಟೇಡಿಯಂನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪವನ್ ಕಲ್ಯಾಣ್ ಸೇರಿದಂತೆ ಇನ್ನೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ‘ಓಜಿ ಕಾನ್ಸರ್ಟ್’ ಆಯೋಜನೆ ಮಾಡಲಾಗಿದ್ದು, ಸಂಗೀತ ನಿರ್ದೇಶಕ ತಮನ್ ಅವರು ಲೈವ್ ಸಂಗೀತ ಪ್ರದರ್ಶನ ನೀಡಲಿದ್ದಾರೆ.
ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಜೊತೆಗೆ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಸಹ ಭಾಗಿ ಆಗಲಿದ್ದಾರೆ. ಮಾತ್ರವಲ್ಲದೆ ತೆಲಂಗಾಣದ ಕೆಲವು ಪ್ರಮುಖ ರಾಜಕಾರಣಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಬಾರಿ ಪವನ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆದಾಗ ಆ ಕಾರ್ಯಕ್ರಮದಲ್ಲಿ ಕರ್ನಾಟಕದ ಸಚಿವ ಈಶ್ವರ್ ಖಂಡ್ರೆ ಅವರು ವಿಶೇಷ ಅತಿಥಿಯಾಗಿ ಭಾಗಿ ಆಗಿದ್ದರು.
ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾಕ್ಕೆ ಅನುಮತಿ ತಿರಸ್ಕರಿಸಿದ ತೆಲಂಗಾಣ ಸರ್ಕಾರ
ಇಂದು ಸಂಜೆ 6 ಗಂಟೆ ಸುಮಾರಿಗೆ ಕಾರ್ಯಕ್ರಮ ಪ್ರಾರಂಭ ಆಗಲಿದ್ದು, 10 ರವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿಯೇ ಟ್ರೈಲರ್ ಬಿಡುಗಡೆ ಸಹ ಆಗಲಿದೆ. ‘ಓಜಿ’ ಸಿನಿಮಾವನ್ನು ಸುಜಿತ್ ನಿರ್ದೇಶನ ಮಾಡಿದ್ದಾರೆ. ಇದೊಂದು ಗ್ಯಾಂಗ್ಸ್ಟರ್ ಕತೆಯನ್ನು ಒಳಗೊಂಡಿದೆ. ಸಿನಿಮಾಕ್ಕೆ ಡಿವಿವಿ ದಾನಯ್ಯ ಬಂಡವಾಳ ತೊಡಗಿಸಿದ್ದಾರೆ. ಸಿನಿಮಾಕ್ಕೆ ತಮನ್ ಸಂಗೀತ ನೀಡಿದ್ದಾರೆ. ‘ಓಜಿ’ ಸಿನಿಮಾನಲ್ಲಿ ಪವನ್ ಕಲ್ಯಾಣ್ ಮಗನೂ ಸಹ ನಟಿಸಿದ್ದಾರೆ ಎನ್ನಲಾಗುತ್ತಿದೆ. ಪವನ್ ಅವರ ಈ ಹಿಂದಿನ ಸಿನಿಮಾ ‘ಹರಿ ಹರ ವೀರ ಮಲ್ಲು’ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಆದರೆ ‘ಓಜಿ’ ಸಿನಿಮಾ ಮೇಲೆ ಪವನ್ ಅವರಿಗೆ ಭಾರಿ ನಿರೀಕ್ಷೆ ಇದೆ, ಈ ಹಿಂದೆ ಚುನಾವಣೆ ಪ್ರಚಾರದ ಸಮಯದಲ್ಲಿ ‘ಓಜಿ’ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಪವನ್ ಆಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




