ನಟ-ರಾಜಕಾರಣಿ ಪವನ್​ ಕಲ್ಯಾಣ್​ಗೆ ಕೊರೊನಾ ಪಾಸಿಟಿವ್​; ಆಸ್ಪತ್ರೆಗೆ ದಾಖಲು

ಪವನ್​ ಕಲ್ಯಾಣ್​ ವಕೀಲ್​ ಸಾಬ್​ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. ಈ ಚಿತ್ರದ ಪ್ರಚಾರಕ್ಕಾಗಿ ಅವರು ಸಾಕಷ್ಟು ಸುತ್ತಾಟ ನಡೆಸಿದ್ದರು. ಪರಿಣಾಮ ಪವನ್​ ಕಲ್ಯಾಣ್​ ಅವರ ಜತೆ ಇದ್ದ ಸಿಬ್ಬಂದಿಗೆ ಕೊವಿಡ್​ ಪಾಸಿಟಿವ್​ ವರದಿ ಬಂದಿತ್ತು.

ನಟ-ರಾಜಕಾರಣಿ ಪವನ್​ ಕಲ್ಯಾಣ್​ಗೆ ಕೊರೊನಾ ಪಾಸಿಟಿವ್​; ಆಸ್ಪತ್ರೆಗೆ ದಾಖಲು
ಪವನ್​ ಕಲ್ಯಾಣ್​ - ವಕೀಲ್​ ಸಾಬ್​ ಸಿನಿಮಾ ಪೋಸ್ಟರ್​

ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ಟಾಲಿವುಡ್​ ನಟ ಪವನ್​ ಕಲ್ಯಾಣ್​ ಸಿಬ್ಬಂದಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಹೋಂ ಕ್ವಾರಂಟೈನ್​ ಆಗಿದ್ದರು. ಈಗ ಅವರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ. ಪವನ್​ ಕಲ್ಯಾಣ್​ ನಟನೆಯ ವಕೀಲ್​ ಸಾಬ್​ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. ಈ ಚಿತ್ರದ ಪ್ರಚಾರಕ್ಕಾಗಿ ಅವರು ಸಾಕಷ್ಟು ಸುತ್ತಾಟ ನಡೆಸಿದ್ದರು. ಪರಿಣಾಮ ಪವನ್​ ಕಲ್ಯಾಣ್​ ಅವರ ಜತೆ ಇದ್ದ ಸಿಬ್ಬಂದಿಗೆ ಕೊವಿಡ್​ ಪಾಸಿಟಿವ್​ ವರದಿ ಬಂದಿತ್ತು. ಇದು ಪವನ್​ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ, ಅವರು ಹೋಂ ಕ್ವಾರಂಟೈನ್​ ಆಗಿದ್ದರು. ಈಗ ಪವನ್​ ಕಲ್ಯಾಣ್​ಗೂ ಕೊರೊನಾ ಬಂದಿರುವುದರಿಂದ​ ಆಸ್ಪತ್ರೆಗೆ ಶಿಫ್ಟ್​ ಆಗಿದ್ದಾರೆ. ತಜ್ಞರ ತಂಡ ಅವರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಲೋಕಸಭಾ ಉಪಚುನಾವಣೆಯಲ್ಲಿ ತಿರುಪತಿ ಕ್ಷೇತ್ರದಲ್ಲಿ ಜನಸೇನಾ ಪಕ್ಷ ಸ್ಪರ್ಧೆ ಮಾಡುತ್ತಿದೆ. ಶನಿವಾರ (ಏಪ್ರಿಲ್ 17) ಇಲ್ಲಿ ಮತದಾನ ಕೂಡ ನಡೆಯುತ್ತಿದೆ. ಹೀಗಾಗಿ ಪವನ್​ ಈ ತಿಂಗಳ ಆರಂಭದಲ್ಲಿ ಅಲ್ಲಿಗೆ ತೆರಳಿ ಪ್ರಚಾರ ಕೂಡ ನಡೆಸಿದ್ದರು. ನಂತರ ಸಿನಿಮಾ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ವೇಳೆ ಪವನ್​ ಕಲ್ಯಾಣ್​ ಸಾಕಷ್ಟು ಜನರ ಸಂಪರ್ಕಕ್ಕೆ ಬಂದಿದ್ದರು. ನಂತರದ ದಿನಗಳಲ್ಲಿ ಪವನ್​ ಕಲ್ಯಾಣ್​ಗೆ ಜ್ವರ ಹಾಗೂ ಮೈಕೈ ನೋವು ಕಾಣಿಸಿಕೊಂಡಿತ್ತು.

ಪವನ್​ ಕಲ್ಯಾಣ್​ ನಟನೆಯ ವಕೀಲ್​ ಸಾಬ್​ ಚಿತ್ರ ಏಪ್ರಿಲ್​ 9ರಂದು ತೆರೆಗೆ ಬಂದಿತ್ತು. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಕೊರೊನಾ ಅಬ್ಬರದ ನಡುವೆಯೂ ಸಿನಿಮಾ ಇಷ್ಟೊಂದು ಕಲೆಕ್ಷನ್​ ಮಾಡುತ್ತಿರುವುದಕ್ಕೆ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂಭ್ರಮಾಚರಣೆ ಜೋರಾಗಿದೆ.

ಇದನ್ನೂ ಓದಿ: Coronavirus Live Updates: ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಕೊರೊನಾ ಸೋಂಕು ದೃಢ

Click on your DTH Provider to Add TV9 Kannada